ನಕಲಿ ಜಿಎಸ್‌ಟಿ ಬಿಲ್‌, ರೆಡಿಮೇಡ್ ಬಟ್ಟೆ ಮಾರಾಟ ನೆಪದಲ್ಲಿ ಗಾಂಜಾ ದಂಧೆ, ಪೊಲೀಸರು ಬೇಧಿಸಿದ್ದು ಹೇಗೆ ಗೊತ್ತಾ?

Published : Jul 30, 2025, 06:50 AM IST
Police jeep

ಸಾರಾಂಶ

ನಕಲಿ ಜಿಎಸ್‌ಟಿ ಬಿಲ್‌ಗಳನ್ನು ಬಳಸಿಕೊಂಡು ಹೊರ ರಾಜ್ಯಗಳಿಂದ ಗಾಂಜಾವನ್ನು ಸಾಗಿಸುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ. 53.5 ಕೆಜಿ ಗಾಂಜಾ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದೇಶದ ವಿವಿಧ ನಗರಗಳಿಗೆ ಕೊರಿಯರ್ ಮೂಲಕ ಗಾಂಜಾ ಪೂರೈಸುತ್ತಿದ್ದರು.

ಬೆಂಗಳೂರು (ಜುಲೈ30): ನಕಲಿ ಜಿಎಸ್‌ಟಿ ಬಿಲ್ ಸೃಷ್ಟಿಸಿ ಸಿದ್ಧ ಉಡುಪು ನೆಪದಲ್ಲಿ ಹೊರ ರಾಜ್ಯದಿಂದ ಗಾಂಜಾ ತಂದು ಬಳಿಕ ದೇಶದ ಇತರೆ ನಗರಗಳಿಗೆ ಕೊರಿಯರ್ ಮೂಲಕ ಪೂರೈಸುತ್ತಿದ್ದ ಗ್ಯಾಂಗ್‌ವೊಂದನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ದೀಪಕ್ ಕುಮಾರ್ ಅಲಿಯಾಸ್ ದೀಪಕ್ ಮೆಹ್ತಾ, ಅಮರನಾಥ್‌ ಜೈಸ್ವಾಲ್‌ ಅಲಿಯಾಸ್ ಮಿಶ್ರಾ, ರಾಜಸ್ಥಾನದ ಶಂಕರ್ ಲಾಲ್ ಅಲಿಯಾಸ್ ಅಜಯ್‌, ಒಡಿಶಾದ ಅನಿರುದ್ಧ್ ದಲೈ ಅಲಿಯಾಸ್ ಸೋನು, ಜಾರ್ಖಂಡ್‌ನ ಬಸಂತ್ ಕುಮಾರ್‌ ಹಾಗೂ ಅಜಿತ್ ಕುಮಾರ್ ಸಿಂಗ್ ಅಲಿಯಾಸ್ ವಿಫುಲ್ ಬಾಯ್ ಬಂಧಿತರು. ಆರೋಪಿಗಳಿಂದ 53.5 ಕೆಜಿ ಗಾಂಜಾ, 9 ಮೊಬೈಲ್‌, 10 ಸಿಮ್ ಕಾರ್ಡ್‌ಗಳು, ಲ್ಯಾಪ್‌ಟಾಪ್ ಹಾಗೂ ಸರಕು ಸಾಗಾಣೆ ಆಟೋ ಸೇರಿ 42 ಲಕ್ಷ ರು. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ.

ಕಾಟನ್‌ಪೇಟೆಯ ಪಶುವೈದ್ಯ ಆಸ್ಪತ್ರೆ ಸಮೀಪ ಗೂಡ್ಸ್ ಆಟೋದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುವ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ಇ.ಯರ್ರಿಸ್ವಾಮಿ ನೇತೃತ್ವದ ದಾಳಿ ನಡೆಸಿದೆ.

ಗಾಂಜಾ ಮಾರಾಟ ದಂಧೆ ಹೇಗೆ?

ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದಿಂದ ಬಸ್ ಹಾಗೂ ಕಾರ್ಗೋ ಸೇವೆಗಳ ಮೂಲಕ ಬೆಂಗಳೂರಿಗೆ ಗಾಂಜಾ ಸಾಗಿಸಿ ಬಳಿಕ ಇಲ್ಲಿಂದ ದೆಹಲಿ, ಪುಣೆ ಹಾಗೂ ಹೈದರಾಬಾದ್ ಸೇರಿ ಇತರೆಡೆಗೆ ಆರೋಪಿಗಳು ಗಾಂಜಾವನ್ನು ಪೂರೈಸುತ್ತಿದ್ದರು. ಇದಕ್ಕಾಗಿ ನಕಲಿ ಜಿಎಸ್‌ಟಿ ಬಿಲ್‌ಗಳನ್ನು ದಂಧೆಕೋರರು ಸೃಷ್ಟಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆರೋಪಿಗಳ ಪೈಕಿ ಬಹುತೇಕರಿಗೆ ಕೊರಿಯರ್ ಕಂಪನಿಗಳಲ್ಲಿ ಕೆಲಸ ಮಾಡಿದ್ದ ಅನುಭವವಿತ್ತು. ಇದೇ ಕೊರಿಯರ್ ಕಂಪನಿಗಳ ಮೂಲಕ ಅವರೆಲ್ಲ ಪರಸ್ಪರ ಪರಿಚಿತರಾಗಿ ಗಾಂಜಾ ಮಾರಾಟಕ್ಕೆ ಸಂಘಟಿತವಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಬಂಧನಕ್ಕೂ ಮುನ್ನ ಸಹ ದೆಹಲಿಯಲ್ಲಿ ಕಾರ್ಗೋ ಕಂಪನಿಯಲ್ಲಿ ಬಿಹಾರ ಮೂಲದ ದೀಪಕ್ ನೌಕರಿಯಲ್ಲಿದ್ದ. ಹಾಗಾಗಿ ಗಾಂಜಾ ಸಾಗಾಣಿಕೆಗೆ ನಕಲಿ ಜಿಎಸ್‌ಟಿ ಬಿಲ್ ಸೃಷ್ಟಿಯಲ್ಲಿ ಆತನ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಲಾಗಿದೆ.

ದೆಹಲಿಯಲ್ಲಿ ತನ್ನ ಕಂಪನಿಯ ಅಸಲಿ ಬಿಲ್ ಅನ್ನು ತನ್ನ ಸ್ನೇಹಿತರಿಗೆ ದೀಪಕ್ ಕಳುಹಿಸುತ್ತಿದ್ದ. ಬಳಿಕ ಆ ಬಿಲ್‌ಗೆ ನಕಲಿ ಬಿಲ್ ಸೃಷ್ಟಿಸಿ ಸಿದ್ಧಉಡುಪು ಎಂದು ಹೇಳಿ ಗಾಂಜಾವನ್ನು ಬೆಂಗಳೂರಿನಿಂದ ಬೇರೆ ನಗರಗಳಿಗೆ ಆರೋಪಿಗಳು ಕಳುಹಿಸುತ್ತಿದ್ದರು. ಈ ಜಾಲದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಕಾಟನ್‌ಪೇಟೆಯ ಪಶು ಆಸ್ಪತ್ರೆ ಬಳಿ ಆಟೋದಲ್ಲಿ ಗಾಂಜಾ ತುಂಬಿಕೊಂಡು ಹೋಗುವಾಗ ದಾಳಿ ನಡೆಸಿ ರಾಜಸ್ಥಾನದ ಶಂಕರ್ ಲಾಲ್ ಅಲಿಯಾಸ್ ಅಜಯ್‌ ಹಾಗೂ ಒಡಿಶಾದ ಅನಿರುದ್ಧ್ ದಲೈನನ್ನು ಬಂಧಿಸಿದರು. ಬಳಿಕ ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಇನ್ನುಳಿದವರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಆರೋಪಿಗಳ ಬಂಧನಕ್ಕೆ ದೆಹಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಜಾರ್ಖಂಡ್‌ ರಾಜ್ಯದ ಪೊಲೀಸರು ಹಾಗೂ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

6 ತಿಂಗಳಿಂದ ಕಾರ್ಯಾಚರಣೆ

ಕಳೆದ ಆರೇಳು ತಿಂಗಳಿಂದ ಈ ಜಾಲವು ಗಾಂಜಾ ಸಾಗಾಣಿಕೆ ಕಾರ್ಯಾಚರಣೆ ನಡೆಸಿದ ಬಗ್ಗೆ ಮಾಹಿತಿ ಇದೆ. ಈ ಜಾಲದ ಶೋಧನಾ ಕಾರ್ಯ ಮುಂದುವರಿದಿದ್ದು, ಮತ್ತಷ್ಟು ಗಾಂಜಾ ಜಪ್ತಿಯಾಗಬಹುದು. ಈ ಆರೋಪಿಗಳ ಪೈಕಿ ಬಿಹಾರದ ಅಮರನಾಥ್ ಜೈಸ್ವಾಲ್ ವಿರುದ್ಧ ಈ ಹಿಂದೆ ಬಿಹಾರದಲ್ಲಿ ಗಾಂಜಾ ಪ್ರಕರಣ ದಾಖಲಾಗಿತ್ತು. ಇನ್ನುಳಿದವರು ಇದೇ ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!