8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ!

By Santosh NaikFirst Published Nov 1, 2022, 4:07 PM IST
Highlights

ಆರೋಪಿ ಸಲ್ಮಾನ್ ಅಹ್ಮದ್ ನಫೀಸ್ ಅನ್ಸಾರಿ, ಬಾಲಕಿ ಸಲ್ಮಾನ್ ಹಫೀಜ್ ಎಂದು ಆತನ ಹೆಸರನ್ನು ಉಲ್ಲೇಖಿಸಿದ್ದಾಳೆ. ಅನ್ಸಾರಿ  ಅವರಿಗೆ 7 ಮತ್ತು 9 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದ ನಡುವೆಯೂ ಈ ಕೃತ್ಯ ಎಸಗಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಡಿಯಲ್ಲಿ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
 

ಮುಂಬೈ (ನ.1): ಟ್ಯೂಷನ್‌ಗಾಗಿ ತನ್ನ ಮನೆಗೆ ಬರುತ್ತಿದ್ದ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನಿಗೆ ಮುಂಬೈನ ವಿಶೇಷ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಯಾಗಿರುವ ಸಲ್ಮಾನ್‌ ಅಹ್ಮದ್‌ ನಫೀಸ್‌ ಅನ್ಸಾರಿ, ಮುಂಬೈನ ಉಪನಗರ ಕುರ್ಲಾ ಪ್ರದೇಶದ ನಿವಾಸಿಯಾಗಿದ್ದ. ಇನ್ನೊಂದೆಡೆ ಬಾಲಕಿ ಆತನ ಹೆಸರನ್ನು ಸಲ್ಮಾನ್‌ ಹಫೀಜ್‌ ಎಂದು ಉಲ್ಲೇಖಿಸಿದ್ದಾಳೆ. ಅವರಿಗೆ 7 ಹಾಗೂ 9 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ವಿಧಿಸುವ ವೇಳೆ ಮಾತನಾಡಿದ ವಿಶೇಷ ನ್ಯಾಯಾಧೀಶೆ ಸೀಮಾ ಜಾಧವ್‌, 'ಶಿಕ್ಷಕರಾದವರು ರಕ್ಷಕರಾಗಿ ಕಾರ್ಯನಿರ್ವಹಿಸಬೇಕು. ಆರೋಪಿಗಳ ಇಂತಹ ಹೇಯ ಕೃತ್ಯಗಳು ಸಂತ್ರಸ್ತೆಯ ಮೇಲೆ ಜೀವಮಾನವಿಡೀ ಮಾನಸಿಕ ಮತ್ತು ಭಾವನಾತ್ಮಕ ಪರಿಣಾಮ ಬೀರುತ್ತವೆ. 8 ವರ್ಷದ ಇಳಿವಯಸ್ಸಿನಲ್ಲಿ ಮಗುವನ್ನು ಹಿಂಸೆ ಮಾಡಿ ಆಕೆಯ ಬದುಕಿನಲ್ಲಿ ಶಾಸ್ವತ ಗಾಯದ ಗುರುತು ಮೂಡಿಸಿದ್ದಾನೆ.  ಮಗು ತನ್ನ ಜೀವನವನ್ನು ಅರ್ಥಮಾಡಿಕೊಳ್ಳಲು ಮತ್ತು ಬದುಕಲು ಪ್ರಾರಂಭಿಸಿದಾಗ ಆರೋಪಿಯು ಈ ಅಪರಾಧವನ್ನು ಎಸಗಿದ್ದಾನೆ. ತಾನು ನಂಬಿದಂಥ ವ್ಯಕ್ತಿಯಿಂದ ಇಂಥ ಕೃತ್ಯಗಳಾದಲ್ಲಿ, ಜೀವನವನ್ನು ಧನಾತ್ಮಕವಾಗಿ ನೋಡಬೇಕು ಎನ್ನುವ ಮಗಿವಿನ ಗ್ರಹಿಕೆಯೇ ಬದಲಾಗಿ ಹೋಗುತ್ತದೆ' ಎಂದು ಹೇಳಿದ್ದಾರೆ.

"ಮಹಿಳೆಯರ ಮೇಲಿನ ಹಿಂಸಾಚಾರವು ಬಹುಶಃ ಅತ್ಯಂತ ನಾಚಿಕೆಗೇಡಿನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಮತ್ತು ಇದು ಬಹುಶಃ ಅತ್ಯಂತ ವ್ಯಾಪಕವಾಗಿದೆ. ಇದು ಭೌಗೋಳಿಕತೆ, ಸಂಸ್ಕೃತಿ ಅಥವಾ ಸಂಪತ್ತಿನ ಯಾವುದೇ ಗಡಿಗಳನ್ನು ತಿಳಿದಿಲ್ಲ. ಇದು ಎಲ್ಲಿಯವರೆಗೆ ಮುಂದುವರಿಯುತ್ತದೆಯೋ ಅಲ್ಲಿಯವರೆಗೆ, ನಾವು ಸಮಾನತೆಯ ಕಡೆಗೆ ಅಭಿವೃದ್ಧಿಯ ಕಡೆಗೆ, ಶಾಂತಿಯ ಕಡೆಗೆ ನಿಜವಾದ ಪ್ರಗತಿಯನ್ನು ಸಾಧಿಸುತ್ತಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ.' ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ  ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರನ್ನು ಉಲ್ಲೇಖಿಸಿ ಹೇಳಿದೆ.
ಆ ಬಾಲಕಿಗೆ ಬರೀ ಎಂಟು ವರ್ಷ. ಇನ್ನು ಆರೋಪಿಯಾಗುವ ವ್ಯಕ್ತಿ ಕಲಿಯದೇ ಇದ್ದವನಲ್ಲ. ಶಿಕ್ಷಕನಾಗಿರುವ ವ್ಯಕ್ತಿ. ಇತರ ವೃತ್ತಿಗಳ ಮೇಲೆ ಪ್ರಭಾವ ಬೀರುವ ಏಕೈಕ ವೃತ್ತಿ ಎಂದರೆ ಅದು ಬೋಧಕ ವೃತ್ತಿ.  ಭವಿಷ್ಯದ ಪೀಳಿಗೆಯ ಪ್ರಯೋಜನಕ್ಕಾಗಿ ಯುವಜನರ ಭವಿಷ್ಯದ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಇದು ಹೊಂದಿದೆ ಎಂದು ಕೋರ್ಟ್‌ ಮತ್ತಷ್ಟು ವಿವರಣೆ ನೀಡಿದೆ.

ಏನಿದು ಪ್ರಕರಣ: ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಹೇಳಲಾಗಿರುವ ಶಿಕ್ಷಕನಿಂದ ಬಾಲಕಿ ದಿನಕ್ಕೆ ಎರಡು ಬಾರಿ ಅರೇಬಿಕ್‌ ಕಲಿಯುತ್ತಿದ್ದಳು 2019ರ ಮೇ 6 ರಂದು ಆಕೆ ಕಲಿಯುವ ನಿಟ್ಟಿನಲ್ಲಿ ಅವರ ಮನೆಗೆ ಹೋದಾಗ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಯಾರಿಗಾದರೂ ಹೇಳಿದ್ದಲ್ಲಿ ಭೀಕರ ಪರಿಣಾಮ ಎದುರಾಗಲಿದೆ ಎಂದು ಆಕೆಗೆ ಬೆದರಿಕೆ ಹಾಕಿದ್ದ. ಮನೆಗೆ ಮರಳಿದ್ದ ಹುಡುಗಿ ತಾಯಿಗೆ ಏನನ್ನೂ ಹೇಳಿರಲಿಲ್ಲ. ಆದರೆ, ಮಧ್ಯಾಹ್ನ ತರಗತಿಗೆ ಹೋಗುವಂತೆ ತಾಯಿ ಕೇಳಿದಾಗ ನಿರಾಕರಿಸಿ ನಡೆದಿದ್ದನ್ನು ಬಹಿರಂಗಪಡಿಸಿದ್ದಾಳೆ. ನಂತರ ಆಕೆಯ ತಾಯಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪೋಕ್ಸೋ ಕಾಯ್ದೆಗಿಂತ ವೈಯಕ್ತಿಕ ಕಾನೂನು ಮೇಲಲ್ಲ: ಹೈಕೋರ್ಟ್‌

ಕೋರ್ಟ್‌ನಲ್ಲಿ ಭರ್ಜರಿ ವಾದ: ಆರೋಪಿ ಪರ ವಾದ ಮಂಡಿಸಿದ ವಕೀಲೆ ಶಬಾನಾ ಸಯ್ಯದ್, ಆರೋಪಿ ದೇವಬಂದಿ ಮುಸ್ಲಿಂ ಆಗಗಿದ್ದರೆ,  ಬಾಲಕಿಯ ಕುಟುಂಬ ಸುನ್ನಿ ಪಂಗಡದವರು ಎಂದು ವಾದಿಸಿದರು. ದೇವಬಂದಿ ಮತ್ತು ಸುನ್ನಿ ಪಂಗಡಗಳ ನಡುವೆ ಕೋಮು ವಿವಾದವಿದ್ದು, ಆರೋಪಿಯ ಮದರಸಾವನ್ನು ಮುಚ್ಚುವ ಸಲುವಾಗಿ ಆತನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸಯ್ಯದ್ ನ್ಯಾಯಾಲಯದ ಮುಂದೆ ವಾದಿಸಿದ್ದರು.

Crime News: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಬಂಧನ

ಅರೋಪಿ ಹಾಗೂ ಸಂತ್ರಸ್ಥ ಬಾಲಕಿ ಬೇರೆ ಬೇರೆ ಪಂಗಡದವರು ಇರಬಹುದು. ಆದರೆ, ಇಬ್ಬರೂ ಮುಸ್ಲೀಮರೇ ತಾನೇ. ಇಲ್ಲಿ ಕೋಮು ವಿವಾದದ  ಕಾರಣವಲ್ಲ ಎನ್ನುವುದು ತೋರಿದೆ. ಅದಲ್ಲದೆ, ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಆರೋಪ ಮಾಡಲು ತಾಯಿಯೊಬ್ಬಲು ತನ್ನ ಮಗಳನ್ನು ಅದರಲ್ಲೂ ತನ್ನ ಪುಟ್ಟ ಬಾಲಕಿಯನ್ನು ಬಳಸಿಕೊಳ್ಳುವುದಿಲ್ಲ ಎಂದು ಕೋರ್ಟ್‌ ಹೇಳಿದೆ. ಬಾಲಕಿ ಮತ್ತು ಆಕೆಯ ಕುಟುಂಬ ಸದಸ್ಯರು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರು ಎಂದು ಆರೋಪಿಗಳು ಆರೋಪಿಸಿದ್ದಾರೆ. ಆದಾಗ್ಯೂ, ನ್ಯಾಯಾಲಯವು ಈ ವಾದಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿತು ಮತ್ತು ಹುಡುಗಿ ಪಶ್ಚಿಮ ಬಂಗಾಳದಲ್ಲಿ ಜನಿಸಿದಳು ಎಂದು ಹೇಳಿದೆ.
 

click me!