ಪೊಲೀಸ್‌ ಸೋಗಿನಲ್ಲಿ ಅಪಹರಿಸಿ ಹಣ ಸುಲಿಗೆ; ಐವರ ಸೆರೆ

By Kannadaprabha NewsFirst Published Sep 19, 2022, 6:17 AM IST
Highlights
  • ರಿಯಲ್‌ ಎಸ್ಟೇಟ್‌ ಬ್ರೋಕರ್‌ಗಳನ್ನು ಪೊಲೀಸ್‌ಸೋಗಿನಲ್ಲಿ ಅಪಹರಣ
  • ಸಮಾಜ ಸೇವೆಯೊಂದಿಗೆ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗಿದ್ದ ಮಹಿಳೆ, ಆಕೆಯ ಸಂಬಂಧಿಯ ಕಿಡ್ನಾಪ್‌
  • ಹೈದರಾಬಾದ್‌ನಲ್ಲಿ ಒತ್ತೆ ಇಟ್ಟು ಹಣಕ್ಕೆ ಬೇಡಿಕೆ
  • ಚಿನ್ನಾಭರಣ, ಸಾಲ ಮಾಡಿ ಹಣ ಹೊಂದಿಸಿದ್ದ ಮಹಿಳೆ

ಬೆಂಗಳೂರು (ಸೆ.19) : ಮಾತನಾಡುವ ನೆಪದಲ್ಲಿ ಇಬ್ಬರು ರಿಯಲ್‌ ಎಸ್ಟೇಟ್‌ ಬ್ರೋಕರ್‌ಗಳನ್ನು ಕರೆಸಿಕೊಂಡು ಬಳಿಕ ಅಪಹರಿಸಿ .11 ಲಕ್ಷ ಸುಲಿಗೆ ಮಾಡಿದ್ದ ಐವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ ಮೂಲದ ಪ್ರಸಾದ್‌, ಸತ್ಯನಾರಾಯಣ, ಮಹಾರಾಷ್ಟ್ರ ಮೂಲದ ಶ್ರೀಧರ್‌, ಕಿರಣ್‌ ಮೋರೆ ಹಾಗೂ ನಾಗೋರಾವ್‌ ಬಂಧಿತರು. ಪ್ರಮುಖ ಆರೋಪಿ ಹರೀಶ್‌ ಹಾಗೂ ವರ್ಮ ಎಂಬುವವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಆ.19ರಂದು ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದ ಹೋಟೆಲ್‌ ಬಳಿಯಿಂದ ಕೆ.ಆರ್‌.ಪುರ ವಿನಾಯಕ ಲೇಔಟ್‌ ನಿವಾಸಿಗಳಾದ ವಸಂತಾ ಮತ್ತು ಆಕೆಯ ಸೋದರ ಸಂಬಂಧಿ ಶಿವಾರೆಡ್ಡಿ ಅವರನ್ನು ಅಪಹರಿಸಿದ ನಂತರ ಹೆದರಿಸಿ .11 ಲಕ್ಷ ಸುಲಿಗೆ ಮಾಡಿದ್ದರು.

 

ಪೊಲೀಸ್‌ ಅಲ್ಲ, 8 ತಿಂಗಳಿಂದ ಕೆಲಸ ಮಾಡ್ತಿದ್ದ ಇಡೀ ಪೊಲೀಸ್‌ ಸ್ಟೇಷನ್ನೇ ನಕಲಿ!

ಮಾತನಾಡಲು ಕರೆದು ಕಿಡ್ನಾಪ್‌: ಸಮಾಜ ಸೇವಕಿಯಾಗಿರುವ ವಸಂತಾ ಹಾಗೂ ಆಕೆಯ ಸೋದರ ಸಂಬಂಧಿ ಶಿವಾರೆಡ್ಡಿ ಅವರು ರಿಯಲ್‌ ಎಸ್ಟೇಟ್‌ ಬ್ರೋಕರ್‌ ಕೆಲಸ ಮಾಡುತ್ತಿದ್ದರು. ಆ.16ರಂದು ಸಂಜೆ 6ಕ್ಕೆ ವಸಂತಾ ಅವರ ಮೊಬೈಲ್‌ಗೆ ಕರೆ ಮಾಡಿರುವ ಆರೋಪಿ ಹರೀಶ್‌, ಜಮೀನು ವಿಚಾರವಾಗಿ ಮಾತನಾಡಬೇಕು ಎಂದು ವಸಂತಾ ಮತ್ತು ಶಿವಾರೆಡ್ಡಿ ಅವರನ್ನು ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದ ಬಳಿಯ ಎಟುಬಿ ಹೋಟೆಲ್‌ ಬಳಿಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಆರೋಪಿಗಳಾದ ಹರೀಶ್‌, ಸತ್ಯನಾರಾಯಣ, ಪ್ರಸಾದ್‌ ಹಾಗೂ ಇತರೆ ಮೂವರು ಬೇರೆ ಹೋಟೆಲ್‌ನಲ್ಲಿ ಮಾತನಾಡೋಣ ಎಂದು ವಸಂತಾ ಮತ್ತು ಶಿವಾರೆಡ್ಡಿಯನ್ನು ಕಾರಿನಲ್ಲಿ ಕೂರಿಸಿಕೊಂಡು ದೇವನಹಳ್ಳಿ ಕಡೆಗೆ ತೆರಳಿದ್ದಾರೆ. ಆಗ ಅನುಮಾನಗೊಂಡು ವಸಂತಾ ಅವರು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಇಬ್ಬರ ಮೊಬೈಲ್‌ ಕಿತ್ತುಕೊಂಡು ಸುಮ್ಮನೆ ಕೂರುವಂತೆ ಹೆದರಿಸಿದ್ದಾರೆ.

.50 ಲಕ್ಷಕ್ಕೆ ಬೇಡಿಕೆ: ಮಾರನೇ ದಿನ ಹೈದರಾಬಾದ್‌ನ ಟ್ರಿಡೆಂಟ್‌ ಜಿಮ್‌ನ ಹೋಟೆಲ್‌ನ 11ನೇ ಮಹಡಿಯಲ್ಲಿರುವ ರೂಮ್‌ನಲ್ಲಿ ಕೂಡಿ ಹಾಕಿ, ನಾವು ಪೊಲೀಸರು ಎಂದು ನಕಲಿ ಐಡಿ ಕಾರ್ಡ್‌ ತೋರಿಸಿ .50 ಲಕ್ಷ ನೀಡಿದರಷ್ಟೇ ಬಿಡುವುದಾಗಿ ಹೆದರಿಸಿದ್ದಾರೆ. ಶಿವಾರೆಡ್ಡಿಯನ್ನು ಒತ್ತೆಯಾಳಾಗಿರಿಸಿಕೊಂಡು ವಸಂತಾ ಅವರಿಗೆ ಹಣ ತರುವಂತೆ ಬೆಂಗಳೂರಿಗೆ ಕಳುಹಿಸಿದ್ದಾರೆ. ಆ.18ರಂದು ಬೆಂಗಳೂರಿಗೆ ಬಂದ ವಸಂತಾ, ಸ್ನೇಹಿತರಿಂದ .1.50 ಲಕ್ಷ ಸಾಲ, ತನ್ನಲ್ಲಿದ್ದ ಚಿನ್ನಾಭರಣಗಳನ್ನು ಗಿರವಿ ಇರಿಸಿ .9.50 ಲಕ್ಷ ಪಡೆದಿದ್ದಾರೆ. ಆರೋಪಿಗಳು .25 ಲಕ್ಷಕ್ಕೆ ತಾಕೀತು ಮಾಡಿದ್ದಾರೆ. ನನ್ನ ಬಳಿ ಇಷ್ಟೇ ಹಣ ಇರುವುದೆಂದು ವಸಂತಾ ಹೇಳಿದಾಗ ಒಪ್ಪಿದ್ದಾರೆ.

ಅದರಂತೆ ವಸಂತಾ ಹೈದರಾಬಾದ್‌ಗೆ ಹೋಗಿ ಹಣ ನೀಡಿದ ಬಳಿಕ ಆರೋಪಿಗಳು ಶಿವಾರೆಡ್ಡಿಯನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಬಂದ ವಸಂತಾ, ನಡೆದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Bengaluru: ಪೊಲೀಸರ ಸೋಗಿನಲ್ಲಿ ಅಂಗಡಿ ಮಾಲೀಕರ ಸುಲಿಗೆ ಮಾಡ್ತಿದ್ದವನ ಬಂಧನ

ಹೈದರಾಬಾದ್‌ನಲ್ಲಿ ಪರಿಚಯ: ದೂರುದಾರರಾದ ವಸಂತಾ ಅವರ ಮಗಳು ಹೈದರಾಬಾದ್‌ನ ಬೋರ್ಡಿಂಗ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಗಾಗ ವಸಂತಾ ಹಾಗೂ ಶಿವಾರೆಡ್ಡಿ ಹೈದರಾಬಾದ್‌ಗೆ ತೆರಳಿ ಮಗಳನ್ನು ಮಾತನಾಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಆರೋಪಿ ಹರೀಶ್‌, ವಸಂತಾ ಅವರಿಗೆ ಪರಿಚಿತನಾಗಿ ರಿಯಲ್‌ ಎಸ್ಟೇಟ್‌ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ. ಆಗಾಗ ವಸಂತಾ ಅವರಿಗೆ ಮೊಬೈಲ್‌ ಕರೆ ಮಾಡಿ ರಿಯಲ್‌ ಎಸ್ಟೇಟ್‌ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!