Chikkamagaluru; ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕಾರ್ಮಿಕ ಕಾಡಾನೆ ದಾಳಿಗೆ ಬಲಿ

By Suvarna News  |  First Published Sep 8, 2022, 10:25 PM IST

ಒಂದು ತಿಂಗಳ ಅವಧಿಯಲ್ಲಿ ಆನೆ ದಾಳಿಗೆ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.  ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕನ ಮೇಲೆ ಆನೆ ದಾಳಿ ಮಾಡಿದ್ದು 45 ವರ್ಷದ ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕಮಗಳೂರು (ಸೆ.8) : ಮಲೆನಾಡಿನಲ್ಲಿ ಕಾಡಾನೆ ದಾಳಿ ನಿರಂತರವಾಗಿದ್ದು ಇಲ್ಲಿನ ಜನರಿಗೆ ಬೆಳೆದ ಬೆಳೆ ಜೊತೆಗೆ ಜೀವವನ್ನು  ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎನ್ನುವ ಆತಂಕ ಮೂಡಿದೆ. ಮಲೆನಾಡಿನ ಕಾಡಾನೆ ದಾಳಿದಿಂದ ಪ್ರಮುಖ ಬೆಳೆಗಳು ನಾಶವಾಗುತ್ತಿದ್ದು ಇದರ ಜೊತೆಗೆ ತಿಂಗಳ ಅವಧಿಯಲ್ಲಿ  ಇಬ್ಬರ ಜೀವ ಬಲಿ ಆಗಿದೆ. ಒಂದು ತಿಂಗಳ ಅವಧಿಯಲ್ಲಿ ಆನೆ ದಾಳಿಗೆ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕ ಅರ್ಜುನ್ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು 45 ವರ್ಷದ ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಊರಬಗೆ, ಗೌಡಹಳ್ಳಿ ಭಾಗದಲ್ಲಿ ಐದು ಕಾಡಾನೆಗಳು ಬೀಡುಬಟ್ಟಿದ್ದು ಸ್ಥಳಿಯರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಅರಣ್ಯ ಇಲಾಖೆಯೇ ಮಾಡಿದ ಕೊಲೆ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಳ್ಳಿಯ ಮುಖ್ಯ ರಸ್ತೆ ಬಳಿಯೇ ಆನೆ ದಾಳಿ ಮಾಡಿರುವುದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. 

Tap to resize

Latest Videos

ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ
ಕಳೆದ ಆಗಸ್ಟ್ 25ರಂದು ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದ ಆನಂದ್ ದೇವಾಡಿಗ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು ಅವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನ ಆನೆ ಕಾಡಿನಲ್ಲಿ ಸುಮಾರು ಒಂದು ಕಿ.ಮೀ. ಎಳೆದುಕೊಂಡು ಹೋಗಿದ್ದ ಪರಿಣಾಮ ದೇಹದ ಅಂಗಾಂಗಗಳು ಕಾಡಿನಲ್ಲಿ ಚದುರಿ ಹೋಗಿದ್ದವು. ಇಂದು ಕೂಡ ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕನ ಮೇಲೆ ಆನೆ ದಾಳಿ ಮಾಡಿದ್ದು ಆತ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಿಯರು ಅರಣ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

Chikkamagaluru: ಸೆರೆ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಪುಂಡಾನೆಯಿಂದ ಮಲೆನಾಡಿಗರು ಹೈರಾಣು

ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೊನ್ನೆ-ಮೊನ್ನೆಯಷ್ಟೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಎಲೆಮಡಿಲು ಗ್ರಾಮದಲ್ಲಿ ರೈತರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನ ವಾರಗಟ್ಟಲೇ ಕಷ್ಟಪಟ್ಟು ಐದು ಸಾಕಾನೆಗಳು ಸೆರೆ ಹಿಡಿದಿದ್ದವು. ಆದರೆ, ಮೂಡಿಗೆರೆ ತಾಲೂಕಿನಲ್ಲಿ ಕಳೆದೊಂದು ದಶಕದಿಂದಲೂ ಆನೆ ಹಾವಳಿ ಮಿತಿ ಮೀರಿದೆ. 

Chikkamagaluru: ಕಾಡಾನೆ ದಾಳಿಯಿಂದ ಬೆಳೆ ನಾಶ: ಕಂಗಾಲಾದ ಕೃಷಿಕರು

ಸಾರಗೋಡು, ಗೌಡಹಳ್ಳಿ, ಕೋಗಿಲೆ, ಊರಬಗೆ, ಗುತ್ತಿಹಳ್ಳಿ, ಬೈರಾಪುರ, ದೇವವೃಂದ, ಸತ್ತಿಗನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಹಾವಳಿ ಮೀತಿ ಮೀರಿದೆ. ಸ್ಥಳಿಯರು ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದಾಗ ಸ್ಥಳಕ್ಕೆ ಬಂದು ಪಟಾಕಿ ಹೊಡೆದಿದ್ದೇ ಅಧಿಕಾರಿಗಳ ಸಾಧನೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಆನೆ ದಾಳಿಯಿಂದ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

click me!