ಊಟದ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ತೀವ್ರ ಜಗಳ| ಗಾಜಿನ ಚೂರಿನಿಂದ ಕುತ್ತಿಗೆ, ಹೊಟ್ಟೆಗೆ ಇರಿತ| ಆರೋಪಿ ಬಂಧನ|
ಬೆಂಗಳೂರು(ಡಿ.19): ಊಟದ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ನಡೆದಿದ್ದ ಜಗಳದಲ್ಲಿ ಗಾಯಗೊಂಡಿದ್ದ ಯುವಕ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಕಲ್ಯಾಣ ನಗರ ನಿವಾಸಿ ನಸೀಮ್ (19) ಕೊಲೆಯಾದ ಯುವಕ. ಈ ಸಂಬಂಧ ಕೊಲೆ ಆರೋಪಿ ಅಸ್ಲಾಂನನ್ನು (22) ಬಂಧಿಸಲಾಗಿದೆ ಎಂದು ರಾಮಮೂರ್ತಿ ನಗರ ಠಾಣೆ ಪೊಲೀಸರು ಹೇಳಿದ್ದಾರೆ.
ಅಸ್ಲಾಂ ಮತ್ತು ನಸೀಮ್ ಮೂಲತಃ ಉತ್ತರ ಭಾರತೀಯರಾಗಿದ್ದು, ಎರಡು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ನಸೀಮ್ ಬಿ.ಚನ್ನಸಂದ್ರದಲ್ಲಿರುವ ಕಬಾಬ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರೆ, ಅಸ್ಲಾಂ ಬೇರೆಡೆ ಕೆಲಸ ಮಾಡುತ್ತಿದ್ದ. ಡಿ.16ರಂದು ರಾತ್ರಿ ಹತ್ತು ಗಂಟೆ ಸುಮಾರಿಗೆ ನಸೀಮ್ ಕೆಲಸ ಮಾಡುತ್ತಿದ್ದ ಕಬಾಬ್ ಅಂಗಡಿ ಬಳಿ ಬಂದ ಅಸ್ಲಾಂ ಊಟ ಏನಿದೆ ಎಂದು ಸ್ನೇಹಿತನ ಬಳಿ ಕೇಳಿದ್ದ. ಅಂಗಡಿ ಮುಚ್ಚುವ ಸಮಯವಾಗಿದ್ದು, ಊಟ ಖಾಲಿಯಾಗಿತ್ತು.
undefined
ಕೋಲಾರದ ವಿಸ್ಟ್ರಾನ್ ಕಂಪನಿ ಧ್ವಂಸ ಪ್ರಕರಣ ಪೂರ್ವನಿಯೋಜಿತ ಕೃತ್ಯ!
ನಸೀಮ್, ಸ್ನೇಹಿತನಿಗೆ ‘ಕುಷ್ಕ ಮತ್ತು ಫ್ರೈಡ್ ರೈಸ್ ಇದೆ. ಹೊಟ್ಟೆ ಸರಿಯಿಲ್ಲದ ಕಾರಣ ನಾನು ಖುಷ್ಕ ತಿನ್ನುತ್ತೇನೆ, ನೀನು ಫ್ರೈಡ್ ರೈಸ್ ತಿನ್ನು’ ಎಂದು ಸ್ನೇಹಿತ ಅಸ್ಲಾಂಗೆ ಹೇಳಿದ್ದ. ಮದ್ಯದ ನಶೆಯಲ್ಲಿದ್ದ ಆರೋಪಿ ಅಸ್ಲಾಂ ಫ್ರೈಡ್‌ರೈಸ್ ಬೇಡ ಎಂದು ಫ್ರೈಡ್‌ರೈಸ್ ಇದ್ದ ತಟ್ಟೆಯನ್ನು ಬಿಸಾಡಿದ್ದ. ಇದೇ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ತೀವ್ರ ಜಗಳ ನಡೆದಿದೆ. ಮಾತಿನ ಚಕಮಕಿ ನಡೆದು ಆರೋಪಿ ಅಸ್ಲಾಂ ಅಲ್ಲಿಯೇ ಇದ್ದ ಗಾಜಿನ ಚೂರಿನಿಂದ ನಸೀಮ್ ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಚುಚ್ಚಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನಸೀಮ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ನಸೀಮ್ ಮೃತಪಟ್ಟಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ರಾಮಮೂರ್ತಿ ನಗರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.