ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ಕದ್ದು ಪ್ರಿಯತಮೆಯೊಂದಿಗೆ ಚಾಲಕ ಪರಾರಿ..!

By Kannadaprabha NewsFirst Published Feb 5, 2021, 8:21 AM IST
Highlights

ಹಣ ಕದ್ದು ಆಟೋ ಹತ್ತಿ ಮಾರ್ಗ ಮಧ್ಯೆ ಪ್ರೇಯಸಿ ಕರೆದೊಯ್ದ| ಎರಡು ದಿನಗಳ ಹಿಂದೆ ನವರಂಗ ಹತ್ತಿರದ ಆಕ್ಸಿಸ್‌ ಬ್ಯಾಂಕ್‌ನ ಎಟಿಎಂ ಹಣ ತುಂಬಿಸಲು ಬಂದಾಗ ಕಳ್ಳತನ ಕೃತ್ಯ ಎಸಗಿದ್ದ ಆರೋಪಿ| ಮೊಬೈಲ್‌ ಸ್ವಿಚ್ಡ್‌ಆಫ್‌ ಮಾಡಿಕೊಂಡು ತಪ್ಪಿಸಿಕೊಂಡ ಆರೋಪಿ| 

ಬೆಂಗಳೂರು(ಫೆ.05): ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷದೊಂದಿಗೆ ದೋಚಿರುವ ಖಾಸಗಿ ಕಂಪನಿ ವಾಹನ ಚಾಲಕ, ತನ್ನ ಪ್ರಿಯತಮೆಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎಂಬ ಕುತೂಹಲಕಾರಿ ಸಂಗತಿ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆ ಪಡೆದಿರುವ ಸೆಕ್ಯುರ್‌ ಆ್ಯಂಡ್‌ ವ್ಯಾಲ್ಯೂ ಏಜೆನ್ಸಿಯ ವಾಹನ ಚಾಲಕ ಯೋಗೇಶ್‌, ಎರಡು ದಿನಗಳ ಹಿಂದೆ ನವರಂಗ ಹತ್ತಿರದ ಆಕ್ಸಿಸ್‌ ಬ್ಯಾಂಕ್‌ನ ಎಟಿಎಂ ಹಣ ತುಂಬಿಸಲು ಬಂದಾಗ ಕಳ್ಳತನ ಕೃತ್ಯ ಎಸಗಿದ್ದ. ಎಟಿಎಂ ಹಣ ದೋಚಿದ ಬಳಿಕ ಯೋಗೇಶ್‌, ದೊಡ್ಡಬಿದರಕಲ್ಲು ಸಮೀಪ ನೆಲೆಸಿದ್ದ ಪ್ರಿಯತಮೆಯನ್ನು ಕರೆದುಕೊಂಡು ನಗರ ತೊರೆದಿದ್ದಾನೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಯೋಗೇಶ್‌, ಅದೇ ಜಿಲ್ಲೆಯ ವಿವಾಹಿತ ಮಹಿಳೆ ಜತೆ ಸಂಬಂಧ ಹೊಂದಿದ್ದ. ದೊಡ್ಡಬಿದರಕಲ್ಲು ವ್ಯಾಪ್ತಿಯಲ್ಲಿ ಯೋಗೇಶ್‌ ಪತ್ನಿ ಹಾಗೂ ಮಕ್ಕಳು ಕೂಡಾ ನೆಲೆಸಿದ್ದಾರೆ. ಎಟಿಎಂ ಹಣ ಕಳ್ಳತನಕ್ಕೆ ಸಂಚು ರೂಪಿಸಿದ್ದ ಆರೋಪಿ, ಮಂಗಳವಾರ ಸಂಜೆ ಪ್ರಿಯತಮೆಯನ್ನು ಸಹ ರಾಜಾಜಿನಗರ ಬಳಿಗೆ ಕರೆಸಿಕೊಂಡಿದ್ದ. ಕೃತ್ಯ ಎಸಗಿದ ಕೆಲವೇ ಸಮಯದಲ್ಲಿ ಆಟೋ ಹತ್ತಿದ ಆರೋಪಿ, ಮಾರ್ಗ ಮಧ್ಯೆ ಪ್ರೇಯಸಿಯನ್ನು ಕರೆದುಕೊಂಡು ನಗರ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ರೂ. ಕದ್ದು ಪರಾರಿ..!

ಏಳು ಸಿಮ್‌ ಬಳಕೆ ಮೊಬೈಲ್‌ ಸ್ವಿಚ್ಡ್‌ಆಫ್‌:

ಈ ಕಳ್ಳತನ ಕೃತ್ಯಕ್ಕೆ ಪೂರ್ವ ತಯಾರಿಸಿ ನಡೆಸಿದ್ದ ಆರೋಪಿ, ಸುಮಾರು 7 ಸಿಮ್‌ಗಳನ್ನು ಬಳಸಿದ್ದ. ಈ ಕಳ್ಳತನ ಬಳಿಕ ತನ್ನ ಮೊಬೈಲ್‌ ಸ್ವಿಚ್ಡ್‌ಆಫ್‌ ಮಾಡಿಕೊಂಡು ಆರೋಪಿ ತಪ್ಪಿಸಿಕೊಂಡಿದ್ದಾನೆ. ಆ ಎಲ್ಲ ಸಿಮ್‌ಗಳ ಕರೆಗಳ ವಿವರವನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!