
ಮೈಸೂರು (ಡಿ.28): ಹಾಡ ಹಗಲೇ ಚಿನ್ನದ ಅಂಗಡಿಗೆ ನುಗ್ಗಿದ ಖದೀಮರ ಗ್ಯಾಂಗ್ ಗನ್ ತೋರಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ಮುಸುಕು ದಾರಿಗಳು ಚಿನ್ನದಂಗಡಿ ಸಿಬ್ಬಂದಿಯನ್ನು ಬದರಿಸಿ ರಾಜಾರೋಷವಾಗಿ ದರೋಡೆ ಮಾಡಿದ್ದಾರೆ. ದರೋಡೆ ಕೃತ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಪೊಲೀಸರಿಂದ ತನಿಖೆ ಶುರುವಾಗಿದೆ.
ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಜನ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ರಾಬರಿ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಕಾರಣ 5 ಮಂದಿ ಗ್ಯಾಂಗ್ ನಿಂದ ಹಾಡುಹಗಲೇ ಕೆಜಿಗಟ್ಟಲೆ ಚಿನ್ನ ಲೂಟಿಯಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಸ್ ಸ್ಟ್ಯಾಂಡ್ ಬಳಿ ಘಟನೆ ನಡೆದಿದ್ದು, ಗನ್ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮುಸುಕುಧಾರಿಗಳಾಗಿ ಬಂದ ದುಷ್ಕರ್ಮಿಗಳು ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿ ಸುಮಾರು 4 ಕೆಜಿ ಯಷ್ಟು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ ಸುಮಾರು 2.30 ರ ಸಮಯದಲ್ಲಿ ಘಟನೆ ನಡೆದಿದ್ದು, ಹುಣಸೂರು ಬಸ್ ನಿಲ್ದಾಣದ ಹಿಂಬದಿ ಇರುವ ಸ್ಕೈಗೋಲ್ಡ್ ಅಂಡ್ ಡೈಮಂಡ್ಸ್ ಶೋರೂಂ ನಲ್ಲಿ ಘಟನೆ ನಡೆದಿದೆ. ಸುಮಾರು 10 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ನುಗ್ಗಿದ 5 ಮಂದಿ ಗನ್ ತೋರಿಸಿದ್ದಾರೆ. 5 ಮಂದಿ ಪೈಕಿ ನಾಲ್ವರು ಮುಸುಕು ಧರಿಸಿದ್ದಾರೆ. ಓರ್ವ ಗ್ಯಾಂಗ್ ಲೀಡರ್ ಎರಡು ಕೈಗಳಲ್ಲೂ ಗನ್ ಹಿಡಿದು ಸಿನಮೀಯ ಶೈಲಿಯಲ್ಲಿ ಬೆದರಿಕೆ ಹಾಕಿದ್ದಾನೆ. ಕೆಲವೇ ನಿಮಿಷದಲ್ಲಿ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ.
ಎರಡು ಬೈಕ್ ಗಳಲ್ಲಿ ಬಂದ ಗ್ಯಾಂಗ್ ಕೈಚಳಕ ತೋರಿಸಿದೆ. ದರೋಡೆಕೋರರನ್ನ ಸಿಬ್ಬಂದಿ ಹಿಂಬಾಲಿಸಿದ್ದಾರೆ. ಆದ್ರೆ ದುಷ್ಕರ್ಮಿಗಳನ್ನ ಹಿಡಿಯಲು ಸಾಧ್ಯವಾಗಿಲ್ಲ. ರಾಬರಿ ನಡೆಸಿದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಮಾರು 4 ಕೆಜಿ ಚಿನ್ನಾಭರಣ ದೋಚಿರುವುದಾಗಿ ಮಾಹಿತಿ ಬಂದಿದೆ. ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಐ.ಜಿ ಬೋರಲಿಂಗಯ್ಯ, ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಮೆರಾಮನ್ ನವೀನ್ ಜೊತೆಗೆ, ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ