
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.12): ತಂದೆಯಿಂದಲೇ ಚಿಕ್ಕ ಮಗುವಿನ ಕಿಡ್ನಾಪ್ ಮಾಡಿರುವ ಆರೋಪ ಕೇಳಿ ಬಂದಿದೆ. ಕೊಡಗು ಜಿಲ್ಲೆಯ ಮೂರ್ನಾಡಿನಲ್ಲಿ ಜೂನ್ 10 ರಂದು ಈ ಘಟನೆ ನಡೆದಿದೆ. ಜಗಳವಾಡಿಕೊಂಡು ಗಂಡನ ಮನೆ ಬಿಟ್ಟು ತಾಯಿ ಮನೆಯಲ್ಲಿದ್ದ ಭವ್ಯ ಎಂಬುವರ ಐದು ವರ್ಷದ ಮಗುವನ್ನು ಆಕೆಯ ಗಂಡ ತಿಮ್ಮಯ್ಯ ಎಂಬುವರೇ ಮಗುವನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿರುವ ಆರೋಪ ಕೇಳಿ ಬಂದಿದೆ. ಆರು ವರ್ಷಗಳ ಹಿಂದೆ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ತಿಮ್ಮಯ್ಯ ಎಂಬುವರೊಂದಿಗೆ ಮಡಿಕೇರಿ ತಾಲ್ಲೂಕಿನ ಕಾಂತೂರಿನ ಭವ್ಯ ಅವರ ವಿವಾಹವಾಗಿತ್ತು.
ಇವರ ಸಂಸಾರದ ಪ್ರೀತಿಯ ಫಲವಾಗಿ ಒಂದೇ ವರ್ಷದಲ್ಲಿ ಗಂಡು ಮಗು ಜನಿಸಿತ್ತು. ಆದ ಬಳಿಕ ಕ್ರಮೇಣ ಇವರ ಸಂಸಾರದಲ್ಲಿ ಕಿರಿಕ್ ಶುರುವಾಗಿತ್ತು. ಯಾವಾಗಲೂ ಮದ್ಯಪಾನನಾಗಿ ಮನೆಯಲ್ಲಿ ಇರುತ್ತಿದ್ದ ಆತನಿಗೆ ನಾನು ದುಡಿದು ಬಂದ ಸಂಬಳವನ್ನೆಲ್ಲಾ ಆತನಿಗೆ ಕೊಡಬೇಕಾಗಿತ್ತು. ಮಗುವಿನ ಶಿಕ್ಷಣ, ಮತ್ತೊಂದು ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಜೊತೆಗೆ ಯಾವಾಗಲೂ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ, ಮಗುವಿಗೂ ಜೀವ ಬೆದರಿಕೆ ಹಾಕುತ್ತಿದ್ದ. ಎಲ್ಲದರಿಂದ ಬೇಸತ್ತು ಕೊನೆಗೆ ನಾನು ಕಳೆದ ಆರು ತಿಂಗಳ ಹಿಂದೆ ಗಂಡನ ಮನೆ ಬಿಟ್ಟು ತವರು ಮನೆಯಿದ್ದ ಕಾಂತೂರು ಸೇರಿದ್ದೆ.
ಜೊತೆಗೆ ಆತನ ಕಿರುಕುಳ ತಾಳಲಾರದೆ ವಿಚ್ಛೇದನಕ್ಕೂ ನ್ಯಾಯಾಲಯದ ಮೆಟ್ಟಿಲೇರಿದ್ದೆ. ಆದಾದ ಬಳಿಕ ಆತನ ಕಿರುಕುಳ ಮತ್ತಷ್ಟು ಜಾಸ್ತಿಯಾಯಿತು. ತಮ್ಮ ತವರು ಮನೆಗೂ ಬಂದು ಗಲಾಟೆ ಮಾಡಿದ್ದ. ಕೊಲೆ ಮಾಡುವುದಾಗಿ ಮಚ್ಚು ಹಿಡಿದು ಕೂಗಾಡಿದ್ದ. ಅದೆಲ್ಲದರ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಇವೆ. ಇದೀಗ ಮೊನ್ನೆ ಇದ್ದಕ್ಕಿದ್ದಂತೆ ಕಾಂತೂರಿಗೆ ಬಂದು ಶಾಲೆಗೆ ಕಳುಹಿಸಲೆಂದು ನಿಂತಿದ್ದಾಗ ನನ್ನ ಮಗನನ್ನು ಗಂಡನೇ ಏಕಾಏಕಿ ಕರೆದುಕೊಂಡು ಹೋಗಿದ್ದಾನೆ. ಎರಡು ದಿನಗಳಿಂದ ನನ್ನ ಮಗು ಎಲ್ಲಿದ್ದಾನೆ, ಹೇಗಿದ್ದಾನೆ ಎಂದು ಗೊತ್ತಿಲ್ಲ ಎಂದು ಭವ್ಯ ಕಣ್ಣೀರಿಟ್ಟಿದ್ದಾರೆ.
ಜೂನ್ 10 ರಂದು ಮಗುವನ್ನು ತಿಮ್ಮಯ್ಯ ಕರೆದೊಯ್ಯುತ್ತಿದ್ದಂತೆ ಭವ್ಯ ಮೂರ್ನಾಡು ಹೊರ ಠಾಣೆಗೆ ದೂರು ನೀಡಿದ್ದಾರೆ. ಮೊದಲು ಮಗನ ಹುಡುಕಿಕೊಡಿ ಎಂದು ಅಂಗಲಾಚುತ್ತಿರುವ ಭವ್ಯ ಗಂಡ ಮದ್ಯಪಾನ ಮಾಡುತ್ತಾನೆ, ಗಾಂಜಾ ಸೇವನೆ ಮಾಡುತ್ತಾನೆ. ಯಾವಾಗಲೂ ನನ್ನನ್ನೂ, ನನ್ನ ಮಗನನ್ನೂ ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಎಲ್ಲರನ್ನೂ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ನನ್ನ ಮಗ ಹೇಗಿದ್ದಾನೋ ಎನ್ನುವ ಭಯವಿದೆ. ಇವನೇನೋ ಮದ್ಯಸೇವನೆ, ಗಾಂಜಾ ಸೇವನೆ ಮಾಡಿ ಎಲ್ಲೋ ಬಿದ್ದುಕೊಳ್ಳುತ್ತಾನೆ. ಆದರೆ ನನ್ನ ಮಗನ ಗತಿ ಏನು ಎಂದು ಮಗುವಿನ ತಾಯಿ ಭವ್ಯ ಕಣ್ಣೀರಿಟ್ಟಿದ್ದಾರೆ.
ಬೇಗ ಮಗನ ಹುಡುಕಿ ಕೊಡುವಂತೆ ಭವ್ಯ ಎಸ್ಪಿಯನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದಾರೆ. ತಿಮ್ಮಯ್ಯ ಯಾವಾಗಲೂ ಮದ್ಯಸೇವನೆ ಮಾಡಿ ಗಲಾಟೆ ಮಾಡುತ್ತಿದ್ದ, ಎಲ್ಲಿಯೂ ದುಡಿಯಲು ಹೋಗದೆ ಮದ್ಯಕ್ಕೆ ಹಣ ಕೊಡುವಂತೆ ಪೀಡಿಸುತ್ತಿದ್ದ. ಹೀಗಾಗಿ ಗಂಡನ ಮನೆಬಿಟ್ಟು ತಾಯಿ ಮನೆಯಲ್ಲಿದ್ದೆ. ಅಲ್ಲಿಗೂ ಬಂದು ಹಲವು ಬಾರಿ ಗಲಾಟೆ ಮಾಡಿದ್ದ. ಮಚ್ಚು ಹಿಡಿದು ಕೊಲೆ ಮಾಡುವುದಾಗಿ ಓಡಾಡಿದ್ದ. ಅದೆಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾವು ಮನೆಯೊಳಗೆ ಇದ್ದಿದ್ದರಿಂದ ನಮ್ಮ ತಾಯಿ ಮನೆಯ ಕಿಟಕಿಗಳನ್ನೆಲ್ಲಾ ಹೊಡೆದು ಹಾಕಿದ್ದ. ಇದೆಲ್ಲವನ್ನು ಕಂಡು ರೋಸಿ ಡೈವರ್ಸ್ ಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಈಗ ನನ್ನ ಮಗುವನ್ನೇ ಕದ್ದೊಯ್ದಿದ್ದಾನೆ. ಆದಷ್ಟು ಬೇಗ ಮಗನ ಹುಡುಕಿಕೊಡಿ ಎಂದು ಭವ್ಯ ಅಂಗಲಾಚುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ