Yadgir: ಅಬಕಾರಿ ಪೊಲೀಸರನ್ನೇ ಕಲ್ಲು, ದೊಣ್ಣೆಗಳಿಂದ ಥಳಿಸಿದ ದಂಧೆಕೋರರು..!

By Girish Goudar  |  First Published May 21, 2022, 12:58 PM IST

*   ಶಹಾಪುರ ತಾಲೂಕಿನ ಚಂದಾಪುರದಲ್ಲಿ ನಕಲಿ ಮದ್ಯ ಜಪ್ತಿ
*   ಕಲ್ಲು ಬಡಿಗೆಗಳಿಂದ 30ಕ್ಕೂ ಹೆಚ್ಚು ಜನರಿಂದ ಪೊಲೀಸರ ಮೇಲೆ ಹಲ್ಲೆ
*   ಗೋಗಿ ಪೊಲೀಸ್‌ ಠಾಣೆಯಲ್ಲಿ ಅಬಕಾರಿ ಪೊಲೀಸರಿಂದ ಜೀವಬೆದರಿಕೆ ದೂರು ದಾಖಲು
 


ಯಾದಗಿರಿ(ಮೇ.21): ಜಿಲ್ಲೆಯ ಶಹಾಪುರದ ಲಕ್ಷ್ಮೀ ವೈನ್ಸ್‌ನಲ್ಲಿ ನಕಲಿ ಮದ್ಯದ ದಾಸ್ತಾನು ಪತ್ತೆ ಪ್ರಕರಣದ ಬೆನ್ನಲ್ಲೇ, ಮತ್ತೊಂದು ಇಂತಹ ಕೃತ್ಯದ ಬೆನ್ನತ್ತಿದ್ದ ಅಬಕಾರಿ ಪೊಲೀಸರ ತಂಡದ ಮೇಲೆಯೇ ಸುಮಾರು 30ಕ್ಕೂ ಹೆಚ್ಚು ದಂಧೆಕೋರರು ಕಲ್ಲು ಬಡಿಗೆಗಳಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿ ಪರಾರಿಯಾದ ಘಟನೆ ಗುರುವಾರ ಸಂಜೆ ಶಹಾಪುರ ತಾಲೂಕಿನ ಚಂದಾಪುರ ಗ್ರಾಮದ ಬಳಿ ನಡದಿದೆ.

ಶುಕ್ರವಾರ ಸಂಜೆ ಈ ಬಗ್ಗೆ ಗೋಗಿ ಪೊಲೀಸ್‌ ಠಾಣೆಯಲ್ಲಿ 20 ಜನರ ವಿರುದ್ಧ ಶುಕ್ರವಾರ (ಮೇ 20) ಪ್ರಕರಣ (32/2022) ದಾಖಲಿಸಿದ ಅಬಕಾರಿ ನಿರೀಕ್ಷಕ ವಿಜಯಕುಮಾರ್‌ ಹಿರೇಮಠ, ನಕಲಿ ಮದ್ಯ ಪ್ರಕರಣ ಬೇಧಿಸುವ ಸಂದರ್ಭದಲ್ಲಿ ನಡೆದ ಈ ಘಟನೆಯ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ. ನಕಲಿ ಮದ್ಯದ ಜಾಲ ಬೇಧಿಸಲು ಅಬಕಾರಿ ಪೊಲೀಸರ ತಂಡದ ಕಾರ್ಯಾಚರಣೆ ಚುರುಕು ಪಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಮತ್ತೊಂದು ಭಾರಿ ಪ್ರಮಾಣದ ಪ್ರಕರಣ ಪತ್ತೆಯಾಗಿದೆ.

Tap to resize

Latest Videos

undefined

ಚಿಕ್ಕಮಗಳೂರು ಅಬಕಾರಿ ಅಧಿಕಾರಿಗಳ ಅಂಧ ದರ್ಬಾರ್ , ರೈತನ ಮೇಲೆ ಸುಳ್ಳು ಕೇಸ್ ಹಾಕಿದ್ರಾ?

ದೂರಿನಲ್ಲೇನಿದೆ?:

ನಕಲಿ ಮದ್ಯ ಸಾಗಾಟವಾಗುತ್ತಿದೆ ಎಂದಬ ಖಚಿತ ಮಾಹಿತಿ ಮೇರೆಗೆ ಮೇ. 19 ರಂದು ಸಂಜೆ ಶಹಾಪುರ ತಾಲೂಕಿನ ಅಬಕಾರಿ ಪೊಲೀಸರು ಚಾಮನಾಳ ಬಳಿ ಸ್ವಿಫ್ಟ್‌ ಕಾರೊಂದನ್ನು ತಡೆದಾಗ, ಡಿಕ್ಕಿಯಲ್ಲಿ ನಕಲಿ ಮದ್ಯ ಪತ್ತೆಯಾಗಿದೆ. ಈ ಬಗ್ಗೆ ಚಾಲಕ ಹನುಮಂತ್ರಾಯ ಎಂಬಾತನನ್ನು ವಿಚಾರಿಸಿದಾಗ, ಚಂದಾಪುರದಲ್ಲಿನ ಮುದುಕಪ್ಪ ಎಂಬುವವರ ತೋಟದ ಮನೆಗೆ ಒಯ್ಯುತ್ತಿರುವುದಾಗಿ ತಿಳಿಸಿದ್ದಾನೆ.

Yadgir: ಶಾಸಕ ರಾಜೂಗೌಡ ಹೆಸರು ದುರ್ಬಳಕೆ: ಚಾಲಾಕಿ ಮಹಿಳೆ ಬಂಧನ

ಈ ಮಾಹಿತಿ ಅರಿತ ಪೊಲೀಸರು ಸ್ಥಳ ಪರಿಶೀಲನೆಗೆಂದು ಅಲ್ಲಿಗೆ ತೆರಳಿದಾಗ, ಬೂದು ಬಣ್ಣದ ಪೆಟ್ಟಿಗೆಗಳಲ್ಲಿ ನಕಲಿ ಮದ್ಯದ ದಾಸ್ತಾನು ಪತ್ತೆಯಾಗಿದೆ. ಪಂಚರ ಸಮ್ಮುಖದಲ್ಲಿ ಎಲ್ಲ ದಾಸ್ತಾನನ್ನು ಜಪ್ತಿ ಮಾಡಿ ಇನ್ನೇನು ಅಬಕಾರಿ ಪೊಲೀಸರು ಹೊರಡಬೇಕೆಂದಾಗ ಅಲ್ಲಿಗೆ ದೊಣ್ಣೆ ಕಲ್ಲುಗಳ ಸಮೇತ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಬಂದ 30-40 ಜನರ ಗುಂಪು ದಾಳಿ ನಡೆಸಿದೆ. ಅಧಿಕಾರಿಗಳ ಹಾಗೂ ಸಿಬ್ಬಂದಿಗಳನ್ನು ದೊಣ್ಣೆಗಳಿಂದ ಥಳಿಸಿ, ಕಾಲಿನಿಂದ ಒದ್ದಿದ್ದಾರೆ.
ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದ ಹನುಮಂತ್ರಾಯ ಎಂಬಾತನ್ನು ಬಿಡಿಸಿಕೊಂಡು ಪರಾರಿಯಾದರು. ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ಗೋಗಿ ಪೊಲೀಸ್‌ ಠಾಣೆಯಲ್ಲಿ 40 ಜನರ ವಿರುದ್ಧ ದೂರು ದಾಖಲಿಸಲಾಗಿದೆ.

ಚಂದಾಪುರದ ಹನುಮಂತ್ರಾಯ ಸಾಹು, ಅಳ್ಳೊಳ್ಳಿಯ ಶರಣಪ್ಪಗೌಡ, ಮುದುಕಪ್ಪ, ಯೆಲ್ಲಪ್ಪ, ಮಡಿವಾಳಪ್ಪ, ಹಣಮಂತ್ರಾಯ ಸಾಹು ಮುಂತಾದವರು ಸೇರಿದಂತೆ 20 ಜನರು ಹಾಗೂ ಇನ್ನಿತರ 20 ಜನರ ವಿರುದ್ಧ ಮಾರಣಾಂತಿಕ ಹಲ್ಲೆ ದೂರು ದಾಖಲಿಸಲಾಗಿದೆ. ಕಲಂ 143, 147, 148, 323, 332, 353, 307, 504, 506 ಸಂ: 149 ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ. 41 ಪೆಟ್ಟಿಗೆಗಳಲ್ಲಿದ್ದ (388.800 ಲೀಟರ್‌) ಇಂಪೀರಿಯಲ್‌ ಬ್ಲೂ ಕಂಪನಿಯ ನಕಲಿ ಮದ್ಯದ ಜಪ್ತಿ ಮಾಡಿಕೊಳ್ಳಲಾಗಿದೆ. ಅಬಕಾರಿ ಜಂಟಿ ಆಯುಕ್ತ ಬಸವರಾಜ್‌ ಹಡಪದ ನಿರ್ದೇಶನದಲ್ಲಿ, ಉಪ ಆಯುಕ್ತ ಶ್ರೀರಾಮ ರಾಠೋಡ್‌ ಮಾರ್ಗದರ್ಶನದಲ್ಲಿ, ಜಿಲ್ಲೆಯ ಅಬಕಾರಿ ಇಲಾಖೆಯ ತಂಡ ನಕಲಿ ಮದ್ಯ ಜಾಲ ವಿರುದ್ಧ ಕಾರ್ಯಾಚರಣೆ ನಡೆಸಿದೆ.


 

click me!