
ಮೈಸೂರು (ಆ.28): ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಬೆದರಿಸಿ ಹಣ ವಸೂಲಿಗೆ ಸರ್ಕಾರಿ ವೈದ್ಯಾಧಿಕಾರಿಗೆ ಬೆದರಿಕೆ ಹಾಕಿದ ಘಟನೆ ಮೈಸೂರಿನ ತಿಲಕ್ ನಗರದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ RTI ನ್ಯೂಸ್ ಪೇಪರ್ ಮುಖ್ಯಸ್ಥ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮೈಸೂರಿನ ತಿಲಕ್ ನಗರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಚೇರಿಯ ಅಕೌಂಟ್ಸ್ ಆಫೀಸರ್‌ಗೆ ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಬೆದರಿಸಿ 25 ಲಕ್ಷ ರೂಪಾಯಿ ವಸೂಲಿಗೆ ಯತ್ನಿಸಿದ್ದ ಆರೋಪಿಗಳು. ಈ ಸಂಬಂಧ ವೈದ್ಯಾಧಿಕಾರಿಗಳು RTI ನ್ಯೂಸ್ ಪೇಪರ್‌ನ ಮುಖ್ಯಸ್ಥ ಹರೀಶ್ @ ರಾಮು ಹಾಗೂ ಪ್ರತಾಪ್ ಎಂಬುವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತ ಆರೋಪಿಗಳು ಕನ್ನಡಾಂಬೆ ರಕ್ಷಣಾ ವೇದಿಕೆಯ ಮುಖ್ಯಸ್ಥರೆಂದು ಗುರುತಿಸಲಾಗಿದೆ.
ಪ್ರಕರಣದ ವಿವರ:
ಆರೋಪಿಗಳು ಸರ್ಕಾರಿ ವೈದ್ಯಾಧಿಕಾರಿಯನ್ನು ಗುರಿಯಾಗಿಸಿ, ಸ್ಟಿಂಗ್ ಆಪರೇಷನ್‌ನಲ್ಲಿ ಸಿಕ್ಕಿಬಿದ್ದಿರುವುದಾಗಿ ಬೆದರಿಸಿ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಆರೋಗ್ಯ ಸಚಿವರು ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿ, ಮಾನಹಾನಿಗೊಳಗಾಗುವಂತೆ ಮಾಡಿ, ಅಂತಿಮವಾಗಿ ಸಸ್ಪೆಂಡ್ ಮಾಡಿಸುವುದಾಗಿ ಧಮಕಿ ಹಾಕಿದ್ದ ಖದೀಮರು. ಈ ಬೆದರಿಕೆಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಚೇರಿಯ ಅಕೌಂಟ್ಸ್ ಆಫೀಸರ್ ಡಾ.ಕಾಂತರಾಜು, ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ. ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳಲ್ಲಿ ಪ್ರತಾಪ್‌ನನ್ನು ಬಂಧಿಸಲಾಗಿದೆ. ಆದರೆ, ಹರೀಶ್ @ ರಾಮು ತಲೆಮರೆಸಿಕೊಂಡಿದ್ದಾನೆ.
ಈ ಹಿಂದೆಯೂ ಹುಣಸೂರಿನಲ್ಲಿ ಹರೀಶ್ ವಿರುದ್ಧ ಬ್ಲಾಕ್‌ಮೇಲ್ ಆರೋಪದಡಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಆರೋಪಿಗಳು ತಮ್ಮ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿ ಹಣ ವಸೂಲಿಗೆ ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ ವಿಜಯನಗರ ಪೊಲೀಸರು ತಲೆಮರೆಸಿಕೊಂಡಿರುವ ಹರೀಶ್‌ನನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ತಂದು, ಸಂಘಟನೆಗಳ ಹೆಸರಿನಲ್ಲಿ ಹಣ ವಸೂಲಿಗೆ ಯತ್ನಿಸುವ ಕೃತ್ಯಗಳು ಬಯಲಾಗಿದೆ. ಅಲ್ಲದೇ ದಿನೇದಿನೆ ಹೆಚ್ಚುತ್ತಿರುವ ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಮುಂದಿನ ದಿನಗಳಲ್ಲಿ ಈ ರೀತಿಯ ಚಟುವಟಿಕೆಗಳಿಗೆ ಕಡಿವಾಣ ಹಾಕಲಿದ್ದಾರಾ ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ