
ಬೆಂಗಳೂರು(ಅ.27): ಪತ್ನಿಯೊಂದಿಗೆ ಊಟದ ವಿಚಾರಕ್ಕೆ ಜಗಳವಾಡುತ್ತಿದ್ದನ್ನು ಪ್ರಶ್ನಿಸಲು ಬಂದ ಸಹೋದರರ ನಡುವೆ ಆರಂಭವಾದ ಮಾತಿನ ಚಕಮಕಿ, ಆಸ್ತಿ ವೈಷ್ಯಮದ ಹಿನ್ನೆಲೆಯಲ್ಲಿ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಲಕ್ಷ್ಮೀನಾರಾಯಣಪುರ ನಿವಾಸಿ ರವಿ (37) ಕೊಲೆಯಾದ ವ್ಯಕ್ತಿ. ಘಟನೆಯಲ್ಲಿ ಕೊಲೆ ಆರೋಪಿ ಆದಿಶಂಕರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಹುಬ್ಬಳ್ಳಿಯ ಹೈಫೈ ಕೊಲೆ.. ಪೊಲೀಸರು ಬರುವವರೆಗೂ ಕೊಲೆಗಾರ ಕೂತಿದ್ದ!
ಲಕ್ಷ್ಮೀನಾರಾಯಣಪುರದಲ್ಲಿ ರವಿ ಅವರ ತಂದೆಗೆ ಸೇರಿದ ಮೂರು ಅಂತಸ್ತಿನ ಕಟ್ಟಡ ಇದ್ದು, ಮೂವರು ಸಹೋದರರು ಅದೇ ಕಟ್ಟಡದಲ್ಲಿ ವಾಸವಿದ್ದರು. ಮೂವರು ಸಹೋದರರಿಗೆ ವಿವಾಹವಾಗಿದೆ. ಆಟೋ ಚಾಲಕರಾಗಿದ್ದ ರವಿ ಕಟ್ಟಡದ ಮೂರನೇ ಮಹಡಿಯಲ್ಲಿ ಪತ್ನಿ ಮತ್ತು ನಾಲ್ಕು ವರ್ಷದ ಪುತ್ರಿಯೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಆಯುಧ ಪೂಜೆ ದಿನವಾದ ಭಾನುವಾರ ಮಧ್ಯಾಹ್ನ ಕುಡಿದು ಬಂದಿದ್ದ ರವಿ ಊಟದ ವಿಚಾರವಾಗಿ ಪತ್ನಿ ಜತೆ ಜಗಳ ತೆಗೆದಿದ್ದ. ಈ ವೇಳೆ ಮನೆಯಲ್ಲಿನ ಸಿಲಿಂಡರ್ ಎತ್ತಿ ಹಾಕಿದ್ದ. ಜೋರು ಶಬ್ದ ಕೇಳಿ ರವಿ ಸಹೋದರ ಕಾರ್ತಿಕ್ ಮನೆಗೆ ಬಂದು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದ. ಇದಕ್ಕೆ ಬಗ್ಗದಿದ್ದಾಗ ಮತ್ತೊಬ್ಬ ಸಹೋದರ ಆದಿಶಂಕರ್ ತೆರಳಿ ಜಗಳವಾಡದಂತೆ ರವಿಗೆ ಬುದ್ಧಿವಾದ ಹೇಳಿದ್ದಾನೆ.
ಇದಕ್ಕೂ ಮೊದಲೇ ಸಹೋದರರ ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪ ಏರ್ಪಟ್ಟಿತ್ತು. ಆಸ್ತಿಯಲ್ಲಿ ಪಾಲು ನೀಡಿದರೆ ಇಲ್ಲಿಂದ ಹೋಗುವುದಾಗಿ ರವಿ ಪ್ರತಿಕ್ರಿಯಿಸಿದ್ದ. ಮಾತು ವಿಕೋಪಕ್ಕೆ ಹೋಗಿದ್ದು, ಏಕಾಏಕಿ ರವಿ, ಮನೆಯಲ್ಲಿದ್ದ ಚಾಕುವಿನಿಂದ ಸಹೋದರ ಆದಿಶಂಕರ್‌ಗೆ ಹೊಟ್ಟೆ, ಬೆನ್ನಿಗೆ ಚುಚ್ಚಿದ್ದಾನೆ. ಅದೇ ಚಾಕು ಕಸಿದು ಆದಿಶಂಕರ್ ಅಣ್ಣನ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗಾಯಾಳು ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಬಳಿಕ ಗಾಯಗೊಂಡಿದ್ದ ಆದಿಶಂಕರ್‌ನನ್ನು ಸ್ನೇಹಿತರು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಶ್ರೀರಾಂಪುರ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ