ವಂಚನೆ ಕೇಸ್‌: ಬೆಂಗಳೂರಲ್ಲಿ ವಿದೇಶಿ ಪ್ರಜೆ ಬಂಧನ

By Kannadaprabha NewsFirst Published Feb 28, 2023, 8:24 AM IST
Highlights

ಇ-ಮೇಲ್‌ ಮಾಡುತ್ತಿದ್ದ ಆರೋಪಿ, ತನ್ನನ್ನು ಸಂಪರ್ಕಿಸಿದವರ ಸ್ವವಿವರ ಪಡೆದು ವಿವಿಧ ಶುಲ್ಕದ ಹೆಸರಲ್ಲಿ ಹಣ ಸುಲಿಗೆ. 

ಬೆಂಗಳೂರು(ಫೆ.28): ವಿದೇಶದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಅಮಾಯಕರನ್ನು ನಂಬಿಸಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಪಡೆದು ವಂಚಿಸಿದ್ದ ನೈಜೀರಿಯಾ ಪ್ರಜೆಯನ್ನು ಈಶಾನ್ಯ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ನೈಜೀರಿಯಾದ ನೋಕೊಚಾ ಕಾಸ್ಮೀರ್‌ ಇಕೆಂಬಾ ಎಂಬಾತನಿಂದ ಸಿಮ್‌ ಕಾರ್ಡ್‌ಗಳು, ಆರು ಮೊಬೈಲ್‌ ಫೋನ್‌ಗಳು, ಒಂದು ಲ್ಯಾಪ್‌ಟಾಪ್‌, ಎರಡು ಡೆಬಿಟ್‌ ಕಾರ್ಡ್‌ ಹಾಗೂ ಪಾಸ್‌ಪೋರ್ಟ್‌ ಜಪ್ತಿ ಮಾಡಲಾಗಿದೆ. ಆರೋಪಿ ಯುನೈಟೆಡ್‌ ಕಿಂಗ್ಡಂ(ಯುಕೆ) ಶೆಲ್‌ ಆಯಿಲ್‌ ಕಂಪನಿಯಲ್ಲಿ ಮ್ಯಾನೇಜರ್‌ ಹುದ್ದೆ, ಆಸ್ಪತ್ರೆಗಳಲ್ಲಿ ಸ್ಟಾಫ್‌ ನರ್ಸ್‌, ಶೆಫ್‌ ಸೇರಿದಂತೆ ವಿವಿಧ ಉದ್ಯೋಗ ಕೊಡಿಸುವುದಾಗಿ ಅಮಾಯಕರಿಗೆ ಇ-ಮೇಲ್‌ ಕಳುಹಿಸುತ್ತಿದ್ದ. ಇ-ಮೇಲ್‌ ನೋಡಿ ಮೊಬೈಲ್‌ನಲ್ಲಿ ಸಂಪರ್ಕ ಮಾಡಿದವರ ಬಳಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಲಕ್ಷಾಂತರ ರು.ಗಳನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡು ಬಳಿಕ ಉದ್ಯೋಗ ಕೊಡಿಸದೆ ವಂಚಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತರ್ಜಾತಿ ವಿವಾಹ ಆಗಿದ್ದ ಯುವತಿ ನೇಣಿಗೆ ಶರಣು: ಕುಟುಂಬಸ್ಥರಿಂದ ಭಾರೀ ಕಿರುಕುಳ

ಮಹಿಳೆಗೆ 34 ಲಕ್ಷ ಟೋಪಿ:

ಆರೋಪಿ ನೋಕೊಚಾ ಕಳೆದ ನವೆಂಬರ್‌ನಲ್ಲಿ ಬಂಡೆಬೊಮ್ಮಸಂದ್ರ ನಿವಾಸಿ ಮಲರ್‌ ಕೋಡಿ (45) ಎಂಬುವವರ ಇ-ಮೇಲ್‌ಗೆ ಯುಕೆಯಲ್ಲಿ ಸ್ಟಾಫ್‌ ನರ್ಸ್‌ ಕೆಲಸ ಇರುವ ಬಗ್ಗೆ ಇ-ಮೇಲ್‌ ಮಾಡಿದ್ದಾನೆ. ಈ ಇ-ಮೇಲ್‌ ತೆರೆದು ನೋಡಿ ಅದರಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ, ಯುಕೆಯಲ್ಲಿ ಸ್ಟಾಫ್‌ ನರ್ಸ್‌ ಕೊಡುವುದಾಗಿ ಆರೋಪಿ ನಂಬಿಸಿದ್ದಾನೆ. ಬಳಿಕ ಮಲರ್‌ ಕೋಡಿ ಅವರ ಸ್ವ-ವಿವರ ಸೇರಿದಂತೆ ಶೈಕ್ಷಣಿಕ ವಿವರಗಳನ್ನು ಕಳುಹಿಸಿ ಕೊಂಡಿದ್ದಾನೆ. ಬಳಿಕ ಕ್ಲಿಯರೆನ್ಸ್‌ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಂತ ಹಂತವಾಗಿ ಅವರಿಂದ ವಿವಿಧ ಬ್ಯಾಂಕ್‌ ಖಾತೆಗಳಿಗೆ .34.07 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.

ಫರೀದಾಬಾದ್‌ನಲ್ಲಿ ಬಂಧನ

ಹಣ ಪಡೆದು ವಾರ ಕಳೆದರೂ ಉದ್ಯೋಗದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಬಳಿಕ ಮಲರ್‌ ಕೋಡಿ ಅವರು ಆರೋಪಿಗೆ ಕರೆ ಮಾಡಿದಾಗ ಮತ್ತೆ ಹಣಕ್ಕೆ ಬೇಡಿಕೆ ಇರಿಸಿದ್ದಾನೆ. ಈ ವೇಳೆ ಅನುಮಾನಗೊಂಡ ಮಲರ್‌ ಕೋಡಿ, ಹಣ ವಾಪಾಸ್‌ ಕೊಡುವಂತೆ ಕೇಳಿದ್ದಾರೆ. ಆಗ ಆರೋಪಿ ಕರೆ ಸ್ಥಗಿತಗೊಳಿಸಿ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ಹತ್ತಾರು ಬಾರಿ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಸೈಬರ್‌ ತಜ್ಞರ ಸಹಾಯ ಪಡೆದು ಆರೋಪಿಯನ್ನು ಹರಿಯಾಣದ ಫರಿದಾಬಾದ್‌ನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ.

ಆರೋಪಿಯ ವಿಚಾರಣೆ ವೇಳೆ ವಂಚನೆ ಪ್ರಕರಣ ಸಂಬಂಧ ಹೈದರಾಬಾದ್‌ ಸೈಬರ್‌ ಕ್ರೈಂ ಠಾಣೆ ಪೊಲೀಸರು ಮತ್ತು ತಮಿಳುನಾಡಿನ ಕರೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದ ವಿಚಾರ ಗೊತ್ತಾಗಿದೆ. ಆರೋಪಿಯು ಹಲವು ಅಮಾಯಕರಿಗೆ ವಿದೇಶದಲ್ಲಿ ಉದ್ಯೋಗ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಸಾಧ್ಯತೆಯಿದೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!