
ಬೆಂಗಳೂರು : ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು ಅವರ ಪತ್ತೆಗಾಗಿ ಸಿಐಡಿ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ.
ಬೆಳಗಾವಿ ಅಧಿವೇಶನಕ್ಕೆ ಹೋಗಿದ್ದ ಶಾಸಕ ಬೈರತಿ ಬಸವರಾಜು ಅವರು ಅಲ್ಲಿಂದಲೇ ಮಹಾರಾಷ್ಟ್ರ ಅಥವಾ ಗೋವಾದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಐಡಿಯ ಮೂರು ತಂಡಗಳು ಅವರಿಗಾಗಿ ಎರಡ್ಮೂರು ರಾಜ್ಯಗಳಲ್ಲಿ ಶೋಧ ನಡೆಸುತ್ತಿವೆ. ಈ ಮಧ್ಯೆ ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ.
ಎಲ್ಲ ವಿಮಾನ ನಿಲ್ದಾಣಗಳ ಭದ್ರತಾ ವಿಭಾಗದ ಅಧಿಕಾರಿಗಳಿಗೆ ಲುಕ್‌ಔಟ್ ನೋಟಿಸ್ ನೀಡಲು ಮುಂದಾಗಿದ್ದಾರೆ. ಜತೆಗೆ ರೈಲು ನಿಲ್ದಾಣಗಳಿಗೂ ಮಾಹಿತಿ ನೀಡಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಬಸವರಾಜು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಜು.15ರಂದು ಭಾರತೀನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಬಿಕ್ಲು ಶಿವನನ್ನು ಆತನ ಮನೆ ಮುಂಭಾಗವೇ ಹತ್ತಾರು ಬಾರಿ ಇರಿದು ಭೀಕರವಾಗಿ ಹತ್ಯೆಗೈಯಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಭಾರತೀನಗರ ಠಾಣೆ ಪೊಲೀಸರು 17 ಮಂದಿಯನ್ನು ಬಂಧಿಸಿದ್ದರು. ಬಳಿಕ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುತ್ತಿದ್ದಂತೆ ಪ್ರಮುಖ ಆರೋಪಿ ಜಗದೀಶ್ ಹಾಗೂ ಅಜಯ್ ಎಂಬುವರನ್ನು ಬಂಧಿಸಿದ್ದರು. ಪ್ರಕರಣದ ಐದನೇ ಆರೋಪಿಯಾಗಿರುವ ಬೈರತಿ ಬಸವರಾಜು ತಲೆಮರೆಸಿಕೊಂಡಿದ್ದಾರೆ.
ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಬೈರತಿ ಬಸವರಾಜು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಶನಿವಾರ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದು, ಜಾಮೀನು ಅರ್ಜಿ ಭವಿಷ್ಯ ನಿರ್ಧಾರವಾಗಲಿದೆ.
ಲುಕೌಟ್ ನೋಟಿಸ್ ಎಂದರೆ ಏನು?
- ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಅಪರಾಧ ಪ್ರಕರಣದ ಆರೋಪಿ ದೇಶದಿಂದ ಪರಾರಿಯಾಗದಂತೆ ತಡೆಯಲು ಇರುವ ವಿಧಾನ
- ನಿರ್ದಿಷ್ಟ ವ್ಯಕ್ತಿ ವಿದೇಶಕ್ಕೆ ತೆರಳಲು ಬಂದರೆ ಆತ/ಆಕೆಯನ್ನು ತಡೆದು, ಮಾಹಿತಿ ನೀಡುವಂತೆ ವಲಸೆ ವಿಭಾಗಕ್ಕೆ ನೀಡುವ ನಿರ್ದೇಶನ
- ಲುಕೌಟ್ ನೋಟಿಸ್‌ನಲ್ಲಿರುವ ವ್ಯಕ್ತಿ ಗಡಿ, ವಿಮಾನ ನಿಲ್ದಾಣ, ಬಂದರು ಮೂಲಕ ವಿದೇಶಕ್ಕೆ ಹೋಗಲು ಬಂದರೆ ತಡೆಹಿಡಿಯಲಾಗುತ್ತದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ