ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಇಸ್ರೋದಲ್ಲಿ ಕೆಲಸ!

By Web DeskFirst Published Nov 25, 2019, 4:04 PM IST
Highlights

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಇಸ್ರೋದಲ್ಲಿ ಕೆಲಸ!| ನಾಗರಿಕ ಹಕ್ಕು ನಿರ್ದೇಶನಾಲಯದ ತನಿಖೆಯಿಂದ ನಕಲಿ ಅಸಲಿಯತ್ತು ಬಯಲು

ಬೆಂಗಳೂರು[ನ.25]: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೇರಿದಂತೆ ಇತರೆ ಕೇಂದ್ರ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಮೂವರು ಉದ್ಯೋಗಿಗಳು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಗಿಟ್ಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಾಗರಿಕ ಹಕ್ಕು ನಿರ್ದೇಶನಾಲಯದ ತನಿಖೆಯಿಂದ ನಕಲಿ ಅಸಲಿಯತ್ತು ಬಯಲಾಗಿದ್ದು, ಈ ಸಂಬಂಧ ಹಲಸೂರು ಗೇಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇಸ್ರೋದ ಪ್ರಥಮ ದರ್ಜೆ ಸಹಾಯಕಿ ಕರ್ಪಗಂ, ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ನೌಕರ ನರಸಯ್ಯ ಹಾಗೂ ನ್ಯೂ ಇಂಡಿಯಾ ಇನ್ಯೂರೆನ್ಸ್‌ ಕಂಪನಿ ನೌಕರ ಜಯರಾಜ್‌ ಅವರ ವಿರುದ್ಧ ನಾಗರಿಕ ಜಾರಿ ನಿರ್ದೇಶನಾಲಯ ಇನ್‌ಸ್ಪೆಕ್ಟರ್‌ ಪ್ರದೀಪ್‌ ಕುಮಾರ್‌ ಹಲಸೂರು ಠಾಣೆಗೆ ದೂರು ನೀಡಿದ್ದಾರೆ.

ಕೊನೆಗೂ ಬಯಲಾಯ್ತು ಚಂದ್ರಯಾನ- 2 ವೈಫಲ್ಯದ ಹಿಂದಿನ ಕಾರಣ!

ಕೆಲ ವರ್ಷಗಳಿಂದ ಕರ್ಪಗಂ ಅವರು ಇಸ್ರೋ ಉದ್ಯೋಗಿಯಾಗಿದ್ದು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಆದಿ ದ್ರಾವಿಡ ಜಾತಿಗೆ ಸೇರಿರುವುದಾಗಿ ಸುಳ್ಳು ಹೇಳಿ ಬೆಂಗಳೂರು ಉತ್ತರ ತಾಲೂಕು ತಹಸೀಲ್ದಾರ್‌ ಕಚೇರಿಯಿಂದ ಜಾತಿ ಪ್ರಮಾಣ ಪಡೆದಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಬಳಸಿ ಇಸ್ರೋದಲ್ಲಿ ಉದ್ಯೋಗ ಗಿಟ್ಟಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಇನ್ನು ನರಸಯ್ಯ ಅವರು ಕಮ್ಮ ಜಾತಿಗೆ ಸೇರಿದವರಾಗಿದ್ದಾರೆ. ಆದಿ ಆಂಧ್ರ ಜಾತಿಗೆ ಸೇರಿದವರೆಂದು ಹೇಳಿ ಜಾತಿ ಪ್ರಮಾಣಪತ್ರ ನೀಡಿ ಬಿಇಎಲ್‌ ಸಂಸ್ಥೆಯಲ್ಲಿ ಕಾರ್ಖಾನೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಜಯರಾಜ್‌ ಅವರು ಸಹ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ನ್ಯೂ ಇಂಡಿಯಾ ಇನ್ಯೂರೆನ್ಸ್‌ ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನಾವು ವಚನಬದ್ಧ: ಚಂದ್ರಯಾನ-3 ಯೋಜನೆಗೆ ಇಸ್ರೋ ಸಿದ್ಧ!

click me!