ಬಿಹಾರದಲ್ಲಿ ಐಸಿಯುಗೇ ನುಗ್ಗಿ ಕೊಲೆಗಾರರ ಮರ್ಡರ್‌!

Published : Jul 18, 2025, 05:10 AM IST
Bihar

ಸಾರಾಂಶ

ಬಿಹಾರದಲ್ಲಿ ಗುರುವಾರ ಮತ್ತೊಂದು ಭೀಕರ ಹತ್ಯೆ ನಡೆದಿದೆ . ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕಕ್ಕೆ (ಐಸಿಯು) ನುಗ್ಗಿದ 5 ಜನರ ದುಷ್ಕರ್ಮಿಗಳ ತಂಡ, ಹತ್ಯೆ ಪ್ರಕರಣದ ಆರೋಪಿಯನ್ನು ಗುಂಡಿಕ್ಕಿ ಸ್ಥಳದಲ್ಲೇ ಹತ್ಯೆ ಮಾಡಿದೆ.

ಪಟನಾ: ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಹೊಂದಿರುವ, ಕಳೆದ ಒಂದು ತಿಂಗಳಿಂದ ಭಾರೀ ಪ್ರಮಾಣದ ಹತ್ಯೆ ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಗುರುವಾರ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕಕ್ಕೆ (ಐಸಿಯು) ನುಗ್ಗಿದ 5 ಜನರ ದುಷ್ಕರ್ಮಿಗಳ ತಂಡ, ಹತ್ಯೆ ಪ್ರಕರಣದ ಆರೋಪಿಯನ್ನು ಗುಂಡಿಕ್ಕಿ ಸ್ಥಳದಲ್ಲೇ ಹತ್ಯೆ ಮಾಡಿದೆ. ಇಡೀ ಘಟನಾವಳಿ ಆಸ್ಪತ್ರೆಯ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಸಿನಿಮೀಯ ಘಟನೆಗಳನ್ನು ನೆನಪಿಸಿದೆ.

ಇದರ ಬೆನ್ನಲ್ಲೇ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಸರ್ಕಾರಿ ಕೃಪಾಪೋಷಿತ ಕ್ರಿಮಿನಲ್‌ಗಳು ಐಸಿಯುನೊಳಗೇ ನುಗ್ಗಿ ದಾಳಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಗಂಭೀರ ಪರಿಸ್ಥಿತಿಗೆ ತಲುಪಿದೆ. ಬಿಹಾರದಲ್ಲಿ ಎಲ್ಲಿಯಾದರೂ ಜನರು ಸುರಕ್ಷಿತವಾಗಿ ಇರಲು ಸಾಧ್ಯವೇ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪ್ರಶ್ನಿಸಿದ್ದಾರೆ.

ಈ ನಡುವೆ ಎನ್‌ಡಿಎ ಪಾಲುದಾರ ಪಕ್ಷವಾಗಿರುವ ಎಲ್‌ಜೆಪಿ ನಾಯಕ, ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಏನಾಯ್ತು?:

10ಕ್ಕೂ ಹೆಚ್ಚು ಹತ್ಯೆ ಪ್ರಕರಣದ ಆರೋಪಿಯಾಗಿರುವ ಚಂದನ್‌ ಎಂಬಾತನನ್ನು ಕೋರ್ಟ್‌ ಸೂಚನೆ ಮೇರೆಗೆ ಚಿಕಿತ್ಸೆಗೆಂದು ಪಟನಾದ ಪರಾಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಂದನ್‌ನನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಈ ನಡುವೆ ಪಿಸ್ತೂಲ್‌ ಹಿಡಿದುಕೊಂಡಿದ್ದ 5 ಜನರ ತಂಡವೊಂದು ಗುರುವಾರ ಬೆಳಗ್ಗೆ 7.30ರ ವೇಳೆಗೆ ಯಾವುದೇ ಅಡೆ ತಡೆ ಇಲ್ಲದೇ ಆಸ್ಪತ್ರೆಯೊಳಗೆ ನುಗ್ಗಿ, ಚಂದನ್‌ ಇದ್ದ ಐಸಿಯು ಹುಡುಕಿ ಒಳಗೆ ಹೋಗಿ ಆತನ ಮೇಲೆ ಸಮೀಪದಿಂದಲೇ ಗುಂಡಿನ ದಾಳಿ ನಡೆಸಿ ಆತನ ಹತ್ಯೆಗೈದಿದೆ.

ಬಳಿಕ ಭದ್ರತಾ ಸಿಬ್ಬಂದಿಗಳ ಯಾವುದೇ ಪ್ರತಿರೋಧ ಇಲ್ಲದೆಯೇ ಐದೂ ಜನರ ತಂಡ ಅಲ್ಲಿಂದ ಸುಲಭವಾಗಿ ಪರಾರಿಯಾಗಿದೆ. ದಾಳಿಕೋರರು, ಆಸ್ಪತ್ರೆಯೊಳಗೆ ಸಾಗುವ, ಐಸಿಯುಗೆ ನುಗ್ಗುವ ಮತ್ತು ದಾಳಿ ನಡೆಸಿ ತೆರಳುವ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿದೆ.

ಗ್ಯಾಂಗ್‌ವಾರ್‌:

ಘಟನೆ ಕುರಿತು ಮಾಹಿತಿ ನೀಡಿರುವ ಪಟನಾ ಎಸ್ಪಿ ದೀಕ್ಷಾ, ‘ಆಸ್ಪತ್ರೆಯ ಸಿಸಿಟೀವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದ್ದು, ಕೊಲೆಗಾರರ ಪತ್ತೆ ಯತ್ನ ನಡೆಯುತ್ತಿದೆ. ಹತ್ಯೆಗೆ ಹಳೆಯ ದ್ವೇಷ ಕಾರಣವಿರಬಹುದು’ ಎಂದು ದೀಕ್ಷಾ ಹೇಳಿದ್ದಾರೆ.

ಬಿಹಾರದಲ್ಲಿ 46 ದಿನದಲ್ಲಿ 78 ಕೊಲೆ

ಪಟನಾ: ಬಿಹಾರ ಗೂಂಡಾ ರಾಜ್ ಆಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ರಾಜ್ಯದಲ್ಲಿ ಕಳೆದ 46 ದಿನಗಳಲ್ಲಿ 78 ಹತ್ಯೆ ಪ್ರಕರಣಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ. ಇದು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡಿದೆ.

ರೈತರಿಗೀಗ ಕೆಲಸ ಇಲ್ಲದ ಕಾರಣ ರಾಜ್ಯದಲ್ಲಿ ಕೊಲೆ ಹೆಚ್ಚಳ: ಬಿಹಾರ ಪೊಲೀಸ್‌

‘ಬಿಹಾರದಲ್ಲಿ ಸರಣಿ ಕೊಲೆಗಳು ನಡೆಯುತ್ತಿರುವುದಕ್ಕೆ ರೈತರಿಗೆ ಈಗ ಕೃಷಿ ಕೆಲಸ ಇಲ್ಲದಿರುವುದೇ ಕಾರಣ’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಕುಂದನ್‌ ಕೃಷ್ಣನ್‌ ಹೇಳಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

‘ಏಪ್ರಿಲ್‌ನಿಂದ ಜೂನ್‌ ನಡುವೆ ಹಲವು ಹತ್ಯೆಗಳು ನಡೆಯುತ್ತಿವೆ. ಇದಕ್ಕೆ ಕಾರಣ, ಈ ಅವಧಿಯಲ್ಲಿ ರೈತರಿಗೆ ಹೊಲಗಳಲ್ಲಿ ಏನೂ ಕೆಲಸ ಇರುವುದಿಲ್ಲ. ಮಳೆಯಾಗುವ ವರೆಗೆ ಇದು ಮುಂದುವರೆಯುತ್ತದೆ. ಅದಾದ ಮೇಲೆ ರೈತರೆಲ್ಲ ಕೃಷಿಯಲ್ಲಿ ತೊಡಗುವುದರಿಂದ ಅಪರಾಧಗಳು ತಗ್ಗುತ್ತವೆ’ ಎಂದು ಅವರು ಹೇಳಿದ್ದಾರೆ.

ಅಂತೆಯೇ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಇಂತಹ ಪ್ರಕರಣಗಳ ಕಡೆಗೇ ಗಮನ ಹರಿಸುತ್ತಿದ್ದಾರೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ