ಉದ್ಯಮಿಯ ಮನೆಯಲ್ಲಿ ಬಾಣಸಿಗನಾಗಿದ್ದ ಆರೋಪಿ| ಡಿಜಿಟಲ್ ಲಾಕರನ್ನೇ ಕದ್ದ| ಸ್ಕೂರ್ ಡ್ರೈವರ್ ಮುರಿದರೂ ತೆರೆಯದ ಲಾಕರ್| ರೈಲಿನಲ್ಲಿ ಊರಿಗೆ ಪರಾರಿಗೆ ಯತ್ನ| ವಿಮಾನದಲ್ಲಿ ತೆರಳಿ ರೈಲ್ವೆ ನಿಲ್ದಾಣದಲ್ಲಿ ಬಂಧನ|
ಬೆಂಗಳೂರು(ಅ.19): ತಾನು ಕೆಲಸಕ್ಕಿದ್ದ ಮನೆಯಲ್ಲಿಯೇ 1.30 ಕೋಟಿ ಮೌಲ್ಯದ ಚಿನ್ನಾಭರಣದ ಡಿಜಿಟಲ್ ಲಾಕರ್ ಸಮೇತ ಪರಾರಿಯಾಗಿದ್ದ ಕಳ್ಳನೊಬ್ಬ ತನ್ನ ಊರು ತಲುಪುವ ಮೊದಲೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಪಶ್ಚಿಮ ಬಂಗಾಳದ ಮೂಲದ ಕೈಲಾಸ್ ದಾಸ್ (35) ಎಂಬಾತನನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿ, ಆರೋಪಿಯಿಂದ 1.30 ಕೋಟಿ ಮೌಲ್ಯದ ವಜ್ರದ ಹರಳು, 1.731 ಕೇಜಿ ಚಿನ್ನಾಭರಣ 2.536 ಕೇಜಿ ಬೆಳ್ಳಿಯ ಕಾಮಧೇನು ವಿಗ್ರಹ, 8.50 ಲಕ್ಷ ನಗದು, 3 ಪಾಸ್‌ಪೋರ್ಟ್, ದುಬಾರಿ ಬೆಲೆಯ 2 ಕೈಗಡಿಯಾರ ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಜೆ.ಪಿ.ನಗರ 3ನೇ ಹಂತ 9ನೇ ಅಡ್ಡರಸ್ತೆ ರಾಜೇಶ್ ಬಾಬು ಎಂಬುವರ ಮನೆಯಲ್ಲಿ 6 ವರ್ಷಗಳಿಂದ ಆರೋಪಿ ಬಾಣಸಿಗನಾಗಿದ್ದ. ಆರೋಪಿಗೆ ಉಳಿದುಕೊಳ್ಳಲು ಮನೆಯ ನೆಲ ಮಹಡಿಯಲ್ಲಿ ಕೊಠಡಿನೀಡಲಾಗಿತ್ತು. ಕುಟುಂಬಸ್ಥರ ನಂಬಿಕೆಗಳಿಸಿದ್ದ ಕೈಲಾಸ್‌ಗೆ ಮನೆಯಲ್ಲಿ ಓಡಾಡಿಕೊಂಡಿರಲು ಮುಕ್ತ ಅವಕಾಶವಿತ್ತು.
ರಾಜೇಶ್ ಅವರ ಕುಟುಂಬದ ಸದಸ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದರು. ಮನೆಯಲ್ಲಿಯೇ ಒಬ್ಬನೇ ಇದ್ದ ಕೈಲಾಸ್ ಅ.9ರ ರಾತ್ರಿ ಮಾಲಿಕರ ಬೆಡ್ ರೂಮ್‌ಗೆ ತೆರಳಿ .1.30 ಕೋಟಿ ಮೌಲ್ಯದ ಚಿನ್ನಾಭರಣ ಇಟ್ಟಿದ್ದ ಡಿಜಿಟಲ್ ಲಾಕರ್ ತೆರೆಯಲು ಪ್ರಯತ್ನಿಸಿದ್ದ. ಲಾಕರ್ ತೆರೆಯಲು ಸಾಧ್ಯವಾಗದಿದ್ದಾಗ ಲಾಕರ್ ಕದ್ದು ತನ್ನ ಕೊಠಡಿಯಲ್ಲಿ ಇಟ್ಟುಕೊಂಡಿದ್ದ. 2 ದಿನ ಕೆಲಸ ಮಾಡಿಕೊಂಡಿದ್ದ ಕೈಲಾಸ್, ಅ.10ರ ಬೆಳಗ್ಗೆ ಮಾಲಿಕರಿಗೆ ತಿಳಿಸದೆ ಲಾಕರ್ ಸಮೇತ ಪರಾರಿಯಾಗಿದ್ದ.
ಪತ್ನಿಯೊಂದಿಗೆ ಸಲುಗೆ ಬೇಡ ಎಂದಿದ್ದಕ್ಕೆ ಸಿಲಿಂಡರ್ ಎತ್ತಿಹಾಕಿ ಹತ್ಯೆಗೈದ ಗೆಳೆಯ..!
ಏಳೆಂಟು ಗಂಟೆ ಕಾಲ ಬಾಣಸಿಗ ಕಾಣದೆ ಇದ್ದಾಗ ಅನುಮಾನ ಬಂದು ಮಾಲಿಕರು ಮನೆ ಪರಿಶೀಲಿಸಿದಾಗ ಚಿನ್ನಾಭರಣವಿದ್ದ ಲಾಕರ್ ಕಳವಾಗಿರುವುದು ಗೊತ್ತಾಗಿದೆ. ಈ ಕುರಿತು ಜೆ.ಪಿ.ನಗರ ಠಾಣೆಗೆ ರಾಜೇಶ್ ದೂರು ನೀಡಿದ್ದರು. ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಆರೋಪಿ ಬಂಧನಕ್ಕೆ ಬಲೆಬೀಸಿತ್ತು.
ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿಲು ಯತ್ನ: ಆರೋಪಿ ಪೊಲೀಸರಿಗೆ ತಪ್ಪಿಸಿಕೊಳ್ಳುವ ಸಲುವಾಗಿ ಮೊಬೈಲ್ ಸ್ವಿಚ್ ಆಫ್ ಮಾಡಿ ಬಸ್‌ನಲ್ಲಿ ಮೈಸೂರಿಗೆ ತೆರಳಿ 2 ದಿನ ಲಾಡ್ಜ್‌ವೊಂದರಲ್ಲಿ ತಂಗಿದ್ದ. ಸ್ಕೂರ್ ಡ್ರೈವರ್‌ಗಳಿಂದ ಡಿಜಿಟಲ್ ಲಾಕರ್ ತೆರೆಯಲು ಯತ್ನಿಸಿದ್ದ. ಸ್ಕೂ್ರಡ್ರೈವರ್ ಮುರಿದರೂ ಲಾಕರ್ ಮಾತ್ರ ತೆರೆಯಲು ಸಾಧ್ಯವಾಗಿರಲಿಲ್ಲ. ಕೊನೆಗೆ ಊರಿಗೆ ಹೋಗಲು ನಿರ್ಧರಿಸಿ ಮೈಸೂರು ನಗರದಿಂದ ಬೆಂಗಳೂರಿಗೆ ಪ್ರಯಾಣಿಸಿ ಯಶವಂತಪುರ ರೈಲು ನಿಲ್ದಾಣದಿಂದ ಪಶ್ಚಿಮ ಬಂಗಾಳಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ.
ವಿಮಾನದಲ್ಲಿ ತೆರಳಿ ರೈಲ್ವೆ ನಿಲ್ದಾಣದಲ್ಲಿ ಬಂಧನ!
ಆರೋಪಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಅಪರಿಚಿತರ ಮೊಬೈಲ್ ಪಡೆದು ಪತ್ನಿಗೆ ಕರೆ ಮಾಡುತ್ತಿದ್ದ. ಪತ್ನಿಯ ಮೊಬೈಲ್‌ಗೆ ಬರುವ ಒಳ-ಹೊರ ಕರೆಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ಆರೋಪಿ ಊರಿಗೆ ಹೋಗಲು ನಿರ್ಧರಿಸಿ ರೈಲು ಏರಿದ್ದ. ಅಲ್ಲದೆ, ಮಾರ್ಗ ಮಧ್ಯೆ ರೈಲ್ವೆ ಟಿಕೆಟ್ ಕಲೆಕ್ಟರ್‌ವೊಬ್ಬರ ಮೊಬೈಲ್ ಬಳಸಿದ್ದ. ಇದನ್ನು ತಿಳಿದ ಪೊಲೀಸರು, ರೈಲ್ವೆ ಟಿಟಿಯನ್ನು ಸಂಪರ್ಕಿಸಿ, ಕೈಲಾಸ್ ಇರುವುದನ್ನು ಖಚಿತ ಪಡಿಸಿಕೊಂಡಿದ್ದರು. ಆರೋಪಿ ಪಶ್ಚಿಮ ಬಂಗಾಳ ತಲುಪುವ ಮೊದಲೇ ಪೊಲೀಸರು ವಿಮಾನದ ಮೂಲಕ ಅಲ್ಲಿನ ರೈಲ್ವೆ ನಿಲ್ದಾಣ ತಲುಪಿ, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.