ಆಲೂರು: ನಿಧಿಗಾಗಿ ದೇಗುಲದಲ್ಲಿ ಗುಂಡಿ ಅಗೆದ ಖದೀಮರು..!

By Kannadaprabha NewsFirst Published Mar 12, 2021, 11:10 AM IST
Highlights

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬಂಡಿತಿಮ್ಮನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಪುರಾತನ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಘಟನೆ| ದೇವಸ್ಥಾನದಲ್ಲಿ ನಿಧಿ​ಗಾಗಿ 15 ಅಡಿ ಗುಂಡಿ ಅಗೆದ ದುಷ್ಕರ್ಮಿಗಳು| 

ಆಲೂರು(ಮಾ.12): ತಾಲೂಕಿನ ಕಸಬಾ ಹೋಬಳಿ ಬಂಡಿತಿಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಪುರಾತನ ಸೋಮೇಶ್ವರ ಸ್ವಾಮಿ(ಈಶ್ವರ) ದೇವಸ್ಥಾನದಲ್ಲಿ ನಿ​ಧಿಗಾಗಿ ದುಷ್ಕರ್ಮಿಗಳು ಗುಂಡಿ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದೇವಾಲಯದ ಆವರಣದಲ್ಲಿ ಸುಂದರವಾದ ಕಲ್ಲಿನ ಈಶ್ವರ ಲಿಂಗಗಳಿದ್ದು, ಗರ್ಭಗುಡಿಯ ಹಾಗೂ ಮುಂಭಾಗದಲ್ಲಿದ್ದ ಕಲ್ಲಿನ ಗಣೇಶ ಮೂರ್ತಿ ಹಾಗೂ ಈಶ್ವರ ಲಿಂಗಗಳನ್ನು ಕೆಡವಿ ಅದರ ಅಡಿಯಲ್ಲಿ ಕಲ್ಲುಗಳನ್ನು ತೆಗೆದು ಕಳ್ಳರು ನಿ​ಧಿಗಾಗಿ 15 ಅಡಿ ಆಳದ ಗುಂಡಿ ಅಗೆದು ಹುಡುಕಾಟ ನಡೆಸಿದ್ದಾರೆ. ಗುಂಡಿ ಅಗೆಯಲಾದ ಸ್ಥಳದಲ್ಲಿ ಹೂವು, ವೀಳ್ಯದೆಲೆ ಮುಂತಾದ ಸಾಮಗ್ರಿಗಳು ಸಿಕ್ಕಿವೆ. ನಿಧಿ​ ಶೋಧಕ್ಕಿಂತ ಮೊದಲು ಪೂಜೆ ಮಾಡಿರಬಹುದು ಅಲ್ಲದೆ, ಎರಡು ದಿನಗಳ ಹಿಂದೆ ಈ ಕೃತ್ಯ ನಡೆದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಇತಿಹಾಸ:

ಯಗಚಿ ನದಿ ದಡದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ಸುಮಾರು 11, 12ನೇ ಶತಮಾನದಲ್ಲಿ ಚಾಲುಕ್ಯರು ಹಾಗೂ ವಿಜಯನಗರದ ಅರಸರ ಕಾಲದ್ದು ಎಂದು ಇಲ್ಲಿರುವ ಸ್ಥಳೀಯರಿಂದ ತಿಳಿಯುತ್ತಿದೆ. ಪುರಾತನ ಕಾಲದಲ್ಲಿ ವರ್ಷಕ್ಕೊಮ್ಮೆ ವಜ್ರ ವೈಢೂರ್ಯದಿಂದ ಶೃಂಗರಿಸಿದ ಸೋಮೇಶ್ವರ ಸ್ವಾಮಿ(ಈಶ್ವರ) ಜಾತ್ರೆ ನಡೆಯುತ್ತಿತ್ತಂತೆ. ಅಲ್ಲದೆ ಬಂಡಿ ಚಕ್ರದ ರಥ ನಡೆಯುತ್ತಿದ್ದರಿಂದ ಈ ಸ್ಥಳಕ್ಕೆ ಬಂಡಿತಿಮ್ಮನಹಳ್ಳಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.

ಕಲಬುರಗಿ: ನಿಧಿಗಾಗಿ ಭೂಮಿ ಅಗೆಯುತ್ತಿದ್ದವರ ಬಂಧನ

ಸುಮಾರು 80 ದಶಕದಲ್ಲಿ ಇದೇ ದೇವಾಲಯದಲ್ಲಿ ಕಳವು ಮಾಡಲು ಬಂದಾಗ ದೇವರ ವಿಗ್ರಹವನ್ನು ಗರ್ಭಗುಡಿಯಿಂದ ಹೊರತಂದು ಯಗಜಿ ನದಿಯನ್ನು ಹಾದು ಹೋಗುವಾಗ ಅ ದೇವರ ಮಹಿಮೆಯಿಂದ ಇಬ್ಬರು ಕಳ್ಳರು ರಕ್ತಸ್ರಾವದಿಂದ ಮೃತಪಟ್ಟಿದ್ದರಂತೆ. ಅಲ್ಲಿಂದ ವಿಗ್ರಹವನ್ನು ಮತ್ತೆ ದೇಗುಲಕ್ಕೆ ತಂದಾಗ ಶಾಸ್ತ್ರದಲ್ಲಿ ನರಮನುಷ್ಯನ ಬಲಿಯಾಗಬೇಕು ಎಂದು ಹೇಳಲಾಗಿದ್ದರಿಂದ ಯಾರೊಬ್ಬರು ಅ ದೇವಸ್ಥಾನದ ಕಡೆ ಮುಖ ಮಾಡುತ್ತಿರಲಿಲ್ಲ. ಅಲ್ಲದೆ ನಿಧಿ​ಯನ್ನು ಕಾಯುವ ಒಂದು ನಾಗರಹಾವು ಅಲ್ಲಿಯೇ ವಾಸವಿತ್ತು. ಈಗಲೂ ಅಲ್ಲೇ ವಾಸವಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ರಾಜ ಮಹಾರಾಜರು, ಪಾಳೆಗಾರರು ಬೆಲೆಬಾಳುವ ವಸ್ತುಗಳನ್ನು ಭೂಮಿಯೊಳಗೆ ಹೂತಿಟ್ಟಿರಬಹುದೆಂಬ ಅನುಮಾನದಿಂದ ನಿಧಿ​ಗಾಗಿ ದುಷ್ಕರ್ಮಿಗಳು ಆಗಿಂದಾಗ್ಗೆ ದೇಗುಲಗಳಲ್ಲಿ ಶೋಧ ಕಾರ್ಯ ನಡೆಸುತ್ತಲೇ ಇದ್ದರೂ ಅಧಿ​ಕಾರಿಗಳು ಮುಂಜಾಗ್ರತಾ ಕ್ರಮ ವಹಿಸುತ್ತಿಲ್ಲ. ಪುರಾತನ ದೇಗುಲಗಳ ರಕ್ಷಣೆಗೆ ಮುಜರಾಯಿ ಇಲಾಖೆ ಮುಂದಾಗಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ನಟರಾಜು ನಾಕಲಗೂಡು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿ​ಸಿದಂತೆ ಇಲಾಖೆಗೆ ವಿಷಯ ತಿಳಿಸಿದ ಪರಿಣಾಮ ಇಲಾಖೆ ಸಿಬ್ಬಂದಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಾದರೂ ಯಾವ ಕ್ರಮ ಕೈಗೊಂಡಿಲ್ಲ. ಇಲಾಖೆ ಅ​ಧಿಕಾರಿಗಳು ದೇವಸ್ಥಾನವನ್ನು ಅಭಿವೃದ್ಧಿ ಪಡಿಸದಿದ್ದರೂ ಯತಾಸ್ಥಿತಿಯಲ್ಲಿ ಸಂರಕ್ಷಿಸಬೇಕು ಎಂದು ಗ್ರಾಪಂ ಸದಸ್ಯ ಪೃಥ್ವಿಜಯರಾಮ್‌ ಹೇಳಿದ್ದಾರೆ.

ಗ್ರಾಮ ಲೆಕ್ಕಿಗರ ಹಾಗೂ ಕಂದಾಯ ಅಧಿ​ಕಾರಿಗಳಿಂದ ದೇವಾಲಯದ ವರದಿ ಪಡೆಯಲಾಗಿದೆ. ದೇವಾಲಯ ಮುಜರಾಯಿ ಇಲಾಖೆಗೆ ಸೇರಿಲ್ಲ. ಸ್ಥಳೀಯರು ಘಟನೆ ಕುರಿತು ಠಾಣೆಗೆ ದೂರು ನೀಡಿದರೆ, ಶಾಸಕರ ಅಥವಾ ಸಂಸದರ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿ ಮಾಡಲಾಗುವುದು ಎಂದು ತಹಸೀಲ್ದಾರ್‌ ಶಿರೀನ್‌ ತಾಜ್‌ ಹೇಳಿದ್ದಾರೆ. 
 

click me!