ಯುವತಿಯ ಮೇಲೆ ಅತ್ಯಾಚಾರ| ಆಟೋ ಚಾಲಕನ ಬಂಧನ| ಬೆಂಗಳೂರಿನ ನಾಗಾರವರದ ಬಳಿ ನಡೆದ ಘಟನೆ| ಅತ್ಯಾಚಾರವೆಸಗಿದ ಬಳಿಕ ಯುವತಿಯನ್ನ ಅಟೋದಲ್ಲೇ ಬಿಟ್ಟು ಪರಾರಿಯಾಗಿದ್ದ ಕಾಮುಕ|
ಬೆಂಗಳೂರು(ಡಿ.18): ಆಟೋದಲ್ಲಿ ಬಾಡಿಗೆಗೆ ಬಂದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ಮೇಲೆ ಆಟೋ ಚಾಲಕನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿಯ ನಿವಾಸಿ ಮುಬಾರಕ್ (28) ಬಂಧಿತ ಆರೋಪಿಯಾಗಿದ್ದಾನೆ.
ಮಾಗಡಿ ರಸ್ತೆಯ ನಿವಾಸಿ 18 ವರ್ಷದ ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿ ಮುಬಾರಕ್‌ನನ್ನ ಬಂಧಿಸಲಾಗಿದೆ. ಸಂತ್ರಸ್ತೆ ಯುವತಿ ಪಾಲಿಟೆಕ್ನಿಕ್‌ವೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾಳೆ. ಬಿಡುವಿನ ಸಮಯದಲ್ಲಿ ವಿವಾಹ ಸಮಾರಂಭದಲ್ಲಿ ಸ್ವಾಗತಕಾರಿಣಿ (ಹೋಸ್ಟಿಂಗ್/ವೆಲ್ಕಮಿಂಗ್) ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಇದೇ ಡಿ.10ರಂದು ಹೆಗಡೆ ನಗರದಲ್ಲಿ ವಿವಾಹ ಸಮಾರಂಭವೊಂದಕ್ಕೆ ವೆಲ್ಕಮಿಂಗ್ ಮಾಡಲು ಯುವತಿಗೆ ಕೆಲಸ ಬಂದಿತ್ತು. ಅದರಂತೆ ಆಕೆ ವಿವಾಹ ಸಮಾರಂಭಕ್ಕೆ ಹೋಗಿ, ಮನೆಗೆ ಹೋಗುವುದು ತಡವಾಗಿತ್ತು. ರಾತ್ರಿಯಿಡಿ ಮಂಟಪದಲ್ಲಿಯೇ ತಂಗಿದ್ದ ಸಂತ್ರಸ್ತೆ, ಮರುದಿನ ಬೆಳಗ್ಗೆ 6 ಗಂಟೆಗೆ ಥಣಿಸಂದ್ರ ಮುಖ್ಯರಸ್ತೆ ಬಳಿ ಬಸ್‌ಗಾಗಿ ಕಾಯುತ್ತಿದ್ದಳು. ಆಗ ಆರೋಪಿ ಮುಬಾರಕ್ ಆಟೋದಲ್ಲಿ ಬಂದು ಎಲ್ಲಿಗೆ ಹೋಗಬೇಕು ಎಂದು ಯುವತಿಯನ್ನು ವಿಚಾರಿಸಿದ್ದನು.
ನಾಗಾವರದ ಕಡೆ ಹೋಗಬೇಕು ಎಂದು ಹೇಳಿದಾಗ, ನಾನೂ ಅದೇ ಜಾಗಕ್ಕೆ ಹೋಗುವುದಾಗಿ ಹೇಳಿ ಸಂತ್ರಸ್ತೆ ಯುವತಿಯನ್ನು ಆಟೋಗೆ ಹತ್ತಿಸಿಕೊಂಡು ಹೋಗಿದ್ದನು. ನಾಗಾವಾರ ಸಿಗ್ನಲ್ ಬಳಿ ನಿಲ್ಲಿಸುವಂತೆ ಯುವತಿ ಸೂಚಿಸಿದರೂ, ವೇಗವಾಗಿ ಆಟೋವನ್ನು ಚಲಾಯಿಸಿಕೊಂಡು ಹೋಗಿದ್ದ, ನಿಲ್ಲಿಸಿ ಎಂದು ಯುವತಿ ಚೀರಾಡಿದಾಗ, ನನ್ನ ಸ್ನೇಹಿತರೊಬ್ಬರು ನನಗೆ ಹಣ ಕೊಡಬೇಕು ಅವರಿಂದ ಹಣ ಪಡೆದ ಕೂಡಲೇ ನೀಮಗೆ ಬೇಕಾದ ಜಾಗದಲ್ಲಿ ಬಿಡುತ್ತೇನೆ ಎಂದು ಆರೋಪಿ ಹೇಳಿದ್ದನು.
ಸ್ನೇಹಿತನಿಂದಲೇ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ!
ಬಳಿಕ ನಿರ್ಜನ ಪ್ರದೇಶವೊಂದರಲ್ಲಿ ಆಟೋ ನಿಲ್ಲಿಸಿ, ಆಟೋದೊಳಗಿನಿಂದ ಯುವತಿಯನ್ನು ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿ, ನಂತರ ಅಲ್ಲೇ ಬಿಟ್ಟು ಆಟೋದಲ್ಲಿ ಆರೋಪಿ ಪರಾರಿಯಾಗಿದ್ದ ಎಂದು ಸಂತ್ರಸ್ತೆ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಸಂತ್ರಸ್ತೆ ನಿರ್ಜನ ಪ್ರದೇಶದಿಂದ ಹತ್ತಿರವಿದ್ದ ಮುಖ್ಯರಸ್ತೆಗೆ ಬೈಕ್‌ನಲ್ಲಿ ಹೋಗುತ್ತಿದ್ದವರ ಸಹಾಯ ಪಡೆದು ಮನೆ ಸೇರಿದ್ದಳು. ಬಳಿಕ ಪೊಲೀಸರನ್ನ ಭೇಟಿಯಾದ ಬಳಿಕ ಆರೋಪಿಯ ಆಟೋ ನಂಬರ್ ಕೊಟ್ಟಿದ್ದಳು. ಆಗ ಸ್ಥಳಕ್ಕೆ ಬಂದು ಯುವತಿ ನೀಡಿದ್ದ ಆಟೋ ನಂಬರ್‌ನ್ನು ಪರಿಶೀಲಿಸಿ ವೇಳೆ ಮುಬಾರಕ್‌ನ ಸುಳಿವು ಸಿಕ್ಕಿತ್ತು. ಕೂಡಲೇ ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ಆರೋಪಿ ಮುಬಾರಕ್, ಯುವತಿಯನ್ನು ಕಂಡು ಆಕರ್ಷಣೆಯಾಗಿತ್ತು. ಹೀಗಾಗಿ ಕೃತ್ಯ ಎಸಗಿದ್ದೇನೆ ಅಂತ ತಪ್ಪೊಪ್ಪಿಕೊಂಡಿದ್ದಾನೆ.