ಸಿದ್ದಾಪುರ ನಿವಾಸಿ ನಾರಾಯಣಸ್ವಾಮಿ ಮತ್ತು ಆತನ ಪ್ರೇಯಸಿ ಚೆನ್ನೈ ಮೂಲದ ನವೀನಾ ಬಂಧಿತರು. ಆರೋಪಿಗಳಿಂದ ₹20.74 ಲಕ್ಷ ಮೌಲ್ಯದ 333 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಲಕ್ಕಸಂದ್ರ ನಿವಾಸಿ ಸೈಯದ್ ರೆಹಮಾನ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಇನ್‌ಸ್ಪೆಕ್ಟರ್ ಸಿ.ರವಿಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು(ಆ.10): ಕೆಲಸ ಮಾಡುವ ನೆಪದಲ್ಲಿ ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಹಾಗೂ ಕಳವು ಮಾಲು ಸ್ವೀಕರಿಸಿದ್ದ ಆತನ ಪ್ರೇಯಸಿ ಸೇರಿ ಇಬ್ಬರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿದ್ದಾಪುರ ನಿವಾಸಿ ನಾರಾಯಣಸ್ವಾಮಿ(33) ಮತ್ತು ಆತನ ಪ್ರೇಯಸಿ ಚೆನ್ನೈ ಮೂಲದ ನವೀನಾ(39) ಬಂಧಿತರು. ಆರೋಪಿಗಳಿಂದ ₹20.74 ಲಕ್ಷ ಮೌಲ್ಯದ 333 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಲಕ್ಕಸಂದ್ರ ನಿವಾಸಿ ಸೈಯದ್ ರೆಹಮಾನ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಇನ್‌ಸ್ಪೆಕ್ಟರ್ ಸಿ.ರವಿಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಮಗಳೂರು: ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆಯೇ ಪುಂಡನಿಂದ ಹಲ್ಲೆ!
ಏನಿದು ಪ್ರಕರಣ?:
ದೂರುದಾರ ಸೈಯದ್ ರೆಹಮಾನ್ ಐಟಿ ಉದ್ಯೋಗಿಯಾಗಿದ್ದು, ಕುಟುಂಬ ಜತೆಗೆ ಲಕ್ಕಸಂದ್ರದ ಮನೆಯಲ್ಲಿ ನೆಲೆಸಿದ್ದರು. ಇವರ ಮನೆಯಲ್ಲಿ ಕಳೆದ 20 ವರ್ಷಗಳಿಂದ ಆರೋಪಿ ನಾರಾಯಣಸ್ವಾಮಿಯ ತಾಯಿ ಬೆಳ್ಳಿಯಮ್ಮ ಮನೆಗೆಲಸ ಮಾಡುತ್ತಿದ್ದರು. ಹೆಚ್ಚಿನ ಕೆಲಸ ಇದ್ದಾಗ ಆರೋಪಿ ನಾರಾಯಣ ಸ್ವಾಮಿ ಸಹ ತಾಯಿ ಜತೆಗೆ ಬಂದು ಕೆಲಸ ಮಾಡುತ್ತಿದ್ದ. ಈ ನಡುವೆ ರೆಹಮಾನ್‌ಗೆ ದುಬೈನಲ್ಲಿ ಕೆಲಸ ಸಿಕ್ಕ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಕುಟುಂಬ ಸಹಿತ ದುಬೈನಲ್ಲಿ ನೆಲೆಸಿದ್ದಾರೆ.
ತಿಂಗಳಿಗೊಮ್ಮೆ ಮನೆ ಸ್ವಚ್ಛತೆ:
ರೆಹಮಾನ್ ದುಬೈಗೆ ತೆರಳುವ ಮುನ್ನ ಚಿನ್ನಾಭರಣಗಳನ್ನು ಬ್ಯಾಗ್‌ನಲ್ಲಿಟ್ಟು ಮನೆಯ ಬೀರುವಿನಲ್ಲಿ ಇರಿಸಿದ್ದರು. ಮನೆಗೆ ಬೀಗ ಹಾಕಿಕೊಂಡು ಬೀಗ ಕೀಯ ಸಂಬಂಧಿಕರಿಗೆ ನೀಡಿದ್ದರು. ತಿಂಗಳಿಗೊಮ್ಮೆ ಬೀಗ ಕೀ ಕೊಟ್ಟು ಪಡೆದು ಮನೆ ಸ್ವಚ್ಛಗೊಳಿಸಲು ನಾರಾಯಣಸ್ವಾಮಿಗೆ ಸೂಚಿಸಿದ್ದರು. ಅದರಂತೆ ನಾರಾಯಣಸ್ವಾಮಿ ತಿಂಗಳಿಗೊಮ್ಮೆ ಮನೆಗೆ ಬಂದು ಬೀಗದ ಕೀ ಪಡೆದು ಮನೆ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ದುಬೈನಿಂದ ನಗರಕ್ಕೆ ಬಂದಿದ್ದ ರೆಹಮಾನ್ ಮನೆಯ ಬೀರು ತೆರೆದು ನೋಡಿದಾಗ ಚಿನ್ನಾಭರಣಗಳು ಕಡಿಮೆ ಇರುವುದು ಕಂಡು ಬಂದಿದೆ.
ಮನೆಗೆಲಸದವನ ಮೇಲೆ ಅನುಮಾನ:
ಈ ವೇಳೆ ಮನೆಗೆಲಸದ ನಾರಾಯಣಸ್ವಾಮಿ ಮೇಲೆ ಅನುಮಾನ ವ್ಯಕ್ತಪಡಿಸಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿ ನಾರಾಯಣಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಪ್ರೇಯಸಿ ನವೀನಾಳನ್ನು ಚೆನ್ನೈನ ರಾಜೇಶ್ವರಿನಗರದಲ್ಲಿ ಬಂಧಿಸಿ, ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರನ್ನು ವಂಚಿಸಿ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿದ್ದ ಶಿವಾಜಿನಗರದ ಸರ್ಫರಾಜ್ ಬಂಧನ!
ಡೇಟಿಂಗ್ ಆ್ಯಪ್‌ನಲ್ಲಿ ಲವ್
ಆರೋಪಿ ನಾರಾಯಣಸ್ವಾಮಿಗೆ ವಿವಾಹವಾಗಿದ್ದು, ಪತ್ನಿ ಪಾರ್ಶ್ವವಾಯುಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ಆಕೆಯನ್ನು ಚೆನ್ನೈನ ತವರು ಮನೆಯಲ್ಲಿ ಇರಿಸಿದ್ದ. ಪೇಂಟಿಂಗ್ ಕೆಲಸ ಮಾಡುವ ನಾರಾಯಣಸ್ವಾಮಿ ಸಿದ್ದಾಪುರದಲ್ಲಿ ತಾಯಿ ಜತೆಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಈ ನಡುವೆ ಡೇಟಿಂಗ್ ಆ್ಯಪ್‌ವೊಂದರಲ್ಲಿ ಚೆನ್ನೈ ಮೂಲದ ನವೀನಾ ಪರಿಚಯವಾಗಿ ಇಬ್ಬರು ಆತ್ಮೀರಾಗಿದ್ದರು. ಈ ನವೀನಾಳಿಗೆ ಪತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಇದ್ದಾರೆ. ಮಕ್ಕಳನ್ನು ಬೆಂಗಳೂರಿನ ಶಾಲೆವೊಂದರಲ್ಲಿ ಓದಿಸುತ್ತಿರುವ ನವೀನಾ ಆಗಾಗ ಚೆನ್ನೈನಿಂದ ನಗರಕ್ಕೆ ಬಂದು ಮಕ್ಕಳನ್ನು ನೋಡಿಕೊಂಡು ವಾಪಾಸ್ ಹೋಗುತ್ತಿದ್ದಳು.
ಚಿನ್ನ ಕದಿಯಲು ಪ್ರೇಮಿಯ ಪುಸಲಾಯಿಸಿದ್ದ ಪ್ರೇಯಸಿ
ಮಾಲೀಕರ ಮನೆಯಲ್ಲಿ ಚಿನ್ನಾಭರಣ ಇರುವ ವಿಚಾರವನ್ನು ನಾರಾಯಣಸ್ವಾಮಿ ತನ್ನ ಪ್ರೇಯಿಸಿ ನವೀನಾಳಿಗೆ ಹೇಳಿದ್ದ. ಅದರಂತೆ ಆಕೆ ಕಳ್ಳತನ ಮಾಡಿದ ಜೀವನದಲ್ಲಿ ಸೆಟಲ್ ಆಗಬಹುದು ಎಂದು ನಾರಾಯಣಸ್ವಾಮಿಯನ್ನು ಪುಸಲಾಯಿಸಿದ್ದಳು. ಆಕೆಯ ಸೂಚನೆಯಂತೆ ನಾರಾಯಣಸ್ವಾಮಿ ಮನೆ ಸ್ವಚ್ಛತೆಗೆ ಬಂದಾಗ ಒಂದೊಂದೇ ಚಿನ್ನಾಭರಣ ಕಳವು ಮಾಡಿ ಪ್ರೇಯಸಿ ನವೀನಾಳಿಗೆ ನೀಡಿದ್ದ. ಆಕೆ ಚಿನ್ನಾಭರಣಗಳನ್ನು ತಾನು ಕೆಲಸ ಮಾಡುವ ಬ್ಯೂಟಿ ಪಾರ್ಲರ್‌ನ ಮಾಲೀಕರು ಹಾಗೂ ಸಂಬಂಧಿಕರು, ಫೈನಾನ್ಸ್ ಕಂಪನಿಗಳಲ್ಲಿ ಗಿರವಿ ಇರಿಸಿ ಹಣ ಪಡೆದಿದ್ದಳು. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.