
ಬೆಂಗಳೂರು(ಮೇ.18): ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣದ ಆರೋಪಿಯ ಅನುಮಾನಾಸ್ಪದ ಸಾವಿನ ಪ್ರಕರಣ ಭೇದಿಸಿರುವ ಸಂಪಂಗಿರಾಮನಗರ ಠಾಣೆ ಪೊಲೀಸರು ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಒಡಿಶಾ ಮೂಲದ ರಂಜಿತ್ ಪ್ರಧಾನ್(30) ಮತ್ತು ರಮೇಶ್(32) ಬಂಧಿತರು. ಮೇ 10ರಂದು ಬೆಳಗ್ಗೆ ಮಿಷನ್ ರಸ್ತೆಯ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಅಪರಿಚಿತನ ಮೃತದೇಹ ಪತ್ತೆಯಾಗಿತ್ತು. ಬಳಿಕ ಆ ಮೃತ ವ್ಯಕ್ತಿ ಕೆ.ಎಸ್.ಗಾರ್ಡನ್ ನಿವಾಸಿ ಸತ್ಯ(20) ಎಂಬುದು ಗೊತ್ತಾಗಿತ್ತು. ಕುಟುಂಬದವರು ಸತ್ಯನದು ಅಸಹಜ ಸಾವಲ್ಲ, ಇದು ಕೊಲೆ ಎಂದು ಆರೋಪಿಸಿದ್ದರು. ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: ಡುಮ್ಮಿ ಎಂದು ಹೀಳಾಯಿಸಿದ ಪತಿ, ನೇಣು ಬಿಗಿದುಕೊಂಡು ಶಿಕ್ಷಕಿ ಸಾವು
ಏನಿದು ಘಟನೆ?
ಬಂಧಿತ ಇಬ್ಬರು ಆರೋಪಿಗಳು ಒಂದೂವರೆ ವರ್ಷದ ಹಿಂದೆ ಕೆಲಸ ಅರಸಿ ಒಡಿಶಾದಿಂದ ಬೆಂಗಳೂರಿಗೆ ಬಂದಿದ್ದರು. ಸಂಪಂಗಿರಾಮನಗರದ ಮಿಷನ್ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡಿಕೊಂಡು, ರಾತ್ರಿ ಆ ಕಟ್ಟಡದಲ್ಲಿ ಮಲಗುತ್ತಿದ್ದರು. ಮೇ 9ರಂದು ತಡರಾತ್ರಿ ಸತ್ಯ ಮದ್ಯದ ಅಮಲಿನಲ್ಲಿ ಆ ನಿರ್ಮಾಣ ಹಂತದ ಕಟ್ಟಡಕ್ಕೆತೆರಳಿದ್ದಾನೆ. ಸತ್ಯನನ್ನು ಕಂಡ ಆರೋಪಿಗಳು, ಯಾರು ನೀನು ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೆ ಸತ್ಯ ಮತ್ತು ಆರೋಪಿಗಳ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಆರೋಪಿಗಳು ಸತ್ಯನನ್ನು ಜೋರಾಗಿ ನೂಕಿದ್ದಾರೆ.
ತುಂಡಾದ ವಿದ್ಯುತ್ ತಂತಿ ಮೇಲೆ ಬಿದ್ದು ಸಾವು:
ಈ ವೇಳೆ ರಸ್ತೆ ಬದಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಮೇಲೆ ಸತ್ಯ ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಆರೋಪಿಗಳು ಸತ್ಯನ ಮೃತದೇಹವನ್ನು ಪಕ್ಕದಲ್ಲೇ ನಿರ್ಮಾಣವಾಗುತ್ತಿದ್ದ ಮತ್ತೊಂದು ಕಟ್ಟಡದ ಮೆಟ್ಟಿಲ ಕೆಳಗೆ ಹಾಕಿ ಪರಾರಿಯಾಗಿದ್ದಾರೆ. ಮಾರನೇ ದಿನ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದ ಪೊಲೀಸರು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಹಾಸನ: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡರು:
ತನಿಖೆಗೆ ಇಳಿದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದರು. ಆದರೇ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸತ್ಯನ ಮೃತದೇಹ ಪತ್ತೆಯಾದ ಕಟ್ಟಡದ ಪಕ್ಕದ ನಿರ್ಮಾಣ ಹಂತದ ಕೆಲಸಗಾರರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಾರ್ಮಿಕರಾದ ರಂಜಿತ್ ಪ್ರಧಾನ್ ಮತ್ತು ರಮೇಶ್ ವರ್ತನೆ ಬಗ್ಗೆ ಅನುಮಾನ ಬಂದಿದೆ. ಈ ವೇಳೆ ಪೊಲೀಸ್ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ನಡೆದ ಘಟನೆ ವಿವರಿಸಿ, ತಪ್ಪೊಪ್ಪಿಕೊಂಡಿದ್ದಾರೆ.
ಪೋಕ್ಸೋ ಆರೋಪಿ ಕೊಲೆಯಾದ ಸತ್ಯ ತಮ್ಮದೇ ಏರಿಯಾದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಕಳೆದ ವರ್ಷ ಈ ವಿಚಾರ ಅಪ್ರಾಪ್ತೆ ಮನೆಯವರಿಗೆ ಗೊತ್ತಾಗಿ ಸತ್ಯನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಸತ್ಯ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ. ಇತ್ತೀಚೆಗೆ ಮತ್ತೆ ಆ ಅಪ್ರಾಪ್ತೆಯನ್ನು ಸಂಪರ್ಕಿಸಲು ಸತ್ಯ ಪ್ರಯತ್ನಿಸಿದ್ದ. ಈ ವಿಚಾರ ಆಕೆಯ ಪೋಷಕರಿಗೆ ಗೊತ್ತಾಗಿ ಸತ್ಯನ ಜತೆಗೆ ಜಗಳ ಮಾಡಿದ್ದರು. ಇದರ ಬೆನ್ನಲ್ಲೇ ಸತ್ಯ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಹೀಗಾಗಿ ಆತನ ಪೋಷಕರು ಅಪ್ರಾಪ್ರೆಯ ಕುಟುಂಬದ ಮೇಲೆ ಕೊಲೆ ಆರೋಪ ಮಾಡಿದ್ದರು. ಆದರೆ, ತನಿಖೆಯಲ್ಲಿ ಅಪ್ರಾಪ್ತೆಯ ಕುಟುಂಬದ ಪಾತ್ರವಿಲ್ಲ ಎಂಬುದು ತಿಳಿದು ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ