ಕೆಇಎ ಪರೀಕ್ಷೆ ಬ್ಲೂಟೂತ್ ಅಕ್ರಮ ಪೊಲೀಸರಿಗೆ ಮಹತ್ವದ ಸುಳಿವು, ಯಾರು ಈ ಸರ್ಕಾರ್‌

By Kannadaprabha News  |  First Published Nov 6, 2023, 11:09 AM IST

ನಿಗಮ ಮಂಡಳಿಗಳಲ್ಲಿನ ಎಫ್‌ಡಿಎ ಹುದ್ದೆ ಭರ್ತಿಗಾಗಿ ಅ.28ರಂದು ಕೆಇಎ ದಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮದ ತನಿಖೆ ನಡೆಸುತ್ತಿರುವ ಯಾದಗಿರಿ ಪೊಲೀಸರಿಗೆ ಇದೀಗ ಮಹತ್ವದ ಸುಳಿವು ಸಿಕ್ಕಿದೆ.


ಆನಂದ್ ಎಂ. ಸೌದಿ

ಯಾದಗಿರಿ (ನ.6): ನಿಗಮ ಮಂಡಳಿಗಳಲ್ಲಿನ ಎಫ್‌ಡಿಎ ಹುದ್ದೆ ಭರ್ತಿಗಾಗಿ ಅ.28ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮದ ತನಿಖೆ ನಡೆಸುತ್ತಿರುವ ಯಾದಗಿರಿ ಪೊಲೀಸರಿಗೆ ಇದೀಗ ಮಹತ್ವದ ಸುಳಿವು ಸಿಕ್ಕಿದೆ. ಆರೋಪಿಗಳ ಮೊಬೈಲ್‌ ಜಪ್ತಿ ಮಾಡಿ ವಿವರ ಪರಿಶೀಲಿಸಿದ ಖಾಕಿಪಡೆಗೆ ''ಸರ್ಕಾರ್‌'' ಹೆಸರಿನಲ್ಲಿ ಸೇವ್‌ ಮಾಡಿದ್ದ ಮೊಬೈಲ್‌ ಸಂಖ್ಯೆಯಿಂದ ಅಕ್ರಮದಲ್ಲಿ ಭಾಗಿಯಾಗಿರೋ ಅಭ್ಯರ್ಥಿಗಳಿಗೆ ವಾಟ್ಸಪ್ ಕರೆಗಳು ಬಂದಿದ್ದು, ಈ ಸಂಖ್ಯೆ ಕಲಬುರಗಿ ಜಿಲ್ಲೆಯ ಅಫಜಲ್ಪುರದ್ದು ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಕೆಇಎ ಪರೀಕ್ಷೆ ಹಿಂದೆ ''ಅಫಜಲ್ಪುರ ಸರ್ಕಾರ್‌'' ನ ಕೈವಾಡ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಈ ಸರ್ಕಾರ್‌ ಪತ್ತೆಗೆ ಇದೀಗ ಬಲೆ ಬೀಸಿದ್ದಾರೆ.

Tap to resize

Latest Videos

ಬಂಧಿತ ಆರೋಪಿಯೊಬ್ಬನ ಮೊಬೈಲ್‌ಗೆ ಪರೀಕ್ಷಾ ಅವಧಿಯಲ್ಲಿ ವಾಟ್ಸಪ್‌ನಿಂದ 10ಕ್ಕೂ ಹೆಚ್ಚು ಕರೆಗಳು ಬಂದಿವೆ. ಆರೋಪಿ ಆ ಕರೆ ಮಾಡಿದ ವ್ಯಕ್ತಿ ಹೆಸರನ್ನು ''ಸರ್ಕಾರ್‌'' ಎಂದು ಸೇವ್‌ ಮಾಡಿಕೊಂಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದ ವೇಳೆಯೂ ವಾಟ್ಸಪ್‌ ಕರೆಗಳು ಬಂದಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೆಪಿಎಸ್‌ಸಿ ಪರೀಕ್ಷೆಗೆ ಬಂದ ಸ್ತ್ರೀಯರ ತಾಳಿ, ಕಾಲುಂಗರ ತೆಗೆಸಿದ ಸಿಬ್ಬಂದಿ!

ಅಚ್ಚರಿ ಎಂದರೆ, ಪರೀಕ್ಷೆ ನಡೆಯುವ ಎರಡು ದಿನಗಳ ಮೊದಲು ಅಂದರೆ ಗುರುವಾರ (ಅ.26) ಸಂಜೆ 6.17ಕ್ಕೆ ಬಸವರಾಜ್‌ ಎಂಬಾತನ ಹೆಸರು ಹಾಗೂ ಮೊಬೈಲ್‌ ಸಂಖ್ಯೆಯನ್ನು ಆರೋಪಿಗೆ ಮೆಸೇಜ್‌ ಮಾಡಿದ್ದ "ಸರ್ಕಾರ್‌", ಶುಕ್ರವಾರ ರಾತ್ರಿ 10.30ಕ್ಕೆ ಹಾಗೂ ಪರೀಕ್ಷಾ ದಿನವಾದ ಶನಿವಾರ ಮಧ್ಯಾಹ್ನ 12 ರಿಂದ 1.30ರವರೆಗೆ ಸತತ ವಾಟ್ಸಪ್‌ನಲ್ಲಿ ಮಿಸ್ಡ್‌ ಕಾಲ್ ನೀಡಿದ್ದಾನೆ.

ಕಲಬುರಗಿ ಜಿಲ್ಲೆ ಅಫಜಲ್ಪುರದ ವಿಳಾಸ ಹೊಂದಿದ್ದ ಈ ಸಿಮ್ ಅನ್ನು ವಾಟ್ಸಪ್ ಕಾಲ್‌ಗಳಿಗಾಗಿ ಮಾತ್ರ ಬಳಸಲಾಗುತ್ತಿತ್ತು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು ಮತ್ತೊಬ್ಬ ಆರೋಪಿ "ಬಾಸ್‌" ಹೆಸರಿನಲ್ಲಿ ನಂಬರ್‌ ಸೇವ್‌ ಮಾಡಿಕೊಂಡಿದ್ದ ಸಿಮ್‌ ಹುಬ್ಬಳ್ಳಿಯ ಮಹಿಳೆ ವಿಳಾಸದಲ್ಲಿದೆ. ಈ ಸಂಖ್ಯೆಯಿಂದ ಅಭ್ಯರ್ಥಿಗೆ ಉತ್ತರಗಳನ್ನು ಕಳುಹಿಸಿ, ನಂತರ ಡಿಲೀಟ್‌ ಮಾಡಲಾಗುತ್ತಿತ್ತು.

ಯಾದಗಿರಿ: ಇಂದು ನಡೆದ ಕೆಪಿಎಸ್ಸಿ ಗ್ರೂಪ್ 'ಸಿ' 2 ಪತ್ರಿಕೆಗಳ ಪರೀಕ್ಷೆಗೆ 864 ಅಭ್ಯರ್ಥಿಗಳು ಗೈರು!

ಆರೋಪಿಗಳ ವಶಕ್ಕೆ ಪಡೆದು ವಿಚಾರಣೆ ಸಾಧ್ಯತೆ:

ಯಾದಗಿರಿ: ಇಲ್ಲಿನ ಐದು ಪರೀಕ್ಷಾ ಕೇಂದ್ರಗಳಲ್ಲಿ ಎಫ್‌ಐಡಿಎ ಪರೀಕ್ಷೆಯಲ್ಲಿ ನಡೆದ ಅಕ್ರಮದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸರು 11 ಮಂದಿ ಅಭ್ಯರ್ಥಿಗಳು ಹಾಗೂ ಐವರು ಮಧ್ಯವರ್ತಿಗಳು ಸೇರಿ 16 ಮಂದಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಇವರೆಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ವಿಚಾರಣೆ ನಡೆಸಿದರೆ ಮತ್ತಷ್ಟು ಹಗರಣದ ಹೂರಣ ಹೊರಬೀಳಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅರ್ಧಕ್ಕೂ ಹೆಚ್ಚು ಅಭ್ಯರ್ಥಿಗಳು ಗೈರು: ಕರ್ನಾಟಕ ಲೋಕಸೇವಾ ಆಯೋಗದಿಂದ ನ.4, ನ.5ರಂದು ನಡೆದ ಗ್ರೂಪ್‌ ಸಿ ವೃಂದದ ಹುದ್ದೆಗಳಿಗಾಗಿನ ಸ್ಪರ್ಧಾತ್ಮಕ ಪರೀಕ್ಷೆ ಪೊಲೀಸ್ ಕಾವಲಿನಲ್ಲಿ ಕಟ್ಟುನಿಟ್ಟಿನಿಂದ ನಡೆದಿದೆ. ಮೊದಲ ದಿನ ಪರೀಕ್ಷೆಯಲ್ಲಿ ನೋಂದಣಿ ಮಾಡಿಸಿದ್ದ 1,659 ಅಭ್ಯರ್ಥಿಗಳಲ್ಲಿ 763 ಮಂದಿ ಹಾಜರಾಗಿ, 896 ಅಭ್ಯರ್ಥಿಗಳು ಗೈರಾಗಿದ್ದರು. ಎರಡನೇ ದಿನವಾದ ಭಾನುವಾರ (ನ.5) ನಡೆದ ಬೆಳಗ್ಗೆ ಹಾಗೂ ಮಧ್ಯಾಹ್ನದ ಪರೀಕ್ಷೆಗಳಿಗೆ 1,638 ನೋಂದಣಿಯಾಗಿದ್ದರೂ 774 ಅಭ್ಯರ್ಥಿಗಳು ಹಾಜರಾಗಿ, 864 ಅಭ್ಯರ್ಥಿಗಳು ಗೈರಾಗಿದ್ದಾರೆ. ಕೆಇಎ ಎಫ್‌ಡಿಎ ಪರೀಕ್ಷೆ ಅಕ್ರಮ ಬೆಳಕಿಗೆ ಬಂದ ನಂತರ ಪೊಲೀಸ್‌ ಸರ್ಪಗಾವಲಿನಲ್ಲಿ ಪರೀಕ್ಷೆ ನಡೆಸಲು ಕೆಪಿಎಸ್ಸಿ ಕ್ರಮ ಕೈಗೊಂಡಿರುವುದರಿಂದ ಕೆಲ ಅಕ್ರಮಕೋರರು ಸಿಕ್ಕಿಬೀಳುವ ಭಯದಿಂದ ಗೈರಾಗಿರಬಹುದು ಎಂದು ಹೇಳಲಾಗುತ್ತಿದೆ.

click me!