ಆಸ್ಪತ್ರೆ ಮಾಹಿತಿ ಕದ್ದ ಸಿಬ್ಬಂದಿ: ಒಂದೆರಡಲ್ಲ, 60 ಕೋಟಿ ನಷ್ಟ

By Suvarna NewsFirst Published Jan 4, 2021, 7:03 AM IST
Highlights

ಆಸ್ಪತ್ರೆ ಮಾಹಿತಿ ಕದ್ದು 60 ಕೋಟಿ ನಷ್ಟಮಾಡಿದ ಕಂಪನಿಯ ಸಿಬ್ಬಂದಿ | ವಿಶಾಖಪಟ್ಟಣ ಮೂಲದ ಆರೋಪಿ ವಶಕ್ಕೆ | ಆಸ್ಪತ್ರೆಯ ವೆಬ್‌ಸೈಟ್‌, ಸಾಮಾಜಿಕ ಜಾಲತಾಣ ನಿರ್ವಹಣೆ ಗುತ್ತಿಗೆ ಪಡೆದಿದ್ದ ಡಿಜಿಎಂ ಕಂಪನಿ | ಆಸ್ಪತ್ರೆಯ ಮಹತ್ವದ ದಾಖಲೆಗಳನ್ನು ಅಳಿಸಿ ಹಾಕಿದ್ದ ಸಿಬ್ಬಂದಿ | ವೈದ್ಯರ ಮೊಬೈಲ್‌ ನಂ. ತೆಗೆದು ನಿರ್ದೇಶಕನ ನಂ. ಹಾಕಿ ವಿಕೃತಿ

ಬೆಂಗಳೂರು(ಜ.04): ಆಸ್ಪತ್ರೆಯೊಂದರ ಮಾಹಿತಿ ಕದ್ದು ಕೋಟ್ಯಂತರ ರು. ನಷ್ಟಉಂಟು ಮಾಡುತ್ತಿದ್ದ ಆರೋಪದ ಮೇಲೆ ವಿಶಾಖಪಟ್ಟಣದ ಮೂಲದ ಆರೋಪಿಯೊಬ್ಬನನ್ನು ಸಂಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಂತ್ರಜ್ಞಾನ ಸೇವೆ ಒದಗಿಸುವ ಡಿಜಿಎಂ ಕಂಪನಿ ನಿರ್ದೇಶಕ ಪ್ರಶಾಂತ್‌ ಎಂಬಾತನನ್ನು ವಿಶಾಖಪಟ್ಟಣದಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆತರಲಾಗಿದೆ. ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ತಾಂತ್ರಿಕ ಮಾಹಿತಿ ಕಳವು ಹಾಗೂ ನಂಬಿಕೆ ದ್ರೋಹದ ಬಗ್ಗೆ ಮತ್ತಿಕೆರೆಯ ಬೆಂಗಳೂರು ಸ್ಮೈಲ್‌ ಆಸ್ಪತ್ರೆ ವೈದ್ಯ ಸಿಎಂ ಪರಮೇಶ್ವರ್‌ ಅವರು ಕೊಟ್ಟದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶೌಚಕ್ಕೆ ತೆರಳಿದ್ದ ವೇಳೆ ಮೈಮೇಲೆ ಬಂದ ಕಾಮುಕನ ಕೊಚ್ಚಿದ ದಿಟ್ಟೆ!

ಆಸ್ಪತ್ರೆ ಜಾಲತಾಣ ಹಾಗೂ ಸಾಮಾಜಿಕ ಜಾಲತಾಣ ನಿರ್ವಹಣೆಯನ್ನು ಡಿಜಿಎಂ ಕಂಪನಿಗೆ ವಹಿಸಲಾಗಿತ್ತು. ಇ-ಮೇಲ್ ಐ.ಡಿ., ಜಾಲತಾಣಗಳ ಯೂಸರ್‌ ಐ.ಡಿ., ಪಾಸ್‌ವರ್ಡ್‌ ಸೇರಿದಂತೆ ಎಲ್ಲ ಮಾಹಿತಿ ಕಂಪನಿ ಬಳಿ ಇತ್ತು. ಆಸ್ಪತ್ರೆಯ ಮಾಹಿತಿಯನ್ನು ಕದ್ದಿದ್ದ ಆರೋಪಿಗಳು, ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆ ಬಗ್ಗೆ ಇದ್ದ ಮಹತ್ವದ ಮಾಹಿತಿಗಳನ್ನು ಅಳಿಸಿ ಹಾಕಿದ್ದರು. ಜಾಲತಾಣದಲ್ಲಿ ಆಸ್ಪತ್ರೆಯ ವೈದ್ಯರ ಮೊಬೈಲ್ ನಂಬರ್‌ ತೆಗೆದು, ರಾಜೇಶ್‌ ರೆಡ್ಡಿ ಮೊಬೈಲ್‌ ನಂಬರ್‌ ನಮೂದಿಸಲಾಗಿತ್ತು. ಆ ನಂಬರ್‌ಗೆ ರೋಗಿಗಳು ಕರೆ ಮಾಡಿದಾಗ, ವೈದ್ಯರಿಗೆ ಕೊರೋನಾ ಸೋಂಕು ತಗುಲಿರುವುದಾಗಿ ಸುಳ್ಳು ಹೇಳುತ್ತಿದ್ದರು. ಈ ಮೂಲಕ ಆರೋಪಿಗಳು, ಆಸ್ಪತ್ರೆಗೆ 60 ಕೋಟಿ ನಷ್ಟಮಾಡಿದ್ದರು.

ಮದುವೆ ದಿಬ್ಬಣ ಹೊರಟಿದ್ದ ಕೊಡಗಿನ ಬಸ್ ಕೇರಳದಲ್ಲಿ ಅಪಘಾತ

ವೈದ್ಯರು ಕೊಟ್ಟದೂರಿನ ಮೇರೆಗೆ ಆರೋಪಿಗಳಾದ ರಾಜೇಶ್‌ ರೆಡ್ಡಿ, ಎಂ.ಪ್ರಶಾಂತ್‌, ಶ್ರಾವಣಿ, ಯುವರಾಜ್‌, ಬಾಲಾಜಿ ನಾಡಿಗ್‌ ಹಾಗೂ ಡಿಜಿಎಂ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. 3 ಬಾರಿ ನೋಟಿಸ್‌ ನೋಡಿದರೂ ಆರೋಪಿಗಳು ವಿಚಾರಣೆಗೆ ಬಂದಿರಲಿಲ್ಲ. ಇದೀಗ ಪ್ರಶಾಂತ್‌ನನ್ನು ವಶಕ್ಕೆ ಪಡೆಯಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

click me!