ಅಂಗಡಿ ತೆರವು ಮಾಡಿಸಿದ ಸಿಟ್ಟಿಗೆ ಉದ್ಯಮಿ ಮೇಲೆ ಗುಂಡಿನ ದಾಳಿ!

By Kannadaprabha News  |  First Published Aug 24, 2020, 7:31 AM IST

ಸಮೋಸಾ ತಿನ್ನಲು ಬರುತ್ತಿದ್ದ ಯುವಕರಿಂದ ಅಡ್ಡಾದಿಡ್ಡಿ ಬೈಕ್‌ ಪಾರ್ಕಿಂಗ್‌| ಕಾರು ತೆಗೆಯಲು ಪರದಾಡುತ್ತಿದ್ದ ಉದ್ಯಮಿ| ಕೆ.ಅರ್‌.ಪುರದಲ್ಲಿ ಘಟನೆ| ರಿಯಲ್‌ ಎಸ್ಟೇಟ್‌ ಉದ್ಯಮಿ ಕಚೇರಿ ಇದ್ದ ಕಟ್ಟಡದಲ್ಲೇ ಸಮೋಸಾ ಅಂಗಡಿ| ಯುವಕರೊಂದಿಗೆ ಗಲಾಟೆ, ಠಾಣೆ ಮೆಟ್ಟಿಲೇರಿದ ಜಗಳ| 


ಬೆಂಗಳೂರು(ಆ.24): ಕ್ಷುಲ್ಲಕ ಕಾರಣಕ್ಕೆ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಶನಿವಾರ ರಾತ್ರಿ ಕೆ.ಆರ್‌.ಪುರಂನಲ್ಲಿ ನಡೆದಿದೆ.ಕೆ.ಆರ್‌.ಪುರಂ ನಿವಾಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಆಟೋ ಬಾಬು ಎಂಬುವರ ಮೇಲೆ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್‌ ಗುಂಡು ಬಾಬು ಅವರ ಕೈಗೆ ತಗುಲಿದ್ದು, ಬಳಿಕ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಗಾಯಗೊಂಡಿರುವ ಬಾಬು ಸತ್ಯಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸೋಹೆಲ್‌ ಎಂಬಾತ ತನ್ನ ಸಹಚರರೊಂದಿಗೆ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ದೇವರಾಜ್‌ ಹೇಳಿದ್ದಾರೆ.

Tap to resize

Latest Videos

ಬೆಕ್ಕಿನ ಮೇಲೆ ಫೈರಿಂಗ್ ನಡೆಸಿ ಹತ್ಯೆ!

ಬಾಬು ಕೆ.ಆರ್‌.ಪುರಂನ ದುರ್ಗಾ ರಸ್ತೆಯಲ್ಲಿ ಕಚೇರಿ ಹೊಂದಿದ್ದಾರೆ. ರಾತ್ರಿ 9.45ರ ಸುಮಾರಿಗೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ವೇಳೆಯಲ್ಲೇ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಬಾಬು ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದ ಬಾಬು, ರಕ್ಷಣೆಗಾಗಿ ಕೂಗಾಡಿದ್ದರು. ಅಷ್ಟರಲ್ಲೇ ಆರೋಪಿಗಳು, ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಸ್ಥಳೀಯರು ಸಹಾಯಕ್ಕೆ ಬರುವಷ್ಟರಲ್ಲೇ ಆರೋಪಿಗಳು ಪರಾರಿಯಾಗಿದ್ದಾರೆ. ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರಿಂದ ತಲೆಗೆ ಗಾಯವಾಗಿದ್ದು, ಒಂದು ಗುಂಡು ಅವರ ಕೈಗೆ ತಗುಲಿದೆ. ಅದೃಷ್ಟವಶಾತ್‌ ಗುಂಡಿನ ದಾಳಿಯಿಂದ ಗಾಯಾಳು ಪಾರಾಗಿದ್ದಾರೆ ಎಂದು ಡಿಸಿಪಿ ತಿಳಿಸಿದರು.

ಕಚೇರಿ ಪಕ್ಕದಲ್ಲೇ ಮಿರ್ಜಾ ಎಂಬುವರು ಸಮೋಸ ಅಂಗಡಿ ಇಟ್ಟುಕೊಂಡಿದ್ದರು. ಸಮೋಸಾ ತಿನ್ನಲು ಬರುತ್ತಿದ್ದ ಯುವಕರು ಬಾಬು ಅವರ ಕಚೇರಿ ಬಳಿ ಅಡ್ಡಾದಿಡ್ಡಿಯಾಗಿ ಬೈಕ್‌ಗಳನ್ನು ನಿಲ್ಲಿಸಿದ್ದರು. ಇದರಿಂದಾಗಿ ಬಾಬು ಅವರು ತಮ್ಮ ಕಾರು ತೆಗೆಯಲು ಕಷ್ಟವಾಗುತ್ತಿತ್ತು. ಇದೇ ವಿಚಾರಕ್ಕೆ ಒಮ್ಮೆ ಅಪರಿಚಿತ ಯುವಕರು ಮತ್ತು ಬಾಬು ನಡುವೆ ಜಗಳ ನಡೆದು ಠಾಣೆಗೆ ಹೋಗಿದ್ದರು. ಪೊಲೀಸರು ಬುದ್ಧಿ ಹೇಳಿ ಎರಡು ಕಡೆಯವರನ್ನು ಕಳುಹಿಸಿ ಕೊಟ್ಟಿದ್ದರು. ಇದಾದ ಸ್ವಲ್ಪ ದಿನಕ್ಕೆ ಕಟ್ಟಡದ ಮಾಲೀಕರು ಸಮೋಸಾ ಅಂಗಡಿಯನ್ನು ಖಾಲಿ ಮಾಡಿಸಿದ್ದರು. ಇದೇ ವಿಚಾರಕ್ಕೆ ಸಮೋಸ ಅಂಗಡಿ ಮಾಲಿಕ ಮಿರ್ಜಾ ಸ್ನೇಹಿತ ಸೋಹೆಲ್‌ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸ್ಥಳೀಯ ಸಿಸಿಟಿವಿ, ಮೊಬೈಲ್‌ ಕರೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಸಿಪಿ ದೇವರಾಜ್‌ ಮಾಹಿತಿ ನೀಡಿದರು.
 

click me!