
ಮೂಡಿಗೆರೆ (ನ..9): ಮಲೆನಾಡಿನ ಅರಣ್ಯ ಪ್ರದೇಶದಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಕಾಡುಕೋಣ ಶಿಕಾರಿ ಹಾಗೂ ಮಾಂಸ ಸರಬರಾಜು ಜಾಲವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅರಣ್ಯ ಅಧಿಕಾರಿಗಳು ಬೇಧಿಸಿದ್ದು, 6 ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಳೂರು ಹೊರಟ್ಟಿ ಗ್ರಾಮದ ಮಂಜಯ್ಯ ಮನೆಯ ಮೇಲೆ ಶುಕ್ರವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಉಪವಲಯ ಅರಣ್ಯಾಧಿಕಾರಿ ಸುಹಾಸ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಅಲ್ಲಿ ಬೇಯಿಸುತ್ತಿದ್ದ ಕಾಡುಕೋಣ ಮಾಂಸವನ್ನು ವಶಪಡಿಸಿಕೊಂಡಿದೆ. ಮಾಂಸ ಶುದ್ಧಗೊಳಿಸಿ ಹಂಚಿಕೊಂಡಿರುವ ನೀಡುವಳೆ ಗ್ರಾಮದ ಸೀನ, ಸುಂದರ್ ಮತ್ತು ಮಂಜಯ್ಯ, ಮಾಂಸ ಸರಬರಾಜಿನಲ್ಲಿ ಭಾಗಿಯಾಗಿದ್ದ ದೇಜಪ್ಪ ಮತ್ತು ಪ್ರದೀಪ್ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಶಿಕಾರಿ ಮಾಂಸ ತಿಂದ ತೋಟದ ಮಾಲೀಕ ಧೀರಜ್ ಪ್ರಭು ಸೇರಿದಂತೆ ಮೂವರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶಿಕಾರಿ, ಮಾಂಸ ಸರಬರಾಜು ಮತ್ತು ಕಳ್ಳಸಾಗಣೆ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ತಡರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶಿಕಾರಿ ಜಾಲದಲ್ಲಿ ಕಲ್ಮನೆ ಕಾಫಿ ತೋಟದ ಮ್ಯಾನೇಜರ್ ಬಿ.ಎಸ್.ರವೀಶ್ ಮತ್ತು ಬಾಳೆಹೊನ್ನೂರಿನ ಜೀವನ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಬಂಧಿತ ಮಂಜಯ್ಯ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳ್ಳಬೇಟೆ ಪ್ರಕರಣಗಳು ಹೆಚ್ಚಾಗಿದ್ದು, ಅರಣ್ಯ ಇಲಾಖೆಗೆ ಸವಾಲು ಎದುರಾಗಿದೆ. ಅಲ್ಲದೆ ಜಿಲ್ಲೆಯಾದ್ಯಂತ ಬಂದೂಕು ಪರವಾನಿಗೆಗೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಳ್ಳ ಬೇಟೆ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ