
ಬೆಂಗಳೂರು (ಜೂ.02): ಉದ್ಯಮಿಯೊಬ್ಬರು ಕುಟುಂಬ ಸಮೇತ ತಿರುಪತಿ ಪ್ರವಾಸಕ್ಕೆ ಹೋಗಿದ್ದ ವೇಳೆ ನೇಪಾಳ ಮೂಲದ ಕಾವಲುಗಾರ ದಂಪತಿ ನಗ-ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಸ್ತ್ರಿ ನಗರದ ರಿಯಲ್ ಎಸ್ಟೇಟ್ ಉದ್ಯಮಿ, ಬಿಜೆಪಿಯ ರಮೇಶ್ ಬಾಬು ಅವರ ಮನೆಯಲ್ಲಿ ಎರಡು ಕೆಜಿ ಚಿನ್ನ, 10 ಲಕ್ಷ ರು. ನಗದು ಹಾಗೂ ಪರವಾನಿಗೆ ಹೊಂದಿದ್ದ ಪಿಸ್ತೂಲ್ ಕಳ್ಳತನವಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಅವರ ಮನೆ ಕಾವಲುಗಾರ ರಾಜ್ ಹಾಗೂ ದೀಪಾ ದಂಪತಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕಳೆದ ಮೂರು ತಿಂಗಳಿಂದ ರಾಜ್ ದಂಪತಿ ಮನೆಕೆಲಸಕ್ಕಿದ್ದರು. ಮೇ 27 ರಂದು ತಿರುಪತಿಗೆ ಶ್ರೀ ವೆಂಕಟೇಶ್ವರಸ್ವಾಮಿ ದರ್ಶನಕ್ಕೆ ತೆರಳಿದ್ದಾಗ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ವಿದ್ಯುತ್ ಹಾಗೂ ಸಿಸಿಟಿವಿ ಸಂಪರ್ಕ ಸ್ಥಗಿತಗೊಳಿಸಿ ಈ ಕೃತ್ಯ ಎಸಗಿದ್ದಾರೆ. ಪ್ರವಾಸ ಮುಗಿಸಿ ಮರಳಿದಾಗ ಘಟನೆ ಗೊತ್ತಾಯಿತು ಎಂದು ರಮೇಶ್‌ಬಾಬು ಪುತ್ರ ಮಹೇಶ್ ತಿಳಿಸಿದ್ದಾರೆ. ನೇಪಾಳಿಗರ ಮೇಲೆ ನಂಬಿಕೆ ಹೋಗಿದೆ. ಅವರ ಪೂರ್ವಾಪರ ಮಾಹಿತಿ ಸರಿಯಾಗಿ ಸಂಗ್ರಹಿಸದೆ ತಪ್ಪು ಮಾಡಿದ್ದೇವೆ. ಈ ಪ್ರಮಾದವನ್ನು ಬೇರೆ ಯಾರೂ ಮಾಡಬಾರದು. ಮನೆಯಿಂದ ಹೊರಟ ಬಳಿಕ ತಮ್ಮ ಸ್ನೇಹಿತರನ್ನು ಕರೆಸಿ ರಾಜ್ ದಂಪತಿ ಕಳ್ಳತನ ಮಾಡಿದ್ದಾರೆ ಎಂದು ಮಹೇಶ್ ಹೇಳಿದರು.
ಬೀಗ ಹಾಕಿದ ಮನೆಗಳಲ್ಲಿ ಕಳವು: ದ್ವಿಚಕ್ರ ವಾಹನದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳವು ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋಮೇಶ್ವರನಗರ ನಿವಾಸಿ ಸೈಯದ್ ಇಮ್ತಿಯಾಜ್(28) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಆರೋಪಿಗಳಿಂದ 6.50 ಲಕ್ಷ ರು. ಮೌಲ್ಯದ 53 ಗ್ರಾಂ ಚಿನ್ನಾಭರಣ ಹಾಗೂ ಮೂರು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಇತ್ತೀಚೆಗೆ ವಿಶ್ವಪ್ರಿಯಾ ಲೇಔಟ್ ನಿವಾಸಿಯೊಬ್ಬರ ಮನೆಯ ಬೀಗ ಮುರಿದು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಪರಪ್ಪನ ಅಗ್ರಹಾರದ ಬಾಷ್ ಕಂಪನಿ ಬಳಿ ಸೈಯದ್ ಇಮ್ತಿಯಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮನೆಗಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ