ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮತಾಂತರಕ್ಕೆ ಒತ್ತಾಯಿಸಿ ಪತ್ನಿ ಮತ್ತು ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಶ್ರೀಕಾಂತ್ ಎಂಬಾತ ತನ್ನ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶೃತಿ ಮೇಲೆ ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯ (ಏ.12): ರಾಜ್ಯದಲ್ಲಿ ಮತಾಂತರದ ಹಾವಳಿ ಮುಂದುವರಿದಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ ಆರೋಪದಡಿ ಶ್ರೀಕಾಂತ್ ಎಂಬಾತನಿಂದ ತನ್ನ ಪತ್ನಿ ಲಕ್ಷ್ಮೀ ಹಾಗೂ ಅತ್ತೆ ಶೃತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಪಾಲಹಳ್ಳಿ ಗ್ರಾಮದ ಲಕ್ಷ್ಮೀ ಅವರು 15 ವರ್ಷಗಳ ಹಿಂದೆ ಶ್ರೀಕಾಂತ್‌ನನ್ನು ವಿವಾಹವಾಗಿದ್ದರು. ಸುಮಾರು 7-8 ವರ್ಷಗಳ ಹಿಂದೆ ಶ್ರೀಕಾಂತ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾನೆ ಎನ್ನಲಾಗಿದೆ. ಅನಂತರ, ತನ್ನ ಪತ್ನಿ ಲಕ್ಷ್ಮೀ, ಮಕ್ಕಳು ಹಾಗೂ ಅತ್ತೆ ಶೃತಿಯನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಕುಟುಂಬದಲ್ಲಿ ಪದೇ ಪದೇ ಜಗಳಗಳು ನಡೆದಿವೆ.
ಇದನ್ನೂ ಓದಿ: ಬಾಗಲಕೋಟೆ: ಮತಾಂತರಕ್ಕೆ ಪ್ರಚೋದನೆ, ಮೂವರ ವಿರುದ್ಧ ಕೇಸ್!
ಕಳೆದ ಮೂರು ದಿನಗಳ ಹಿಂದೆ ಲಕ್ಷ್ಮೀ, ಈ ಒತ್ತಡದಿಂದಾಗಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಶನಿವಾರ ರಾಜಿಯಾಗಿ ಮಾತನಾಡುವುದಾಗಿ ಕರೆದ ಶ್ರೀಕಾಂತ್, ಲಕ್ಷ್ಮೀ ಮತ್ತು ಶೃತಿ ಮೇಲೆ ಮಾರಕಾಸ್ತ್ರಗಳಿಂದ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಈ ದಾಳಿಯಲ್ಲಿ ಶ್ರೀಕಾಂತ್‌ನ ಕುಟುಂಬಸ್ಥರೂ ಭಾಗಿಯಾಗಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಗಾಯಾಳುಗಳ ಸ್ಥಿತಿ:
ಗಂಭೀರವಾಗಿ ಗಾಯಗೊಂಡ ಲಕ್ಷ್ಮೀ ಮತ್ತು ಶೃತಿ ಅವರನ್ನು ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ: ಮದ್ದೂರು : ಪತ್ನಿ, ಮಗು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನ- ಪತಿ ಆರೋಪ, ಏನಿದು ಪ್ರಕರಣ?
ಪೊಲೀಸ್ ಕ್ರಮ ಏನು?
ಈ ಘಟನೆ ಶ್ರೀರಂಗಪಟ್ಟಣ ಟೌನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುವ ಸಾಧ್ಯತೆಯಿದೆ.. ಶ್ರೀಕಾಂತ್ ಮತ್ತು ಇತರ ಆರೋಪಿಗಳ ವಿರುದ್ಧ ಕಾನೂನು ಕ್ರಮವಾಗಲಿದೆ. ರಾಜ್ಯದಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ.