ನಾಪತ್ತೆಯಾದ ವ್ಯಕ್ತಿಯ ಅಸ್ತಿಪಂಜರ ಪತ್ತೆ: ಹೆಸ್ಕಾಂ ವಿರುದ್ಧ ಕೊಲೆ ಪ್ರಕರಣ ದಾಖಲು

By Kannadaprabha News  |  First Published Oct 7, 2022, 11:00 PM IST

ಕೃಷಿ ಭೂಮಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ತಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ಹೆಸ್ಕಾಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್‌ ಇಲಾಖೆ 


ಖಾನಾಪುರ(ಅ.07): ತಾವು ಸಾಕಿದ ಜಾನುವಾರುಗಳಿಗೆ ಮೇವು ತರಲು ಕಳೆದ 26 ದಿನಗಳ ಹಿಂದೆ ಮನೆಯಿಂದ ತೆರಳಿದ್ದ ತಾಲೂಕಿನ ಲಕ್ಕೇಬೈಲ ಗ್ರಾಮದ ವ್ಯಕ್ತಿ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಗುರುವಾರ ಮಹತ್ವದ ತಿರುವು ದೊರೆತಿದ್ದು, ಗ್ರಾಮದ ಹೊರವಲಯದ ಕೃಷಿ ಭೂಮಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ತಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಹೆಸ್ಕಾಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದೆ.

ಪ್ರಕರಣದ ಹಿನ್ನೆಲೆ:

Latest Videos

undefined

ಲಕ್ಕೇಬೈಲ ಗ್ರಾಮದ ರಾಮಚಂದ್ರ ಅಂಧಾರೆ (36) ಸೆ.12ರಂದು ಜಾನುವಾರುಗಳಿಗೆ ಮೇವು ತರುವುದಾಗಿ ಮನೆಯವರಿಗೆ ತಿಳಿಸಿ ಹೊಲಕ್ಕೆ ತೆರಳಿದ್ದರು. ಬಹಳ ಹೊತ್ತಾದರೂ ಅವರು ಮನೆಗೆ ಮರಳದ ಕಾರಣ ಅವರಿಗಾಗಿ ಎಲ್ಲೆಡೆ ಹುಡುಕಾಡಿದ ಕುಟುಂಬದ ಸದಸ್ಯರು ಮರುದಿನ ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಅವರು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿದ್ದರು. ಘಟನೆ ನಡೆದು ಮೂರು ವಾರಗಳು ಕಳೆದ ಬಳಿಕ ಗುರುವಾರ ಮಧ್ಯಾಹ್ನ ಲಕ್ಕೇಬೈಲ ಗ್ರಾಮದ ಹೊರವಲಯದ ಭತ್ತದ ಗದ್ದೆಯೊಂದರಲ್ಲಿ ಅಸ್ತಿಪಂಜರ ದೊರೆತಿದ್ದು, ಅಸ್ತಿಪಂಜರದ ಬಗ್ಗೆ ವಿಚಾರಣೆ ನಡೆಸಿದಾಗ ಅದು ನಾಪತ್ತೆಯಾಗಿದ್ದ ರಾಮಚಂದ್ರ ಅವರದ್ದು ಎಂದು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

BELAGAVI: ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸುಳೇಭಾವಿ: ಪೊಲೀಸ್ ಬಿಗಿ ಬಂದೋಬಸ್ತ್!

ಹೊಲಕ್ಕೆ ಮೇವು ತರಲು ತೆರಳಿದ್ದ ರಾಮಚಂದ್ರ ಹೊಲದಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಇದಕ್ಕೆ ಪುಷ್ಟಿನೀಡಲೆಂಬಂತೆ ಅವರ ದೇಹಕ್ಕೆ ವಿದ್ಯುತ್‌ ತಂತಿ ಸಿಲುಕಿರುವ ಬಗ್ಗೆ ಸ್ಥಳದಲ್ಲಿ ಅವಶೇಷಗಳು ದೊರೆತಿವೆ. ಲಕ್ಕೇಬೈಲ ಗ್ರಾಮದ ಹಲವೆಡೆ ವಿದ್ಯುತ್‌ ತಂತಿಗಳು ಧರೆಗುರುಳಿದ ಬಗ್ಗೆ ಗ್ರಾಮಸ್ಥರು ಹೆಸ್ಕಾಂ ಕಚೇರಿಗೆ ತಿಳಿಸಿದ್ದರೂ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರಿಂದ ರಾಮಚಂದ್ರ ಅವರು ಪ್ರವಹಿಸುತ್ತಿದ್ದ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತನಿಖೆಯಿಂದ ಪತ್ತೆ ಹಚ್ಚಿದ್ದಾರೆ. ಘಟನೆಯ ಬಗ್ಗೆ ಹೆಸ್ಕಾಂನ ಖಾನಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿರುದ್ಧ ಐಪಿಸಿ ಸೆಕ್ಷನ್‌ 306ರಡಿ ಪ್ರಕರಣ ದಾಖಲಿಸಕೊಳ್ಳಲಾಗಿದೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.
 

click me!