
ಕಣ್ಣೂರು : 2011ರಲ್ಲಿ ದೇಶದಲ್ಲಿ ಸುದ್ದಿ ಮಾಡಿದ್ದ ಕೇರಳದ ಸೌಮ್ಯಾ ಅತ್ಯಾಚಾ*, ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬ, ಗೋಡೆ ಹಾರಿ ಪರಾರಿಯಾದ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ. ಆದರೆ ಕೆಲವೇ ಗಂಟೆಗಳ ಬಳಿಕ ಆತ ಬಾವಿಯೊಂದರಲ್ಲಿ ಸಿಕ್ಕಿಬಿದ್ದಿದ್ದಾನೆ.
ಜೈಲು ಪರಾರಿ ಪ್ರಕರಣಗಳು ಸಾಮಾನ್ಯವಾದರೂ, ಈತನಿಗೆ ಎಡ ಮುಂಗೈ ಇಲ್ಲದ ಕಾರಣ, ಆತ ಹೇಗೆ ಪರಾರಿ ಆದ ಎಂಬುದು ಮಹತ್ವ ಪಡೆದುಕೊಂಡಿದೆ. ಜತೆಗೆ, ಆತನಿಗೆ ತಪ್ಪಿಸಿಕೊಳ್ಳಲು ಯಾರಾದರೂ ಸಹಾಯ ಮಾಡಿರಬಹುದೇ ಎಂಬ ಶಂಕೆಗೂ ಕಾರಣವಾಗಿದೆ.
ಸಿಸಿಟೀವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಯಲ್ಲಿ, ಅಪರಾಧಿ ಗೋವಿಂದಚಾಮಿ ಬಟ್ಟೆಗಳನ್ನು ಒಟ್ಟಾಗಿ ಹೆಣೆದು, ಅದನ್ನು ಹಗ್ಗದಂತೆ ಬಳಸಿಕೊಂಡು ಗೋಡೆ ಹತ್ತಿ, ಬೆಳಗ್ಗೆ 4.15ರಿಂದ 6.30ರ ಅವಧಿಯಲ್ಲಿ ತಪ್ಪಿಸಿಕೊಂಡಿರುವುದು ಪತ್ತೆಯಾಗಿದೆ. ಈ ವಿಷಯವು ಕಣ್ಣೂರು ನಗರ ಪೊಲೀಸರಿಗೆ ಬೆಳಗ್ಗೆ 7 ಗಂಟೆಗೆ ತಿಳಿದಿದ್ದು, ಕೂಡಲೇ ಅವನ ಶೋಧಕ್ಕೆ ಇಳಿದಿದ್ದರು. ಟೀವಿಯಲ್ಲಿ ಸುದ್ದಿ ನೋಡಿದ್ದ ಕೆಲವರು ಗೋವಿಂದಚಾಮಿ ಸುಳಿದಾಟ ತಾವು ನೋಡಿದ್ದೇವೆ ಎಂದಿದ್ದರು.
ಚಾಮಿ ತಪ್ಪಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ, ಅವನಿಂದ ಕೊಲೆಯಾಗಿದ್ದ ಮಹಿಳೆಯ ತಾಯಿ ಮಾತನಾಡಿ, ‘ಯಾರ ಸಹಾಯವೂ ಇಲ್ಲದೆ ಆತ ಜೈಲಿಂದ ಪಾರಾಗಲು ಸಾಧ್ಯವಿಲ್ಲ. ನನ್ನ ಸುದೀರ್ಘ ಹೋರಾಟದ ಬಳಿಕ ಅವ ಶಿಕ್ಷೆಗೊಳಗಾಗಿದ್ದ. ಈಗಲೂ ಆದಷ್ಟು ಬೇಗ ಸಿಕ್ಕಿಬೀಳಲಿ’ ಎಂದಿದ್ದರು.
ಅತ್ತ ತಪ್ಪಿಸಿಕೊಂಡ ಕೆಲ ಗಂಟೆಗಳಲ್ಲೇ, ಗೋವಿಂದಚಾಮಿ ಥಲಪ್ ಎಂಬಲ್ಲಿನ ಪಾಳುಬಿದ್ದ ಬಾವಿಯೊಂದರಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಹಾಗೂ ಹಗ್ಗದ ಸಹಾಯದಿಂದ ಆತನ ಮೇಲೆತ್ತಲಾಗಿದೆ. 2011ರಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಸೌಮ್ಯ ಎಂಬಾಕೆಯನ್ನು ಮಂಜಕ್ಕಾಡ್ ಪ್ರದೇಶದಲ್ಲಿಅತ್ಯಾಚಾ*, ಮಾಡಿದ್ದ ಚಾಮಿ, ಬಳಿಕ ಆಕೆಯನ್ನು ಕೊಲೆ ಮಾಡಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ