
ನವದೆಹಲಿ: 11 ವರ್ಷದ ಬಾಲಕನೋರ್ವ ನಿಗೂಢವಾಗಿ ಹತ್ಯೆಯಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾತ್ನಾದಲ್ಲಿ ನಡೆದಿದೆ. ಬಾಲಕನ ಶವ ಆತ ವಾಸವಿದ್ದ ಮನೆಯೊಳಗೆ ನೀಲಿ ಬಣ್ಣದ ಡ್ರಮ್‌ನೊಳಗೆ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಬಾಲಕನನ್ನು ಶಿವರಾಜ್ ಅಲಿಯಾಸ್ ಬಾದಲ್ ಎಂದು ಗುರುತಿಸಲಾಗಿದೆ. ಕೋಲ್ಗಾವನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಿದ್ಧಾರ್ಥನಗರದ ಬಾಡಿಗೆ ಮನೆಯೊಂದರಲ್ಲಿ ಕೊಲೆಯಾದ ಬಾಲಕನ ಕುಟುಂಬ ವಾಸವಿತ್ತು. ಅದೇ ಮನೆಯಲ್ಲಿ ಬಾಲಕನ ಶವ ಪತ್ತೆಯಾಗಿದ್ದು, ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಿ ಶವವನ್ನು ಡ್ರಮ್‌ನಲ್ಲಿ ತುಂಬಿ ಮುಚ್ಚಿಟ್ಟಿರುವ ದುಷ್ಕರ್ಮಿ ಮನೆಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದ.
ಸ್ಥಳೀಯ ವರದಿಗಳ ಪ್ರಕಾರ, ಬಾಲಕ ಶಿವರಾಜ್‌ನ ತಾಯಿ ಆಶಾ ರಜಾಕ್ ಅಲ್ಲೇ ಸುತ್ತಮುತ್ತಲ ಮನೆಗಳಲ್ಲಿ ಮನೆ ಕೆಲಸ ಮಾಡುತ್ತಾ ಅದೇ ಪ್ರದೇಶದಲ್ಲಿ ತನ್ನ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಳು. ಬಾಲಕನ ಕೊಲೆಯಾದ ದಿನವೂ ಆಕೆ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ಆಕೆಯ ಇಬ್ಬರು ಮಕ್ಕಳಿದ್ದರು. ಆದರೆ ಆಕೆ ಮಧ್ಯಾಹ್ನ ಮನೆಗೆ ಬಂದಾಗ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಆದರೆ ಮನೆಯಲ್ಲಿದ್ದ ಮಕ್ಕಳಿಬ್ಬರು ನಾಪತ್ತೆಯಾಗಿದ್ದರು. ನಂತರ ಆಕೆ ತನ್ನ ಮಗಳನ್ನು ಸಂಪರ್ಕಿಸಿದಾಗ ಆಕೆ ಸ್ವಲ್ಪ ಹೊತ್ತಿಗೂ ಮೊದಲು ಮನೆಯಿಂದ ಹೊರ ಹೋಗಿದ್ದಾಗಿ ಹೇಳಿದ್ದಳು. ಈ ಸಮಯದಲ್ಲಿ ಶಿವರಾಜ್ ಒಬ್ಬನೇ ಮನೆಯಲ್ಲಿದ್ದ. ಈ ವೇಳೆ ಆತಂಕ ಶುರುವಾಗಿದ್ದು, ಸುತ್ತಮುತ್ತಲು ಎಲ್ಲಾ ಕಡೆ ಅವರು ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲಿಯೂ ಮಗನಿರುವ ಸುಳಿವು ಸಿಗದೇ ಹೋದಾಗ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಬೀಗ ಹಾಕಿದ ಮನೆಯ ಬೀಗ ಒಡೆದು ಒಳಗೆ ಶೋಧ ನಡೆಸಿದಾಗ ಕೊನೆಗೂ ಬಾಲಕ ಸಿಕ್ಕಿದ್ದಾನೆ. ಆದರೆ ಜೀವಂತವಾಗಿ ಅಲ್ಲ ಶವವಾಗಿ. ಮಗುವಿನ ಶವವನ್ನು ನೀಲಿ ಡ್ರಮ್‌ನೊಳಗೆ ಮುಚ್ಚಿಡಲಾಗಿತ್ತು. ಕೂಡಲೇ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಬಾಲಕನಿಗೆ ಏನಾಯ್ತು ಎಂಬುದನ್ನು ತಿಳಿಯಲು ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.
ಬಾಲಕನ ಕುಟುಂಬದವರು ವ್ಯಕ್ತಿಯೊಬ್ಬನ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಆತನನ್ನು ಮಥುರಾ ರಜಾಕ್ ಎಂದು ಗುರುತಿಸಲಾಗಿದೆ. ಕುಟುಂಬದವರ ಪ್ರಕಾರ, ಈ ಬಾಲಕನ ಕುಟುಂಬ ಹಾಗೂ ಆ ವ್ಯಕ್ತಿಯ ನಡುವೆ ಭಿನ್ನಾಭಿಪ್ರಾಯವಿತ್ತು. ಬಾಲಕನ ತಾಯಿ ಆಶಾ ಪ್ರಕಾರ, ಮಥುರಾ ತುಂಬಾ ಹಿಂದಿನಿಂದಲೂ ಮದುವೆ ಆಗುವಂತೆ ಆಶಾಗೆ ಪೀಡಿಸುತ್ತಿದ್ದ. ಆದರೆ ಆಕೆ ಆತನ ಮನವಿಯನ್ನು ನಿರಾಕರಿಸಿದಾಗ ಆತ ಆಶಾಗೆ ಕೆಟ್ಟ ಪದಗಳನ್ನು ಬಳಸಿ ನಿಂದಿಸುವುದಕ್ಕೆ ಶುರು ಮಾಡಿದ್ದ. ಆತನ ಪ್ರೇಮ ನಿವೇದನೆಯನ್ನು ನಿರಾಕರಿಸಿದ ನಂತರವೇ ಆತ ಸೇಡು ತೀರಿಸಿಕೊಳ್ಳಲು ಮಗುವಿನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಹಠಕ್ಕೆ ಬಿದ್ದ ಮಗಳು, ಮರ್ಯಾದೆಗಾಗಿ ಕೊಂದ ತಂದೆ
ಎರಡು ದಿನಗಳ ಹಿಂದಷ್ಟೇ ಇದೇ ವಿಚಾರವಾಗಿ ಮಗುವಿನ ತಂದೆ ಹಾಗೂ ಈ ಮಥುರಾ ರಜಾಕ್ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ಆತ ಮಥುರಾ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದ. ಘಟನೆಯ ಬಳಿಕ ಶಂಕಿತ ಆರೋಪಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಈಗ ಪೊಲೀಸರು ಬಲೆ ಬೀಸಿದ್ದಾರೆ. ಆತ ವಾಸವಿರುವ ಸ್ಥಳ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಬೀಗ ಹಾಕಲಾಗಿದೆ.
ಇದನ್ನೂ ಓದಿ: ತಿರುಚಿ ಚರ್ಚ್‌ನಲ್ಲಿ ಮೊಣಕಾಲೂರಿ ನಡೆದು ಪ್ರಾರ್ಥನೆ ಮಾಡಿದ ನಟ ವಿಜಯ್: ಟ್ರೋಲ್ ಆಗಿದ್ದೇಕೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ