
ಬೆಂಗಳೂರು(ಅ.02): ಸಿಗರೆಟ್ ಪಡೆದು ಹಣ ಕೊಡದಿದ್ದನ್ನು ಪ್ರಶ್ನೆ ಮಾಡಿದ್ದ ಮಹಿಳೆ ಮೇಲೆ ರೌಡಿಯೊಬ್ಬ ಕುದಿಯುವ ಎಣ್ಣೆ ಎರಚಿರುವ ಅಮಾನವೀಯ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಮರಜ್ಯೋತಿ ಲೇಔಟ್ ನಿವಾಸಿ ಮೇಘಲಾ (38) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದ ಆರೋಪಿ ರೌಡಿಶೀಟರ್ ಹನೀಫ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಂಪಿಗೆಹಳ್ಳಿ ಠಾಣೆ ಪೊಲೀಸರು ಹೇಳಿದ್ದಾರೆ. ಮೇಘಲಾ ಅಮರಜ್ಯೋತಿ ಲೇಔಟ್‌ನಲ್ಲಿ ಸಣ್ಣದೊಂದು ಅಂಗಡಿ ಇಟ್ಟುಕೊಂಡಿದ್ದು, ಬೆಳಗ್ಗೆ ತಿಂಡಿ, ಸಂಜೆ ಬಜ್ಜಿ ಮಾರಾಟ ಮಾಡುತ್ತಾರೆ.
ಬುಧವಾರ ರಾತ್ರಿ 7.30ರ ಸುಮಾರಿಗೆ ಸಹಚರರ ಜತೆ ಮೇಘಲಾರ ಅಂಗಡಿಗೆ ಬಂದ ಹನೀಫ್, ಸಿಗರೆಟ್ ತೆಗೆದುಕೊಂಡಿದ್ದ. ಈ ವೇಳೆ ಹಣ ನೀಡುವಂತೆ ಮೇಘಲಾ ಕೇಳಿದ್ದು, ಈ ವಿಚಾರಕ್ಕೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಅವಾಚ್ಯವಾಗಿ ಮಹಿಳೆಯನ್ನು ಆರೋಪಿ ನಿಂದಿಸಿದ್ದು, ಬಳಿಕ ಅಲ್ಲಿಯೇ ಕುದಿಯುತ್ತಿದ್ದ ಬಿಸಿ ಎಣ್ಣೆಯನ್ನು ಮಹಿಳೆ ಮೇಲೆ ಎರಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಗಳ ಹೆಡೆಮುರಿ ಕಟ್ಟಲು ಗೂಂಡಾ ಕಾಯ್ದೆ ಪ್ರಯೋಗ
ಕಳೆದ ಎರಡು ವರ್ಷದ ಹಿಂದೆ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಬದಿ ತಿಂಡಿ ತಿಂದು, ಹಣ ಕೇಳಿದ್ದಕ್ಕೆ ಅಂಗಡಿಯವರ ಮೇಲೆ ಆರೋಪಿಯೊಬ್ಬ ಕುದಿವ ಎಣ್ಣೆ ಎರಚಿದ್ದ ಘಟನೆ ನಡೆದಿತ್ತು. ಸುಟ್ಟು ಗಾಯಗಳಿಂದ ನರಳುತ್ತಿದ್ದ ಮಹಿಳೆಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಮಹಿಳೆಯ ಮುಖ ಹಾಗೂ ದೇಹದಲ್ಲಿ ಶೇ.30ರಷ್ಟು ಸುಟ್ಟು ಗಾಯಗಳಾಗಿವೆ. ಘಟನೆ ನಡೆದ ವೇಳೆ ಅಂಗಡಿಯಲ್ಲಿ ಮಹಿಳೆ ಒಬ್ಬರೇ ಇದ್ದರು. ಮಹಿಳೆಗೆ ಆರೋಪಿ ಪರಿಚಯಸ್ಥನಾಗಿದ್ದು, ಹಲವು ಬಾರಿ ಇದೇ ರೀತಿ ಸಿಗರೇಟ್ ತೆಗೆದುಕೊಂಡು ಹಣ ನೀಡಿರಲಿಲ್ಲ. ಬುಧವಾರ ಕೂಡ ಹಣ ಕೊಡದ ವಿಚಾರಕ್ಕೆ ಜಗಳ ನಡೆದಿದ್ದು, ಜಗಳ ತಾರಕ್ಕೇರಿದ್ದೆ. ಈ ವೇಳೆ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಹನೀಫ್ ವಿರುದ್ಧ ಕಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿವೆ. ಆರೋಪಿ ವಿರುದ್ಧ ರೌಡಿಶೀಟರ್ ಪಟ್ಟಿಕೂಡ ತೆರೆಯಲಾಗಿದೆ. ಕೃತ್ಯ ಎಸಗಿದ ತಲೆಮರೆಸಿಕೊಂಡಿರುವ ಆರೋಪಿ ಆಂಧ್ರಪ್ರದೇಶದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಅವರ ನೇತೃತ್ವದ ತಂಡ ಹೊರ ರಾಜ್ಯಕ್ಕೆ ತೆರಳಿದೆ. ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ