ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದ ಘಟನೆ| ಮಮತಾ ವಿರೂಪಾಕ್ಷಪ್ಪ ರಿತ್ತಿ ಹಣ ಕಳೆದುಕೊಂಡ ಮಹಿಳೆ| ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪರಿಚಯ| ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು|
ಹಾವೇರಿ(ಮಾ.26): ಫೇಸ್‌ಬುಕ್‌ನಲ್ಲಿ ಪರಿಚಿತನಾದ ವ್ಯಕ್ತಿಯೋರ್ವ ಇಂಗ್ಲೆಂಡಿನ ಕಂಪನಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 2 ಲಕ್ಷ ತನ್ನ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿರುವ ಘಟನೆ ಸವಣೂರು ಪಟ್ಟಣದಲ್ಲಿ ಸಂಭವಿಸಿದೆ.
ಸವಣೂರಿನ ಕೋರಿಪೇಟೆ ನಿವಾಸಿ ಮಮತಾ ವಿರೂಪಾಕ್ಷಪ್ಪ ರಿತ್ತಿ ಹಣ ಕಳೆದುಕೊಂಡು ಮೋಸ ಹೋಗಿರುವ ಮಹಿಳೆ. ಫೇಸ್‌ಬುಕ್‌ನಲ್ಲಿ ಜ್ಯೂಲಿಯಸ್ ಆಂಡಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ ಎಸ್‌ಎಂಎಸ್ ಮಾಡಿ ತಾನು ಇಂಗ್ಲೆಂಡಿನಲ್ಲಿ ಸಿವಿಲ್ ಎಂಜಿನಿಯರ್ ಎಂದು ಹೇಳಿಕೊಂಡಿದ್ದಾನೆ.
ಕ್ರೆಡಿಟ್ ಕಾರ್ಡ್‌ಗೂ ಕನ್ನ, ಲಕ್ಷ ಕಳೆದುಕೊಂಡ ವಕೀಲ... ಇಂಥ ಸಂದೇಶ ಬಂದ್ರೆ ಜೋಕೆ!
ಇಂಗ್ಲೆಂಡ್‌ನ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಕೋರಿಯರ್ ಮೂಲಕ ಯುಕೆ ಎಂಬಸ್ಸಿ ವಿಸಾ, ನೌಕರಿಗೆ ಸಂಬಂಧಪಟ್ಟ ದಾಖಲೆ ಹಾಗೂ 36 ಸಾವಿರ ಫೌಂಡ್ಸ್ ಹಣ ಮತ್ತು ಬಂಗಾರವನ್ನು ಗಿಫ್ಟ್ ಕಳುಹಿಸಿದ್ದೇನೆಂದು ಹೇಳಿದ್ದಾನೆ. ಇನ್ನೊಬ್ಬ ಮಹಿಳೆ ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿ ಎಂದು ಹೇಳಿಕೊಂಡು ಫೋನ್ ಮಾಡಿ ಯುಕೆಯಿಂದ ಕೋರಿಯರ್ ಗಿಫ್ಟ್ ಬಂದಿದ್ದು, ಅದನ್ನು ಪಡೆಯಲು 35,700 ಕೋರಿಯರ್, ಇಂಡಿಯನ್ ಸರ್ವಿಸ್ ಟ್ಯಾಕ್ಸ್ 98,500, ರಿಸರ್ವ್ ಬ್ಯಾಂಕ್ ಟ್ಯಾಕ್ಸ್ 75 ಸಾವಿರ ಖಾತೆಗೆ ಹಾಕಿಸಿಕೊಂಡು ಗಿಫ್ಟ್ ಕಳುಹಿಸದೇ ಮೋಸ ಮಾಡಿದ್ದಾರೆ ಎಂದು ಮಮತಾ ರಿತ್ತಿ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.