ಮಹಿಳೆ ಹೆಸರಲ್ಲಿ ಫೇಸ್‌ಬುಕ್‌ ಖಾತೆ ತೆರೆದು ವಂಚ​ನೆ: ಪ್ರೀತಿ ಮಾಡೋದಾಗಿ ಮೋಸ..!

By Kannadaprabha NewsFirst Published Feb 5, 2021, 11:25 AM IST
Highlights

ಗುತ್ತಿಗೆದಾರನಿಗೆ ರು. 15 ಲಕ್ಷ ವಂಚಿಸಿದ ವ್ಯಕ್ತಿ ಬಂಧನ| ಪ್ರೀತಿ ಮಾಡುವುದಾಗಿ ಮೋಸ ಮಾಡಿದ್ದ ಹಾಸನ ಮೂಲದ ವ್ಯಕ್ತಿ ಬಂಧನ| ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಮೆಸೆಂಜರ್‌, ಟ್ವಿಟರ್‌ ಮುಂತಾದವುಗಳ ಬಳಕೆಯಲ್ಲಿ ಜಾಗೃತಿವಹಿಸಬೇಕು| 

ಧಾರವಾಡ(ಫೆ.05): ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಮೋಸ ಮಾಡಿ ಹುಬ್ಬಳ್ಳಿ ತಾಲೂಕಿನ ಗುತ್ತಿಗೆದಾರನಿಂದ ಸುಮಾರು ರು. 15 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದ ಹಾಸನ ಮೂಲದ ವ್ಯಕ್ತಿಯನ್ನು ಸೈಬರ್‌, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸರು ಬಂಧಿಸಿದ್ದಾರೆ.

ಹಾಸನ ತಾಲೂಕಿನ ದೊಡ್ಡಗಿಣಿಗೇರೆ ಗ್ರಾಮದ 29 ವರ್ಷದ ಆರೋಪಿ ಪ್ರತಾಪ್‌ ಡಿ.ಎಂ. ಸುಷ್ಮಾ (ಸುಸು) ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಯನ್ನು ತೆರೆದು ಹುಬ್ಬಳ್ಳಿ ತಾಲೂಕಿನ ಗಂಗಿವಾಳ ಗ್ರಾಮದ ರುದ್ರಗೌಡ ಮಲ್ಲನಗೌಡ ಪಾಟೀಲ ಎಂಬ ಗುತ್ತಿಗೆದಾರನಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಫೇಸ್‌ಬುಕ್‌ ಮುಖಾಂತರ ಪರಿಚಯ ಮಾಡಿಕೊಂಡು 2017ರಲ್ಲಿ ವಾಟ್ಸ್‌ಆ್ಯಪ್‌ ನಂಬರ್‌ ಪಡೆದು ಸುಮಾರು 3 ವರ್ಷಗಳಿಂದ ರುದ್ರಗೌಡ ಪಾಟೀಲ ಅವರಿಗೆ ಚಾಟಿಂಗ್‌ ಮಾಡಿದ್ದಾನೆ.

3 ವರ್ಷಗಳ ಚಾಟಿಂಗ್‌ ಸಮಯದಲ್ಲಿ ಆರೋಪಿ ಪ್ರತಾಪನು, ರುದ್ರಗೌಡನಿಗೆ ತಾನು ಮೂಕಿ, ಕಿವುಡಿ ಇರುತ್ತೇನೆ ಎಂದು ಮೇಸೆಜ್‌ ಮಾಡುತ್ತಾ ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ರುದ್ರಗೌಡನಿಂದ ಆರೋಪಿ ಪ್ರತಾಪ ತನಗೆ ಹಾಗೂ ತನ್ನ ಪರಿಚಯಸ್ಥ 8-10 ಜನರ ಬ್ಯಾಂಕ್‌ ಖಾತೆಗಳಿಗೆ ಸುಮಾರು 14 ರಿಂದ 15 ಲಕ್ಷ ರು. ಹಾಕಿಸಿಕೊಂಡು ಮೋಸ ಮಾಡಿದ್ದಾನೆ ಎಂದು 2019ರ ಡಿಸೆಂಬರ್‌ 9ರಂದು ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದನು.

ಲಾಭದ ಉದ್ದೇಶಕ್ಕೆ 5 ಲಕ್ಷ ಜನರ ಫೇಸ್‌ಬುಕ್‌ಗೆ ಕನ್ನ : ದಾಖಲಾಯ್ತು ಕೇಸ್

ಧಾರವಾಡ ಸೈಬರ್‌, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್‌ ಠಾಣೆಯ ಸಿಪಿಐ ವಿಜಯ ಬಿರಾದಾರ ನೇತೃತ್ವ​ದಲ್ಲಿ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿ ಪ್ರತಾಪ ಡಿ.ಎಂ. ನನ್ನು ಬಂಧಿಸಿ, ಮೋಸ ಮಾಡಿ ಪಡೆದ ಹಣದಲ್ಲಿನ ರು. 1.25 ಲಕ್ಷ ವಶಪಡಿಸಿಕೊಂಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 66 ಅಡಿ ಮತ್ತು ಐಪಿಸಿ 420 ರ ಕಲಂ ಅಡಿ ಆರೋಪಿ ಪ್ರತಾಪ ಡಿ.ಎಂ. ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸದರಿ ಪ್ರಕರಣದ ತನಿಖಾ ತಂಡವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ​ಕೃಷ್ಣಕಾಂತ, ಡಿ​ವೈಎಸ್‌ಪಿಗಳಾದ ರಾಮನಗೌಡ ಹಟ್ಟಿ, ಎಂ.ಬಿ. ಸಂಕದ ಮಾರ್ಗದರ್ಶನದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿಜಯ ಬಿರಾದಾರ, ಎಎಸ್‌ಐಗಳಾದ ವಿ.ಎಸ್‌. ಬೆಳಗಾಂವಕರ, ಪಿ.ಜಿ. ಕಾಳಿ, ಆರ್‌.ಎಸ್‌. ಜಾಧವ್‌ ಮತ್ತು ಸಿಬ್ಬಂದಿ ಎಚ್‌.ಬಿ. ಐಹೋಳಿ, ಎ.ಎ. ಕಾಕರ, ಬಿ.ಎನ್‌. ಬಳಗಣ್ಣವರ, ಎ.ಎಂ. ನವಲೂರ, ಆರ್‌.ಎನ್‌. ಕಮದೊಡ, ಪಿ.ಜಿ. ಪಾಟೀಲ, ಎಂ.ಜಿ. ಪಾಟೀಲ, ಆರ್‌.ಎ. ಕಟ್ಟಿ, ಯು.ಎಂ. ಅಗಡಿ, ಬಿ.ಎಸ್‌. ಭೀಮಕ್ಕನವರ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.

ಜಾಲತಾಣ ಬಳಕೆಯಲ್ಲಿ ಜಾಗೃತಿ ಇರ​ಲಿ:

ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಮೆಸೆಂಜರ್‌, ಟ್ವಿಟರ್‌ ಮುಂತಾದವುಗಳ ಬಳಕೆಯಲ್ಲಿ ಜಾಗೃತಿವಹಿಸಬೇಕು. ಅನಗತ್ಯ ಚಾಟಿಂಗ್‌, ಮೆಸೇಜ್‌ ಮಾಡುವುದರಿಂದ ದೂರವಿರಬೇಕು. ವಿವಿಧ ರೀತಿಯ ಅಪರಾಧ ಕೃತ್ಯಗಳು, ಅಮಾಯಕರಿಗೆ ಮೋಸ, ವಂಚನೆ, ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ನಂತಹ ಕೃತ್ಯಗಳಿಂದ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಸಂಭವಿಸುತ್ತಿವೆ. ಸಾರ್ವಜನಿಕರು ತಮ್ಮ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಮಿತ ಹಾಗೂ ಜಾಗೃತಿವಹಿಸಿದರೆ ಮೋಸ, ವಂಚನೆಗಳಿಗೆ ಬಲಿಯಾಗದೇ ಇರಬಹುದು. ಒಂದು ವೇಳೆ ಅಂತಹ ಯಾವುದೇ ವಂಚನೆ, ಬ್ಲ್ಯಾಕ್‌ಮೇಲ್‌, ಬೆದರಿಕೆಗಳಿಗೆ ಒಳಗಾದರೆ ತಕ್ಷಣ ಹತ್ತಿರದ ಪೊಲೀಸ್‌ ಠಾಣೆ ಅಥವಾ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಖುದ್ದಾಗಿ ಭೇಟಿ ಮಾಡಿ ಅಥವಾ ಇ-ಮೇಲ್‌, ವಾಟ್ಸ್‌ಆ್ಯಪ್‌ ಮೂಲಕ ಮತ್ತು ಜಿಲ್ಲಾ ​ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ತಕ್ಷಣ ದೂರು ನೀಡಲು ಮುಂದಾಗಬೇಕು ಎಂದು ಎಸ್ಪಿ ಕೃಷ್ಣಕಾಂತ ಅವರು ಮನವಿ ಮಾಡಿದ್ದಾರೆ.
 

click me!