
ಬೆಳಗಾವಿ (ಜೂ.02): ಬೆಳಗಾವಿ ಜಿಲ್ಲೆ ಕಾಕತಿಯಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಸ್ನೇಹಿತ ಸೇರಿ 6 ಮಂದಿ ಸಾಮೂಹಿಕವಾಗಿ ಬಲಾತ್ಕಾರ ಎಸಗಿದ್ದು, ಮೊಬೈಲ್‌ನಲ್ಲಿ ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಬಳಿಕ, ಆರೋಪಿಗಳು ಈ ವಿಡಿಯೋ ತೋರಿಸಿ, ಬ್ಲ್ಯಾಕ್ ಮೇಲ್ ಮಾಡಿ, ಪದೇ ಪದೆ ಆಕೆಯ ಮೇಲೆ ಬಲಾತ್ಕಾರ ಎಸಗಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಬಾಲಕರು ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದ 2ನೇ ಗ್ಯಾಂಗ್ ರೇಪ್ ಪ್ರಕರಣ ಇದಾಗಿದೆ.
ಕಳೆದ ಡಿಸೆಂಬರ್‌ನಿಂದ ಬಲಾತ್ಕಾರ: ಕಳೆದ ಡಿಸೆಂಬರ್ ನಲ್ಲಿ ಈ ಬಾಲಕಿಯ ಸ್ನೇಹಿತನಾಗಿರುವ ಓರ್ವ ಆರೋಪಿ, ಆಕೆಯನ್ನು ಪುಸಲಾಯಿಸಿ ಕಾಕತಿ ಗುಡ್ಡಕ್ಕೆ ಕರೆದೊಯ್ದಿದ್ದ. ಅಲ್ಲಿಗೆ ತೆರಳಿದ ಬಳಿಕ, ಮತ್ತೆ ಐವರು ಸ್ನೇಹಿತರನ್ನು ಕರೆಸಿಕೊಂಡಿದ್ದ. ಬಳಿಕ, ಆರು ಜನ ಕಾಮುಕರು ಸೇರಿ ಬಾಲಕಿ ಮೇಲೆ ಸಾಮೂಹಿಕವಾಗಿ ಬಲಾತ್ಕಾರವೆಸಗಿದ್ದರು. ಅಲ್ಲದೆ, ಈ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು.
ಬಳಿಕ, ಜನವರಿಯಲ್ಲಿ ಮತ್ತೆ ಕರೆ ಮಾಡಿ, ವಿಡಿಯೋ ತೋರಿಸಿ, ಬ್ಲ್ಯಾಕ್‌ಮೇಲ್ ಮಾಡಿ, ಮತ್ತೆ ಆಕೆಯ ಮೇಲೆ ಸಾಮೂಹಿಕವಾಗಿ ಬಲಾತ್ಕಾರ ಎಸಗಿದ್ದರು. ಆ ನಂತರವೂ ಬಾಲಕಿಗೆ ಈ ವಿಡಿಯೋ ತೋರಿಸಿ, ಬ್ಲ್ಯಾಕ್‌ಮೇಲ್ ಮಾಡಿ, ಪದೇ ಪದೆ ಬಲಾತ್ಕಾರ ಎಸಗಿದ್ದರು. ಇದರಿಂದ ಬೇಸತ್ತ ಬಾಲಕಿ, ತಾಯಿಗೆ ವಿಷಯ ತಿಳಿಸಿದ್ದಾಳೆ.
ಪೋಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ