35 ಲಕ್ಷ ಮೌಲ್ಯದ 1.200 ಕೇಜಿ ಗಾಂಜಾ ಎಣ್ಣೆ, 3 ಕೇಜಿ ಗಾಂಜಾ ವಶ| ಆಂಧ್ರಪ್ರದೇಶದಿಂದ ಡ್ರಗ್ಸ್ ತಂದು ನಗರದಲ್ಲಿ ಮಾರಾಟ| ವಿದ್ಯಾರ್ಥಿಗಳಿಗೆ ಮತ್ತು ಪರಿಚಯಸ್ಥರಿಗೆ ಆರೋಪಿ ಡ್ರಗ್ಸ್ ಬಿಕರಿ ಮಾಡುತ್ತಿದ್ದ ಅರೋಪಿ| ಜಯನಗರದ 9ನೇ ಬ್ಲಾಕ್‌ನಲ್ಲಿ ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಆರೋಪಿ ಬಂಧನ|
ಬೆಂಗಳೂರು(ಜ.29): ಹಣದಾಸೆಗೆ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಬಿಕಾಂ ಪದವೀಧರನೊಬ್ಬ ತಿಲಕನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಚನ್ನಸಂದ್ರದ ವಿಶೃತ್ ಎನ್.ರಾಜು (27) ಬಂಧಿತನಾಗಿದ್ದು, ಆರೋಪಿಯಿಂದ 35 ಲಕ್ಷ ಮೌಲ್ಯದ 1 ಕೆಜಿ 200 ಗ್ರಾಂ ಗಾಂಜಾ ಎಣ್ಣೆ ಮತ್ತು 3 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಜಯನಗರದ 9ನೇ ಬ್ಲಾಕ್‌ನಲ್ಲಿ ಜ.20ರಂದು ಮಾದಕ ದ್ರವ್ಯ ಮಾರಾಟಕ್ಕೆ ಆರೋಪಿ ಯತ್ನಿಸುತ್ತಿದ್ದಾಗ ಇನ್‌ಸ್ಪೆಕ್ಟರ್ ಜಿ.ಎಸ್.ಅನಿಲ್ ಕುಮಾರ್ ತಂಡ ಬಂಧಿಸಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ: ಮಾದಕ ವಸ್ತು ಮಾರಾಟಕ್ಕೆ ಯತ್ನ, ನಾಲ್ವರ ಬಂಧನ
ತನ್ನ ಪೋಷಕರ ಜತೆ ಚನ್ನಸಂದ್ರದಲ್ಲಿ ನೆಲೆಸಿರುವ ವಿಶೃತ್, ಬಿಕಾಂ ಓದು ಮುಗಿಸಿದ ಬಳಿಕ ಸಿಎ ಪರೀಕ್ಷೆ ತಯಾರಿ ನಡೆಸಿದ್ದ. ಇದರ ಸಲುವಾಗಿ ಮೂರು ತಿಂಗಳ ಹಿಂದೆ ಹೈದರಾಬಾದ್‌ಗೆ ತರಬೇತಿಗೆ ಆತ ತೆರಳಿದ್ದ. ಆ ವೇಳೆ ವಿಶೃತ್‌ಗೆ ಆಂಧ್ರಪ್ರದೇಶದ ಡ್ರಗ್ಸ್ ಪೆಡ್ಲರ್ ಪ್ರವೀಣ್ ಅಲಿಯಾಸ್ ಮಮ್ಮಿ ಎಂಬಾತ ಪರಿಚಯವಾಗಿದೆ. ‘ಡ್ರಗ್ಸ್ ವ್ಯವಹಾರದಲ್ಲಿ ಒಳ್ಳೆಯ ಆದಾಯವಿದೆ. ನೀನು ಕಡಿಮೆ ಅವಧಿಯಲ್ಲಿ ಶ್ರೀಮಂತನಾಗಬಹುದು’ ಎಂದು ಪೆಡ್ಲರ್ ಹೇಳಿದ್ದನು. ಈ ಮಾತಿಗೆ ಮರಳಾದ ವಿಶೃತ್, ಆಂಧ್ರಪ್ರದೇಶದಿಂದ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡಲು ಶುರು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಮಂಗಲ, ಎಸ್.ಜಿ.ಪಾಳ್ಯ, ಎಚ್‌ಎಸ್‌ಆರ್ ಲೇಔಟ್, ಜಯನಗರ ಹಾಗೂ ಜೆ.ಪಿ.ನಗರ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪರಿಚಯಸ್ಥರಿಗೆ ಆರೋಪಿ ಡ್ರಗ್ಸ್ ಬಿಕರಿ ಮಾಡುತ್ತಿದ್ದ. ಇತ್ತೀಚೆಗೆ ಪತ್ತೆಯಾದ ವ್ಯಸನಿಯ ವಿಚಾರಣೆ ವೇಳೆ ವಿಶೃತ್ ಬಗ್ಗೆ ಬಾಯ್ಬಿಟ್ಟ. ಆತನ ಮಾಹಿತಿ ಆಧರಿಸಿ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ತಂಡ ಮಾಲಿನ ಸಮೇತ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.