Latest Videos

ಸೊಸೆಯ ಕಿರುಕುಳಕ್ಕೆ ಬೇಸತ್ತು ಬಾವಿಗೆ ಹಾರಿದ ನವ ವಿವಾಹಿತ ಪೊಲೀಸ್ ಪೇದೆ; ಜೀವವೇ ಹೋಯ್ತು!

By Sathish Kumar KHFirst Published Jul 1, 2024, 7:57 PM IST
Highlights

ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯ ನವ ವಿವಾಹಿತ ಪೊಲೀಸ್ ಕಾನ್ಸ್‌ಟೇಬಲ್ ಸೊಸೆಯ ಕಿರುಕುಳಕ್ಕೆ 3 ದಿನಗಳ ಹಿಂದೆ ಮನೆ ಬಿಟ್ಟು ಹೋಗಿ, ಇಂದು ಪಾಳು ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬೆಂಗಳೂರು (ಜು.01): ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯ ನವ ವಿವಾಹಿತ ಪೊಲೀಸ್ ಕಾನ್ಸ್‌ಟೇಬಲ್ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇಂದು ಜ್ಞಾನಭಾರತಿ ಬಳಿ ಪಾಳು ಬಾವಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹೌದು, ಅಣ್ಣನ ಮಗನ ಹೆಂಡತಿಯ ಕಾಟಕ್ಕೆ ಬೇಸತ್ತು ನವವಿವಾಹಿತ ಪೊಲೀಸ್ ಪೇದೆ ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ ಭಾಗ್ಯಾ ಎಂಬ ಯುವತಿಯೊಂದಿಗೆ ಅದ್ಧೂರಿಯಾಗಿ ಮದುವೆ ಆಗಿದ್ದರು. ಆದರೆ, ಈತನಿಗೆ ಕಾಟ ಕೊಟ್ಟಿದ್ದು ಮಾತ್ರ ಪೇದೆ ಶಿವರಾಜ್ ಅವರ ಅಣ್ಣನ ಮಗನ ಹೆಂಡತಿ ವಾಣಿ. ಕಳೆದ ಎರಡು ವರ್ಷಗಳ ಹಿಂದೆ ವಾಣಿ ಎಂಬಾಕೆಯೊಂದಿಗೆ ಶಿವರಾಜ್ ಅಣ್ಣನ ಮಗನ ಮದುವೆಯಾಗಿತ್ತು. ನಂತರ ಕೌಟುಂಬಿಕ ಕಲಹದಿಂದ ಗಂಡ-ಹೆಂಡತಿ ಇಬ್ಬರು ದೂರಾಗಿದ್ದರು.

ಶಿವರಾಜ್ ಅವರ ಅಣ್ಣನ ಮಗ ಮತ್ತು ಆತನ ಹೆಂಡತಿ ವಾಣಿ ದೂರವಾಗಿದ್ದಕ್ಕೆ ತೀವ್ರ ಕೋಪಗೊಂಡಿದ್ದಳು. ಇನ್ನು ತಮ್ಮ ದಾಂಪತ್ಯ ದೂರವಾಗಲು ಪೊಲೀಸ್ ಪೇದೆ ಶಿವರಾಜ್ ಕಾರಣವೆಂದು ಹಗೆ ಸಾಧಿಸುತ್ತಿದ್ದ ವಾಣಿ ಶಿವರಾಜ್‌ನ ವಿರುದ್ಧ ಎಲ್ಲೆಡೆಯೂ ಕೆಟ್ಟದಾಗಿ ಮಾತನಾಡುತ್ತಾ, ಬೈಯುತ್ತಾ ಆತನಿಗೆ ಅವಮಾನ ಮಾಡುತ್ತಲೇ ಬಂದಿದ್ದಳು. ಆದರೆ, ದಂಪತಿಯ ನಡುವೆ ಬುದ್ಧಿಮಾತು ಹೇಳಿದ್ದ ಕಾರಣಕ್ಕೆ ಶಿವರಾಜ್‌ಗೆ ಮದುವೆ ಆಗುತ್ತಿದ್ದಂತೆ ಕಿರುಕುಳ ನೀಡುತ್ತಾ, ಈತನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬೈದು ವಿಡಿಯೋ ಮಾಡಿ ಪೋಸ್ಟ್ ಮಾಡಿಕೊಂಡಿದ್ದಳು.

ರೀಲ್ಸ್ ಶೋಕಿದಾರಿನಿಗೆ ಜೈಲು ತೋರಿಸಿದ ಖಾಕಿ; ಅರುಣ್ ಕಟಾರೆ ಈಗ ಕೇರ್ ಆಫ್ ಪರಪ್ಪನ ಅಗ್ರಹಾರ

ಇನ್ನು ತನ್ನ ಅಣ್ಣನ ಮಗನ ಹೆಂಡತಿ ವಾಣಿ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬಿಂಬಿಸಿ ಪೋಸ್ಟ್ ಹಂಚಿಕೊಂಡಿದ್ದರಿಂದ ನವ ವಿವಾಹಿತ ಶಿವರಾಜ್ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಿದೆ. ಇನ್ನು ಕೆಲಸದಲ್ಲಿಯೂ ಒತ್ತಡವಿದ್ದ ಶಿವರಾಜ್ ವಾಣಿಯ ಅವಮಾನವನ್ನು ಸಹಿಸಲಾಗದೇ ಭಾರಿ ಮನನೊಂದಿದ್ದನು. ಇಷ್ಟಕ್ಕೆ ಸುಮ್ಮನಿರದ ವಾಣಿ ಶಿವರಾಜ್ ಹಾಗೂ ಆತನ ಇಡೀ ಕುಟುಂಬದ ಮೇಲೆ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿ, ದಂಪತಿಯನ್ನು ದೂರ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಳು. ನಂತರ, ನಿನ್ನ ಮೇಲೆ ಇನ್ನೂ ಹಲವು ಕೇಸ್‌ಗಳನ್ನು ಹಾಕಿ ನಿನ್ನ ಕೆಲಸ ಹೋಗುವಂತೆ ಮಾಡಿ ಜೈಲಿನಲ್ಲಿ ಕೊಳೆಯುವಂತೆ ಮಾಡುವುದಾಗಿ, ನಿಮ್ಮ ಸಂಸಾರ ಹಾಳು ಮಾಡುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾಳಂತೆ. 

ಮಡಿವಾಳ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವರಾಜ್, ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಹೊಸದಾಗಿ ಮದುವೆಯಾಗಿ ಸುಖ ಸಂಸಾರ ಆರಂಭಿಸಲೂ ಬಿಡದಂತೆ ವಾಣಿಯಿಂದ ನೀಡಲಾಗುತ್ತಿದ್ದ ಕಿರುಕುಳಕ್ಕೆ ತೀವ್ರ ಮನನೊಂದ ಪೊಲೀಸ್ ಪೇದೆ ಶಿವರಾಜ್ ಮಂಗಳವಾರ ಮನೆಯಿಂದ ಡ್ಯೂಟಿಗೆ ಹೋಗುವುದಾಗಿ ಹೇಳಿ ನಾಪತ್ತೆ ಆಗಿದ್ದರು. ಇದಾದ ಬಳಿಕ ಇಂದು ಬೆಳಗ್ಗೆ ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿರುವ ಪಾಳು ಬಾವಿಯೊಂದರಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.

ದೂರು ಕೊಡಲು ಬಂದ ಪತ್ನಿಗೆ ಹಾಸನ ಎಸ್‌ಪಿ ಕಛೇರಿ ಎದುರೇ ಚಾಕು ಹಾಕಿ ಕೊಂದ ಪೊಲೀಸ್ ಕಾನ್ಸ್ ಟೇಬಲ್!

ಶಿವರಾಜ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಮೃತದೇಹವನ್ನು ಮೇಲೆತ್ತು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವರದಿ ಬಂದ ಬಳಿಕ ಸಾವಿನ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

click me!