Crime News: ಗೆಳತಿ ಮೆಚ್ಚಿಸಲು ದೆಹಲಿಯ ವಾಯುನೆಲೆಗೆ ಅಧಿಕಾರಿಯಂತೆ ವೇಷ ಧರಿಸಿ ಪ್ರವೇಶಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ
ನವದೆಹಲಿ (ಜು. 25): ದೆಹಲಿಯ ವಾಯುಪಡೆಯ ನಿಲ್ದಾಣದ ಆವರಣಕ್ಕೆ ಅಧಿಕಾರಿಯಂತೆ ವೇಷ ಧರಿಸಿ ಪ್ರವೇಶಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಗೌರವ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಅಲಿಗಢ ನಿವಾಸಿ ಎಂದು ಗುರುತಿಸಲಾಗಿದೆ. ಆರೋಪಿಯು ಜುಲೈ 22 ರಂದು ವಾಯುಪಡೆಯ ನಿಲ್ದಾಣವನ್ನು ಪ್ರವೇಶಿಸಿದ್ದಾನೆ ಎಂದು ವರದಿ ತಿಳಿಸಿದೆ. ಆಯಕಟ್ಟಿನ ಸೂಕ್ಷ್ಮ ಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಐಡಿ ತಪಾಸಣೆಗಾಗಿ ಆರೋಪಿಯನ್ನು ಪ್ರವೇಶ ದ್ವಾರದಲ್ಲಿ ನಿಲ್ಲಿಸಲಾಗಿತ್ತು. ಭದ್ರತಾ ಅಧಿಕಾರಿಗಳಿಗೆ ತೃಪ್ತಿದಾಯಕ ಉತ್ತರಗಳನ್ನು ನೀಡಲು ವಿಫಲವಾದಾಗ ಸಿಬ್ಬಂದಿಗೆ ಅನುಮಾನ ಬಂದಿದೆ.
ವಿಚಾರಣೆ ವೇಳೆ, ಭದ್ರತಾ ಸಂಸ್ಥೆಯಲ್ಲಿ ಸಮವಸ್ತ್ರದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ವಾಯುಪಡೆಯ ನಿಲ್ದಾಣಕ್ಕೆ ಪ್ರವೇಶಿಸಿದ್ದಾಗಿ ಆರೋಪಿ ಬಹಿರಂಗಪಡಿಸಿದ್ದಾನೆ. ತಾನು ಐಎಎಫ್‌ನಲ್ಲಿ (IAF) ಅಧಿಕಾರಿ ಎಂದು ನಂಬದ ತನ್ನ ಗೆಳತಿಯನ್ನು ಮೆಚ್ಚಿಸಲು ಆರೋಪಿ ವಾಯನೆಲೆ ಪ್ರವೇಶಿಸಿದ್ದಾನೆ.
ಆರೋಪಿಯನ್ನು ತುಗ್ಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಮತ್ತು ಆತನ ವಿರುದ್ಧ ಸೆಕ್ಷನ್ 140, 170, 171, 449 ಮತ್ತು 447 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗೆಳತಿ ಮೆಚ್ಚಿಸಲು ಪೊಲೀಸ್‌ನ ಸಬ್‌ಇನ್ಸ್‌ಪೆಕ್ಟರ್ ವೇಷ: ಇನ್ನು ಇದೇ ರೀತಿ, ತನ್ನ ಗೆಳತಿಯನ್ನು ಮೆಚ್ಚಿಸಲು ಉತ್ತರ ಪ್ರದೇಶ ಪೊಲೀಸ್‌ನ ಸಬ್‌ಇನ್ಸ್‌ಪೆಕ್ಟರ್‌ನಂತೆ ನಟಿಸಿದ್ದಕ್ಕಾಗಿ ನೈಋತ್ಯ ದೆಹಲಿಯ ಡ್ವಾಕ್ರಾ ಪ್ರದೇಶದಿಂದ 20 ವರ್ಷದ ಯುವಕನನ್ನು ಒಂದು ವರ್ಷದ ಹಿಂದೆ ಬಂಧಿಸಲಾಗಿತ್ತು. ಆರೋಪಿಯನ್ನು ಉತ್ತರ ಪ್ರದೇಶದ ಮಥುರಾ ನಿವಾಸಿ ಅಜಯ್ ಎಂದು ಗುರುತಿಸಲಾಗಿದೆ.
ಅಜ್ಜಿ ಅಲ್ಲ ಕಳ್ಳ : ಸ್ಟೈಲಿಶ್ ಅಜ್ಜಿ ವೇಷದಲ್ಲಿ ಬಂದು ಬ್ಯಾಂಕ್ ರಾಬರಿ: ಕಳ್ಳನ ಕೈಚಳಕಕ್ಕೆ ಪೊಲೀಸರೇ ದಂಗು
ತನಿಖೆಯ ವೇಳೆ ಪೊಲೀಸರು ಯುಪಿ ಪೊಲೀಸರ ಎರಡು ಐಡಿ ಕಾರ್ಡ್‌ಗಳು ಮತ್ತು ಒಂದು ಸೆಟ್ ಪೊಲೀಸ್ ಸಮವಸ್ತ್ರವನ್ನು ಪತ್ತೆ ಮಾಡಿದ್ದರು. ದ್ವಾರಕಾ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಸಿದಾಗ ಆರೋಪಿ ನೀರು ಸರಬರಾಜು ಮಾಡುವವನಾಗಿದ್ದು, ಸಹಬಾದ್ ಮೊಹಮದ್‌ಪುರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಹುಡುಗಿಯ ಸಂಪರ್ಕಕ್ಕೆ ಬಂದಿದ್ದು ಆಕೆಯನ್ನು ಮೆಚ್ಚಿಸಲು, ಯುಪಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನಂತೆ ವೇಷ ಹಾಕಿದ್ದ ಎಂದು ಎಡಿಸಿಪಿ (ದ್ವಾರಕಾ) ಸತೀಶ್ ಕುಮಾರ್ ಹೇಳಿದ್ದಾರೆ.