
ಮುಂಬೈ: 75ನೇ ಸ್ವತಂತ್ರ ದಿನಾಚರಣೆಯಂದು ಉದ್ಯಮಿ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಆಗಸ್ಟ್ 30ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಮುಂಬೈನ 37ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಆರೋಪಿಯನ್ನು ವಿಶ್ನು ಭೌಮಿಕ್ (56) ಎಂದು ಗುರುತಿಸಲಾಗಿದೆ. ಆರೋಪಿ ದಹಿಸಾರ್‌ನ ನಿವಾಸಿಯಾಗಿದ್ದು, ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ವಕೀಲರು ಆರೋಪಿಯನ್ನು ಹತ್ತು ದಿನಗಳ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ ಆರೋಪಿ ಪರ ವಕೀಲರು, ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ ಎಂದರು.
ಆರೋಪಿ ನೇರವಾಗಿ ಮುಕೇಶ್ ಅಂಬಾನಿಯವರಿಗೆ ಕರೆ ಮಾಡಿಲ್ಲ. ಆಸ್ಪತ್ರೆಗೆ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾಗುವ ಆಶಯ ಆರೋಪಿಗೆ ಇರಲಿಲ್ಲ. ಅವರು ಮಾನಸಿಕ ಅಸ್ವಸ್ಥರು. ಅವರು ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಪಡೆಯುತ್ತಿರುವುದಕ್ಕೆ ದಾಖಲೆಗಳಿವೆ, ಎಂದು ಆರೋಪಿ ಪರ ವಕೀಲರು ಜಾಮೀನಿಗಾಗಿ ಮನವಿ ಮಾಡಿದರಾದರೂ ಫಲಿಸಲಿಲ್ಲ.
ಇದನ್ನೂ ಓದಿ: 75th Independence Day ತ್ರಿವರ್ಣ ಧ್ವಜದ ರಂಗಿನಲ್ಲಿ ಮುಖೇಶ್ ಅಂಬಾನಿ ಅವರ ಆಂಟಿಲಿಯಾ
ಇತ್ತ ಸರ್ಕಾರಿ ವಕೀಲರು, ಇದೊಂದು ಗಂಭೀರ ಪ್ರಕರಣವಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ವತಂತ್ರ ದಿನಾಚರಣೆಯಂದೇ ಬೆದರಿಕೆ ಕರೆ ಮಾಡಲಾಗಿದೆ. ಬೇರೆ ಯಾವುದೇ ದಿನ ಯಾಕೆ ಮಾಡಿಲ್ಲ. ಮುಕೇಶ್ ಅಂಬಾನಿ ಅವರನ್ನೇ ಗುರಿಯಾಗಿಸಿ ಯಾಕೆ ಬೆದರಿಕೆ ಹಾಕಲಾಗಿದೆ. ಬೇರಾವುದೇ ಉದ್ಯಮಿಗೂ ಬೆದರಿಕೆ ಕರೆ ಮಾಡಿಲ್ಲ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆರೋಪಿ ಜತೆ ಯಾರಿದ್ದರು, ಹತ್ಯೆಗೆ ಸಂಚು ರೂಪಿಸಲಾಗಿತ್ತಾ. ಕಾರಣವೇನು ಎಂಬುದರ ಬಗ್ಗೆ ಸುದೀರ್ಘ ವಿಚಾರಣೆಯ ಅಗತ್ಯವಿದೆ ಎಂದು ಪೊಲೀಸ್ ಪರ ವಕೀಲರು ಪ್ರತಿವಾದ ಮಂಡಿಸಿದರು.
ಇದನ್ನೂ ಓದಿ: ಮುಖೇಶ್ ಅಂಬಾನಿಗೆ ಮತ್ತೆ ಜೀವ ಬೆದರಿಕೆ ಕರೆ, ಮುಂಬೈ ಪೊಲೀಸ್ ಅಲರ್ಟ್!
ಆರೋಪಿ ಈ ರೀತಿಯ ಪ್ರಕರಣದಲ್ಲಿ ಭಾಗಿಯಾಗಿರುವುದು ಇದು ಮೊದಲೇನಲ್ಲ. ಅವರು ಈ ಹಿಂದೆಯೂ ಈ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ತಂತ್ರಜ್ಞಾನ ಬಳಸಿ ವಿಚಾರಣೆಯ ಅಗತ್ಯವಿದೆ, ಇನ್ನೂ ಪ್ರಾಥಮಿಕ ತನಿಖೆಯ ಹಂತದಲ್ಲಿರುವುದರಿಂದ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಮನವಿಯನ್ನು ಮನ್ನಿಸಿದ ನ್ಯಾಯಾಲಯ ಆಗಸ್ಟ್ 30ರವರೆಗೆ ಪೊಲೀಸ್ ಕಸ್ಟಡಿಗೆ ಆರೋಪಿ ವಿಷ್ಣು ಭೌಮೇಶ್‌ರನ್ನು ನೀಡಿ ಆದೇಶಿಸಿದೆ.
ಇದನ್ನೂ ಓದಿ: ಅಂಬಾನಿ, ಅದಾನಿ ಕೈಗೆ ಚಿನ್ನದ ಖಜಾನೆ ನೀಡಲು ಕೇಂದ್ರ ಸಿದ್ಧತೆ: ಸಿದ್ದರಾಮಯ್ಯ ಕಿಡಿ
ಆರೋಪಿ ನೇರವಾಗಿ ಮುಕೇಶ್ ಅಂಬಾನಿ ಅವರಿಗೇ ಕರೆ ಮಾಡಿದ್ದಾರೆ ಎಂಬ ರೀತಿ ಪೊಲೀಸರು ಬಿಂಬಿಸಿದ್ದಾರೆ. ಆದರೆ ಇದು ಸತ್ಯವಲ್ಲ. ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಇರಾದೆ ವಿಷ್ಣು ಭೌಮೇಶ್ ಅವರಿಗೆ ಇಲ್ಲ. ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ತಪ್ಪಾಗಿ ಕರೆ ಮಾಡಿದ್ದಾರೆ ಎಂದು ವಕೀಲರು ವಾದಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಆರೋಪಿ ವಿಷ್ಣು ಭೌಮೇಶ್ ನಿಜಕ್ಕೂ ಮಾನಸಿಕ ಅಸ್ವಸ್ಥರಾ ಎಂಬುದನ್ನು ತನಿಖೆಯ ನಂತರವಷ್ಟೇ ಅರಿಯಲು ಸಾಧ್ಯ. ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ