ಹಳ್ಳದಲ್ಲಿ ಮಹಿಳೆಯ ಮೃತದೇಹ ಪತ್ತೆ| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಯಲಬುರ್ತಿ ಗ್ರಾಮದಲ್ಲಿ ನಡೆದ ಘಟನೆ|
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೃತಳ ಪತಿ|
ಕುಷ್ಟಗಿ(ಜೂ.15): ತಾಲೂಕಿನ ಯಲಬುರ್ತಿ ಗ್ರಾಮದ ವ್ಯಕ್ತಿಯೊಬ್ಬ ತನ್ನ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಶನಿವಾರ ರಾತ್ರಿ ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಹಳ್ಳವೊಂದರಲ್ಲಿ ಶರಣವ್ವ ಶರಣಪ್ಪ ಮ್ಯಾಗೇರಿಯ (35) ಶವ ಪತ್ತೆಯಾಗಿದೆ. ಗ್ರಾಮದ ಬಸವರಾಜ ತಟ್ಟಿ(40) ಈ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಮದ್ಯದ ಅಮಲಿನಲ್ಲಿ ಪತ್ನಿಯ ಕತ್ತು ಕೊಯ್ದು ಕೊಲೆಗೈದ ಕುಡುಕ: ಅನಾಥವಾದ ಮಗು...!
ನನ್ನ ಪತ್ನಿ ಮತ್ತು ಬಸವರಾಜ ಅನೈತಿಕ ಸಂಬಂಧ ಹೊಂದಿದ್ದರು. ಇದನ್ನು ನಾನು ನೋಡಿದ್ದು ತಿಳಿದು, ಜೂ. 11ರಂದು ನನ್ನ ಪತ್ನಿ ಮನೆಯಿಂದ ರಾತ್ರಿ ಓಡಿ ಹೋಗಿದ್ದಳು. ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ಸಲ್ಲಿಸಿದ್ದೆ. ಆದರೆ ಶನಿವಾರ ಬೆಳಗಿನ ಜಾವ ಹಳ್ಳದಲ್ಲಿ ಪತ್ನಿಯ ಮೃತದೇಹ ಪತ್ತೆಯಾಗಿದ್ದು, ಬಸವರಾಜ ತಟ್ಟಿ ಪತ್ನಿಯನ್ನು ಕೊಲೆ ಮಾಡಿರುವ ಅನುಮಾನವಿದೆ ಎಂದು ಮೃತಳ ಪತಿ ಶರಣಪ್ಪ ನೀಡಿದ ದೂರಿನ ಮೇರೆಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸದ್ಯ ತಲೆ ಮರೆಸಿಕೊಂಡಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಲಾಗಿದೆ ಎಂದು ಸ್ಥಳೀಯ ಠಾಣೆಯ ಸಿಪಿಐ ಚಂದ್ರಶೇಖರ ಜಿ., ತಿಳಿಸಿದ್ದಾರೆ.