ಇಂದಿರಾ ಗಾಂಧಿ ಭಾವಚಿತ್ರಕ್ಕೆ ಮಸಿ, ಉಮೇಶ್ ಕತ್ತಿ ಅರೆಸ್ಟ್

By Suvarna NewsFirst Published Jun 1, 2020, 8:34 PM IST
Highlights

ಇಂದಿರಾ ಕ್ಯಾಂಟೀನ್‌ನಲ್ಲಿದ್ದ ಇಂದಿರಾ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ, (ಜೂನ್.01): ಇಂದಿರಾ ಕ್ಯಾಂಟೀನ್‌ನಲ್ಲಿದ್ದ ಇಂದಿರಾ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರ ಸಾವರ್ಕರ್‌ ಅಭಿಮಾನಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ದಾವಣಗೆರೆ ಭಾರತ್ ಕಾಲೋನಿ 4ನೇ ಕ್ರಾಸ್ ನಿವಾಸಿ ಹೋಟೆಲ್ ಕಾರ್ಮಿಕ 36 ವರ್ಷದ ಉಮೇಶ್ ಕತ್ತಿ ಬಂಧಿತ ಆರೋಪಿ.

ಶನಿವಾರ ರಾತ್ರಿ  ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಸಿಜೆ ಆಸ್ಪತ್ರೆ ಬಳಿ ಇಂದಿರಾ ಕ್ಯಾಂಟೀನ್ ಗಳಲ್ಲಿರುವ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಮಸಿ ಬಳಿಯಲಾಗಿತ್ತು.  ಈ ಬಗ್ಗೆ ಕೆಟಿಜೆ ನಗರ ಮತ್ತು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸರ್ಪ್ರೈಸ್ ನೀಡಿದ ರಚಿತಾ, ರಾಜ್ಯದಲ್ಲಿ ಎಣ್ಣೆಗೆ ಬೇಡಿಕೆ ಕುಸಿತ ; ಜೂ.01ರ ಟಾಪ್ 10 ಸುದ್ದಿ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಇಂದಿರಾ ಕ್ಯಾಂಟೀನ್ ಗಳಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಆಧರಿಸಿ ಇಂದು (ಸೋಮವಾರ) ಉಮೇಶ್ ಕತ್ತಿಯನ್ನು ಬಂಧಿಸಿದ್ದು, ಈತ ವೀರ ಸಾವರ್ಕರ್ ಅಭಿಮಾನಿ ಎಂದು ತಿಳಿದುಬಂದಿದೆ.

ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಮನಸ್ಸಿಗೆ ನೋವಾಗಿ ಮಸಿ ಬಳಿದಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಈ ಹಿಂದೆಯೂ ಈತ ಶಾಂತಿ ಕದಡುವ ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದ್ದು, ಪೊಲೀಸರು ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತರಾಯ ಮಾಹಿತಿ ನೀಡಿದ್ದಾರೆ.

click me!