ಬೆಂಗಳೂರು: ಫಾರಿನ್‌ ಎಣ್ಣೆ ಡೀಲರ್‌ಶಿಪ್‌ ಹೆಸರಲ್ಲಿ ಲಕ್ಷಾಂತರ ರೂ. ಟೋಪಿ, ಕೇರಳ ಮೂಲದ ದಂಪತಿ ಬಂಧನ

By Kannadaprabha NewsFirst Published Aug 14, 2023, 4:52 AM IST
Highlights

ಕೇರಳ ಮೂಲದ ಸುಬೀಷ್‌ ಪಿ.ವಾಸು ಮತ್ತು ಆತನ ಪತ್ನಿ ಶಿಲ್ಪಾ ಬಾಬು ಬಂಧಿತರು. ಹೈದರಾಬಾದ್‌ ಮೂಲದ ಉದ್ಯಮಿ ಕೆ.ಆರ್‌.ಕಮಲೇಶ್‌ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
 

ಬೆಂಗಳೂರು(ಆ.14):  ವಿದೇಶದಿಂದ ಭಾರತಕ್ಕೆ ಮದ್ಯ ತರಿಸಿ ವಿವಿಧ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದು, ಕರ್ನಾಟಕದ ಸಬ್‌ ಡೀಲರ್‌ಶಿಪ್‌ ನೀಡುವುದಾಗಿ ನಂಬಿಸಿ ಹೈದರಾಬಾದ್‌ ಮೂಲದ ಉದ್ಯಮಿಯೊಬ್ಬರಿಂದ .67 ಲಕ್ಷ ಪಡೆದು ವಂಚನೆ ಮಾಡಿದ ಆರೋಪದಡಿ ಕೇರಳ ಮೂಲದ ವಂಚಕ ದಂಪತಿಯನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಸುಬೀಷ್‌ ಪಿ.ವಾಸು ಮತ್ತು ಆತನ ಪತ್ನಿ ಶಿಲ್ಪಾ ಬಾಬು ಬಂಧಿತರು. ಹೈದರಾಬಾದ್‌ ಮೂಲದ ಉದ್ಯಮಿ ಕೆ.ಆರ್‌.ಕಮಲೇಶ್‌ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಡವೆಂದು ಬೇಡಿಕೊಂಡರೂ ಬಿಡದೇ ಹೆತ್ತ ಮಕ್ಕಳನ್ನೇ ಬಾವಿಗೆ ತಳ್ಳಿದ ತಾಯಿ, ತಾನೂ ಹಾರಿ ಸಾವು

ಪ್ರಕರಣದ ವಿವರ:

ಆರೋಪಿಗಳು ಬಿಸಿನೆಸ್‌ ಎಕ್ಸ್‌ಚೇಂಜ್‌ ಗ್ರೂಪ್‌ ಎಲ್‌ಎಲ್‌ಪಿ ಕಂಪನಿ ಹೆಸರಿನಲ್ಲಿ 2022ನೇ ಸಾಲಿನಲ್ಲಿ ಉದ್ಯಮಿ ಕಮಲೇಶ್‌ಗೆ ಕರೆ ಮಾಡಿ ಲಿಕ್ಕರ್‌ ವ್ಯವಹಾರದ ಬಗ್ಗೆ ಮಾತನಾಡಿದ್ದರು. ಅದರಂತೆ ಕಮಲೇಶ್‌ ಮಾರತ್‌ಹಳ್ಳಿಯಲ್ಲಿರುವ ಆರೋಪಿಗಳ ಕಂಪನಿಯ ಕಚೇರಿಗೆ ಭೇಟಿ ನೀಡಿ ಮದ್ಯ ವ್ಯವಹಾರದ ಬಗ್ಗೆ ಕೇಳಿದ್ದರು. ಈ ವೇಳೆ ಆರೋಪಿಗಳು ‘ನಾವು ವಿದೇಶದಿಂದ ಭಾರತಕ್ಕೆ ಮದ್ಯ ತರಿಸಿ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡುತ್ತೇವೆ. ನೀವು ಸಹ ಕರ್ನಾಟಕ ರಾಜ್ಯದ ಸಬ್‌ ಡೀಲರ್‌ಶಿಪ್‌ ಪಡೆಯಿರಿ. ಮಾರಾಟದ ಎಲ್ಲ ವ್ಯವಹಾರಗಳನ್ನು ನಾವೇ ನೋಡಿಕೊಳ್ಳುತ್ತೇವೆ. ನಿಮಗೆ ಪ್ರತಿ ಬಾಟಲ್‌ಗೆ .120 ಲಾಭವಾಗಿ ನೀಡುತ್ತೇವೆ ಎಂದು ಹೇಳಿದ್ದರು. ಇವರ ಮಾತು ನಂಬಿದ ಕಮಲೇಶ್‌ ಆರೋಪಿಗಳೊಂದಿಗೆ ಮದ್ಯದ ವ್ಯವಹಾರ ಮಾಡಲು ಸಮ್ಮತಿ ಸೂಚಿಸಿದ್ದರು.

ಠೇವಣಿ ಹೆಸರಿನಲ್ಲಿ .67 ಲಕ್ಷ ವರ್ಗ:

ಈ ವೇಳೆ ಆರೋಪಿಗಳು ವ್ಯವಹಾರ ಶುರು ಮಾಡಲು ಮುಂಗಡ ಠೇವಣಿಯಾಗಿ .50 ಲಕ್ಷ ನೀಡಬೇಕು ಎಂದು ಕಮಲೇಶ್‌ ಅವರಿಂದ ವಿವಿಧ ಹಂತಗಳಲ್ಲಿ .67 ಲಕ್ಷವನ್ನು ಕಂಪನಿಯ ಖಾತೆಗೆ ವರ್ಗಾಯಿಸಿ ಕೊಂಡಿದ್ದರು. ಮತ್ತೊಂದೆಡೆ ಕಮಲೇಶ್‌ ಮದ್ಯದ ವ್ಯವಹಾರ ಮಾಡುವ ಸಲುವಾಗಿ ‘ರೆಡ್‌ ಗ್ರೂ ಟ್ರೇಡಿಂಗ್‌ ಪ್ರೈವೇಟ್‌ ಲಿಮಿಟೆಡ್‌’ ಹೆಸರಿನ ಕಂಪನಿ ತೆರೆದಿದ್ದರು. ಆರೋಪಿಗಳ ಕಂಪನಿ ಜತೆಗೆ ಒಪ್ಪಂದವನ್ನೂ ಮಾಡಿಕೊಂಡಿದ್ದರು.

ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದ ಬೆಂಗಳೂರು ಚಾಯ್‌ವಾಲಾ; ಕಿಡ್ನ್ಯಾಪ್‌ ಮಾಡಿ ಹಣ ಎಗರಿಸಿದ ಸ್ನೇಹಿತರು!

ಕಂಪನಿ ಬಂದ್‌ ಮಾಡಿ ಎಸ್ಕೇಪ್‌

ಕೆಲ ತಿಂಗಳು ಕಳೆದರೂ ಆರೋಪಿಗಳು ಮದ್ಯದ ವ್ಯವಹಾರ ಬಗ್ಗೆ ಕಮಲೇಶ್‌ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ವಿಚಾರಿಸಿದಾಗಲೂ ಇಂದು-ನಾಳೆ ಎಂದು ಸಬೂಬು ಹೇಳಲು ಆರಂಭಿಸಿದ್ದಾರೆ. ಬಳಿಕ ಈ ವ್ಯವಹಾರ ಮಾಡಲು ಸಾಧ್ಯವಿಲ್ಲ. ನಿಮಗೆ ಒಂದು ತಿಂಗಳೊಳಗೆ ಹಣವನ್ನು ವಾಪಸ್‌ ನೀಡುವುದಾಗಿ ಕಮಲೇಶ್‌ಗೆ ಹೇಳಿದ್ದಾರೆ. ಆದರೆ, ಒಂದು ತಿಂಗಳು ಕಳೆದರೂ ಹಣ ವಾಪಾಸ್‌ ನೀಡಿಲ್ಲ. ಬಳಿಕ ಕಮಲೇಶ್‌ ಅವರ ಮೊಬೈಲ್‌ ಕರೆ ಸ್ವೀಕರಿಸದೆ ಸತಾಯಿಸಿದ್ದಾರೆ. ಈ ವೇಳೆ ಕಮಲೇಶ್‌ ಮಾರತ್ತಹಳ್ಳಿಯ ಆರೋಪಿಗಳ ಕಂಪನಿ ಬಳಿ ತೆರಳಿದಾಗ, ಕಂಪನಿ ಬಂದ್‌ ಮಾಡಿಕೊಂಡು ಆರೋಪಿಗಳು ಪರಾರಿಯಾಗಿರುವ ವಿಚಾರ ಗೊತ್ತಾಗಿದೆ. ಬಳಿಕ ಎಚ್‌ಎಎಲ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಕಾರಣಿಗಳ ಜೊತೆಗಿನ ಫೋಟೋ ಬಳಸಿ ವಂಚನೆ

ಆರೋಪಿ ಶಿಲ್ಪಾ ಬಾಬು ರಾಷ್ಟ್ರೀಯ ಪಕ್ಷವೊಂದರ ಕರ್ನಾಟಕದ ರಾಜ್ಯಾಧ್ಯಕ್ಷೆ ಎಂದು ಹೇಳಿಕೊಂಡಿದ್ದಾಳೆ. ರಾಜ್ಯ, ಕೇಂದ್ರ ಸರ್ಕಾರದ ಕೆಲ ಮಂತ್ರಿಗಳು, ಅಧಿಕಾರಿಗಳು, ರಾಜಕೀಯ ಮುಖಂಡ ಜತೆ ವೇದಿಕೆ ಹಂಚಿಕೊಂಡಿರುವ ಫೋಟೋ ತೆಗೆಸಿಕೊಂಡು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿಂದೆಯೂ ಸಹ ಆರೋಪಿಗಳು ಲಿಕ್ಕರ್‌ ಮತ್ತು ತಾಜಾ ಮೀನು ವ್ಯಾಪಾರ, ಚೈನ್‌ ಲಿಂಕ್‌ ಮಾದರಿ ವ್ಯವಹಾರ ನಡೆಸುವುದಾಗಿ ಹಲವರನ್ನು ನಂಬಿಸಿ ಕೋಟ್ಯಂತರ ರುಪಾಯಿ ಪಡೆದು ವಂಚಿಸಿರುವುದು ತನಿಖೆ ವೇಳೆ ಗೊತ್ತಾಗಿದೆ. ಈ ಹಿಂದೆ ವಂಚನೆ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಹೊರಬಂದ ಬಳಿಕವೂ ಆರೋಪಿಗಳು ತಮ್ಮ ವಂಚನೆ ಕೃತ್ಯ ಮುಂದುವರೆಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

click me!