Udupi: ಮನೆಯೊಂದರಲ್ಲಿ ತಾಯಿ ಮಗಳ ಶವ ಪತ್ತೆ, ಸಾವಿನ ಹಿಂದೆ ಅನುಮಾನದ ಹುತ್ತ

By Suvarna News  |  First Published May 10, 2022, 3:40 PM IST

* ಮನೆಯೊಂದರಲ್ಲಿ ತಾಯಿ ಮಗಳ ಶವ ಪತ್ತೆ
* ಪತಿಯಿಂದ ದೂರವಾಗಿ ಮಕ್ಕಳೊಂದಿಗೆ ವಾಸವಾಗಿದ್ದ ಮಹಿಳೆ
* ಮಣಿಪಾಲ ಹೊರವಲಯದಲ್ಲಿರುವ ಆತ್ರಾಡಿ ಗ್ರಾಮದ ಮದಗ ಎಂಬಲ್ಲಿ ಈ ದುರ್ಘಟನೆ


ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ, (ಮೇ.10):
ಉಡುಪಿಯ ಹಿರಿಯಡ್ಕ ಸಮೀಪದ ಅತ್ರಾಡಿಯ ಮನೆಯೊಂದರಲ್ಲಿ ತಾಯಿ ಮತ್ತು ಮಗುವಿನ ಶವ ಪತ್ತೆಯಾಗಿದೆ. ಪತಿಯಿಂದ ದೂರವಾಗಿ ಮಕ್ಕಳೊಂದಿಗೆ ವಾಸವಾಗಿದ್ದ ಮಹಿಳೆಯ ಸಾವು ಹಲವು ಸಂಶಯಗಳನ್ನು ಹುಟ್ಟುಹಾಕಿದೆ. 

 ಜೊತೆಗೆ 10 ವರ್ಷ ಪ್ರಾಯದ ಹೆಣ್ಣು ಮಗು ಕೂಡ ಅಸುನೀಗಿದೆ. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಶಂಕಿಸಲಾಗಿದ್ದರೂ ಪ್ರಾಥಮಿಕ ತನಿಖೆಯ ಬಳಿಕ ಕೊಲೆ ಸಂಶಯ ದಟ್ಟವಾಗಿದೆ.

Latest Videos

undefined

ಮಣಿಪಾಲ ಹೊರವಲಯದಲ್ಲಿರುವ ಆತ್ರಾಡಿ ಗ್ರಾಮದ ಮದಗ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಮಹಿಳೆಯನ್ನು 28 ವರ್ಷ ಪ್ರಾಯದ ಚೆಲುವಿ ಎಂದು ಗುರುತಿಸಲಾಗಿದೆ, ಜೊತೆಗೆ ಇವಳ 10 ವರ್ಷ ಪ್ರಾಯದ ಹೆಣ್ಣು ಮಗು ಪ್ರಿಯಾ ಕೂಡ ಮನೆಯ ಕೋಣೆಯಲ್ಲಿ ಶವವಾಗಿ ಕಂಡುಬಂದಿದೆ. ನಿನ್ನೆ ರಾತ್ರಿಯವರೆಗೂ ಚೆಲುವಿ ಎಲ್ಲರ ಜೊತೆಗೂ ಮಾತನಾಡುತ್ತಾ ಚೆನ್ನಾಗಿದ್ದರು.

ತನ್ನ ಮದುವೆ ಇನ್ವಿಟೇಷನ್ ಕೊಡಲು ಬಂದ ಯುವತಿಯ ಗ್ಯಾಂಗ್‌ರೇಪ್‌ ಮಾಡಿ ಮಾರಿದ ಕಾಮುಕರು!

 ಆದರೆ ಇಂದು ಬೆಳಿಗ್ಗೆ ಈಕೆ ಕರೆ ಸ್ವೀಕರಿಸದೇ ಇದ್ದಾಗ ಸಂಬಂಧಿಕರು ಬಂದು ಮನೆ ಬಾಗಿಲು ತೆರೆದು ನೋಡಿದರು. ಈ ವೇಳೆ ತಾಯಿ ಮತ್ತು ಮಗಳ ಶವ ಕೋಣೆಯೊಂದರಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಆರಂಭದಲ್ಲಿ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ಒಂಟಿಯಾಗಿ ಬದುಕು ಸವೆಸಿದ್ದ ಚೆಲುವಿ ತನ್ನ ಮಕ್ಕಳನ್ನು ಸ್ವಾವಲಂಬನೆಯಿಂದ ಸಾಕುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಶವವನ್ನು ಕಂಡಾಗ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದು ಯಾರೋ ಪರಿಚಿತರೇ ಈಕೆಯನ್ನು ಕೊಲೆಗೈದಿರುವ ಬೇಕು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಮೂಲತಃ ತಮಿಳುನಾಡಿನ ಸಮಗಾರ ಸಮುದಾಯದ ಕೆಲ ಕುಟುಂಬಗಳು ಹಲವಾರು ವರ್ಷಗಳಿಂದ ಈ ಪರಿಸರದಲ್ಲಿ ವಾಸಮಾಡುತ್ತಿದ್ದಾರೆ. ಚೆಲುವಿ ಕೂಡ ಇದೆ ಕುಟುಂಬಕ್ಕೆ ಸೇರಿದ್ದಾರೆ .ಈಕೆಯ ಶವ ಪತ್ತೆಯಾದ ಮನೆಯಿಂದ ಕೂಗಳತೆಯ ದೂರದಲ್ಲಿ ತಾಯಿಯ ಮನೆ ಇದೆ. ಆದರೆ ತಾಯಿ ಸಂಬಂಧಿಯೊಬ್ಬರು ತೀರಿದ ಹಿನ್ನೆಲೆಯಲ್ಲಿ ಭದ್ರಾವತಿಗೆ ತೆರಳಿದ್ದರು. ತಾಯಿಯ ಜೊತೆ ಚೆಲುವಿಯ ಮಗನು ಕೂಡ ಹೋಗಿದ್ದ. ಹಾಗಾಗಿ ಈ ಪುಟ್ಟ ಮನೆಯಲ್ಲಿ ತಾಯಿ ಮತ್ತು ಮಗಳು ಮಾತ್ರ ವಾಸವಾಗಿದ್ದರು. ನಿನ್ನೆ ರಾತ್ರಿಯ ನಂತರ ಮನೆಗೆ ಬಂದ ಪರಿಚಯಸ್ಥರು ಯಾರೋ ಈಕೆಯನ್ನು ಕೊಲೆಗೈದಿರಬೇಕೆಂದು ಶಂಕಿಸಲಾಗಿದೆ.

 ಮನೆಯಲ್ಲಿದ್ದ ಚಿನ್ನಾಭರಣ, ಫೋಟೋಗಳು, ಮತ್ತು ಮೊಬೈಲ್ ಕಾಣೆಯಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಹೋಂ ನರ್ಸ್ ಹಾಗೆ ಚೆಲುವಿ ದುಡಿಯುತ್ತಿದ್ದರು. ಪತಿ ತೊರೆದು ಹೋದ ನಂತರ ಈಕೆಯ ಸ್ವಾವಲಂಬನೆಯ ಬದುಕಿಗೆ ಈ ಉದ್ಯೋಗವೇ ಆಧಾರವಾಗಿತ್ತು. ಸರಕಾರದಿಂದ ಮಂಜೂರಾದ 3 ಸನ್ಸ್ ಭೂಮಿಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಮೊಬೈಲ್ ಫೋನ್ ನಲ್ಲಿ ಯಾವುದೋ ವ್ಯಕ್ತಿಯ ಜೊತೆ ನಿರಂತರವಾಗಿ ಮಾತನಾಡುತ್ತಿದ್ದುದನ್ನು ಸಂಬಂಧಿಕರು ಗಮನಿಸಿದ್ದಾರೆ. ಉದ್ಯೋಗ ಮಾಡುವ ಪರಿಸರದಲ್ಲಿ ಪರಿಚಯಸ್ಥರು ಯಾರಾದರೂ ಈಕೆ ಒಂಟಿಯಾಗಿರುವುದನ್ನು ಗಮನಿಸಿ ಆತ್ಮೀಯತೆ ಬೆಳೆಸಬೇಕು ಎಂದು ಸಂಶಯವಿದೆ . ಭಾನುವಾರ ಯಾವುದೋ ಕಾರಣಕ್ಕೆ ಗಲಾಟೆ ಸಂಭವಿಸಿ ತಾಯಿ ಮತ್ತು ಮಗುವನ್ನು ಹತ್ಯೆ ಮಾಡಿರಬಹುದು ಎಂಬುದು ಸ್ಥಳೀಯರಿಗೆ ಇರುವ ಸಂಶಯ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ವಾನದಳ FSL ತಂಡ ಬಂದಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೊಲೆ ಸಂಶಯ ದಟ್ಟವಾಗಿರುವುದರಿಂದ ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ

click me!