ಲಾಕ್‌ಡೌನ್ ವೇಳೆ ಲಿಕ್ಕರ್ ಬ್ಯಾನ್ ಆಗಿದ್ದು ಗೊತ್ತೇ ಇದೆ. ಈ ವೇಳೆ ಕುಡಿಯಲು ಮದ್ಯ ಸಿಗದಿದ್ದಾಗ ಮದ್ಯದಂಗಡಿ ಬಾಗಿಲು ಮುರಿದು ಲಿಕ್ಕರ್ ಕಳ್ಳತನ ಮಾಡಿದ್ದ 6 ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ನಡೆದದ್ದು? ಯಾರ್ಯಾರು ಕಳ್ಳತನ ಮಾಡಿದ್ದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಹೊನ್ನಾಳಿ(ಜೂ.09): ಕೋವಿಡ್-19 ಸಂಬಂಧ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದ ವೇಳೆ ತಾಲೂಕಿನ ಬೆನಕನಹಳ್ಳಿ ಸಮೀಪದ ಮದ್ಯದಂಗಡಿ ಬೀಗ ಒಡೆದು ಕಳವು ನಡೆಸಿದ್ದ 6 ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಪಿಐ ದೇವರಾಜ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್‌ಪಿ ಹನುಮಂತರಾಯ ಹಾಗೂ ಚನ್ನಗಿರಿ ವಲಯದ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದ ಹೊನ್ನಾಳಿ ಪೊಲೀಸರ ತಂಡ, ಕುಳಗಟ್ಟೆ ಸಮೀಪ ಶುಕ್ರವಾರ 6 ಜನ ಆರೋಪಿಗಳನ್ನು ಬಂಧಿಸಿ ಹಾಗೂ 2 ಬೈಕ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ.
ಬಂಧಿತ ಆರೋಪಿಗಳು ಚನ್ನಗಿರಿ ತಾಲೂಕಿನ ನಿವಾಸಿಗಳು. ರಮೇಶ್, ಮರಿಯಪ್ಪ ಅಲಿಯಾಸ್ ಮಾರಿ, ಎಚ್.ಗೋಪಿ, ತಮ್ಮಯ್ಯ, ಶಶಿಕುಮಾರ್ ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಜೊತೆಗೆ 2 ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣ ರಾಡ್, ಆ್ಯಕ್ಸೆಲ್ ಬ್ಲೇಡ್ ಹಾಗೂ 9 ಸಾವಿರ ರುಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಒಂದು ಮದ್ಯದಂಗಡಿಯಲ್ಲಿ ಕೂಡ ಕಳವು ನಡೆಸಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕದಿಯಲು ಬಂದವ ಕೊಲೆಯಾಗಿ ಹೋದ; ಶ್ರೀರಾಮ್ ಪುರ ಪ್ರಕರಣಕ್ಕೆ ಹೊಸ ಟ್ವಿಸ್ಟ್
ತನಿಖೆ ಕೈಗೊಂಡಿದ್ದ ಹೊನ್ನಾಳಿ ಪೊಲೀಸ್ ಸಿಪಿಐ ದೇವರಾಜ್, ಪಿಎಸ್‌ಐ ತಿಪ್ಪೇಸಾಮಿ, ಸಿಬ್ಬಂದಿ ಫೈರೋಜ್ ಖಾನ್, ವೆಂಕಟರಮಣ, ಎಚ್.ಹರೀಶ್, ಎಸ್.ದೊಡ್ಡಬಸಪ್ಪ, ಬಸವರಾಜ್ ಜಂಬೂರ್, ಚೇತನ್‌ಕುಮಾರ್, ರಾಘವೇಂದ್ರ, ಉಮೇಶ್, ಶಾಂತಕುಮಾರ್ ತಂಡದ ಕಾರ್ಯವನ್ನು ಜಿಲ್ಲಾ ಎಸ್‌ಪಿ ಹನುಮಂತರಾಯ ಪ್ರಶಂಶಿಸಿದ್ದಾರೆ. ಅಲ್ಲದೇ, ನಗದು ಬಹುಮಾನ ಘೋಷಿಸಿದ್ದಾರೆ ಎಂದು ಸಿಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.