ಹೆಣ್ಮಕ್ಕಳ ಅ*ಶ್ಲೀ*ಲ ವಿಡಿಯೋ ಮಾಡಿ, ಒಪ್ಪಿಗೆ ಇಲ್ಲದೇ ಶೇರ್‌ ಮಾಡಿದ್ರೆ ಜೈಲೂಟ ಫಿಕ್ಸ್! ನಮ್ಮ ರಾಜ್ಯದಲ್ಲಿ ಹೊಸ ಮಾರ್ಗಸೂಚಿ

Kannadaprabha News   | Kannada Prabha
Published : Jun 17, 2026, 12:38 PM IST
private video sharing

ಸಾರಾಂಶ

ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋ ಅಥವಾ ವಿಡಿಯೋ ಪ್ರಸಾರ ಮಾಡುವ ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್‌ ದಾಖಲಿಸಲು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆಯು ಪ್ರಸಾರಕ್ಕೆ ನೀಡಿದ ಒಪ್ಪಿಗೆಯಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ದೂರು ದಾಖಲಿಸಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು: ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ವಿಡಿಯೋ ಮತ್ತು ಫೋಟೋ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಪೊಲೀಸರು ತಡ ಮಾಡದೆ ತಕ್ಷಣ ದೂರು (ಎಫ್‌ಐಆರ್‌) ದಾಖಲಿಸಬೇಕು. ಜತೆಗೆ ಇಂಥ ಪ್ರಕರಣಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಡಾ। ಎಂ.ಎ.ಸಲೀಂ ಅವರು ಮಾರ್ಗಸೂಚಿ ಒಳಗೊಂಡ ಆದೇಶ ಹೊರಡಿಸಿದ್ದಾರೆ.

ಅಶ್ಲೀಲ ಚಿತ್ರ/ವಿಡಿಯೋ ಚಿತ್ರೀಕರಣ ಹಾಗೂ ವೈರಲ್ ಕುರಿತ ಪ್ರಕರಣಗಳ ದಾಖಲಿಸುವಲ್ಲಿ ಸಂತ್ರಸ್ತರು ಚಿತ್ರೀಕರಿಸಲು ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ಪೊಲೀಸರು ದೂರು ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.

ಚಿತ್ರ/ವಿಡಿಯೋ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದರೆ ಪ್ರಸಾರಕ್ಕೂ ಒಪ್ಪಿಗೆ ನೀಡಿದಂತೆ ಅಲ್ಲ ಎಂಬ ಕಾನೂನು ಸ್ಥಿತಿಯನ್ನು ಸ್ಪಷ್ಟಪಡಿಸಲಾಗಿದೆ. ಅಂದರೆ, ಒಬ್ಬ ವ್ಯಕ್ತಿ ಚಿತ್ರ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ, ಅದನ್ನು ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ನೀಡದಿದ್ದರೆ, ಅದು ಸಂಜ್ಞೆಯ ಅಪರಾಧವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಖಾಸಗಿ ಫೋಟೋ/ವಿಡಿಯೋಗಳ ಚಿತ್ರೀಕರಣಕ್ಕೆ ಒಪ್ಪಿಗೆಯಿದ್ದು, ನಂತರದ ಹಂಚಿಕೆಗೆ ಒಪ್ಪಿಗೆ ಇಲ್ಲದೆ ಅವುಗಳನ್ನು ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಅದು ಕಾನೂನು ಪ್ರಕಾರ ಸಂಜ್ಞೆಯ ಅಪರಾಧವಾಗುತ್ತದೆ. ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಗೌಪ್ಯತೆ ಹಕ್ಕನ್ನು ಮಾನ್ಯ ಮಾಡಿದೆ. ಹೀಗಾಗಿ, ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ವಿಡಿಯೋ ಮತ್ತು ಫೋಟೋ ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಪೊಲೀಸರು ತಕ್ಷಣವೇ ಎಫ್‌ಐಆರ್‌ ದಾಖಲಿಸಬೇಕು.

ಜತೆಗೆ, ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ ಪ್ರಕರಣದ ವಾಸ್ತಾವಾಂಶಗಳಿಂದ ಅಪರಾಧದ ಸಾಧ್ಯತೆ ಕಂಡು ಬಂದಲ್ಲಿ ಆ ಅಂಶಗಳನ್ನು ಸಹ ಎಫ್‌ಐಆರ್‌ನಲ್ಲಿ ಸೇರಿಸಬೇಕು. ಇಂತಹ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸದಿರುವುದು ಅಥವಾ ಪೂರ್ವಾನುಮತಿ ಎಂಬ ಕಾರಣ ಕೊಟ್ಟು ಎಫ್‌ಐಆರ್‌ ವಿಳಂಬ ಮಾಡಿದರೆ ಅದನ್ನು ಕರ್ತವ್ಯ ಲೋಪವೆಂದು ಪರಿಗಣಿಸಿ ಅಂತಹ ಅಧಿಕಾರಿ-ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು:

-ಖಾಸಗಿ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆ ಎಂದರೆ ಪ್ರಸಾರಕ್ಕೆ ನೀಡಿದ ಒಪ್ಪಿಗೆಯಲ್ಲ. ಬಿಎನ್‌ಎಸ್‌ ಸೆಕ್ಷ ನ್‌ 77ರ ವಿವರಣೆ 2ರ ಪ್ರಕಾರ ಖಾಸಗಿ ಫೋಟೋ ಅಥವಾ ವಿಡಿಯೋ ಸೆರೆ ಹಿಡಿಯಲು ಒಪ್ಪಿಗೆ ನೀಡಿದ್ದರೂ 3ನೇ ವ್ಯಕ್ತಿಗಳಿಗೆ ಹಂಚಲು ಸಮ್ಮತಿಸದೆ ಅವು ಹಂಚಿಕೆಯಾಗಿದ್ದರೆ ಅದು ಅಪರಾಧ.

- ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷ ನ್‌ 66(ಇ), 67 ಮತ್ತು 67(ಎ)ಗಳು ಲಿಂಗ ತಟಸ್ಥವಾಗಿದ್ದು, ಚಿತ್ರೀಕರಣಕ್ಕೆ ಪೂರ್ವಾನುಮತಿ ಇದ್ದರೂ ಅನುಮತಿಯಿಲ್ಲದೆ ಪ್ರಸಾರ ಮಾಡಿದರೆ ಮುಖ್ಯ ಅಪರಾಧವಾಗುತ್ತದೆ.

- ಮಹಿಳೆ ಖಾಸಗಿ ಕ್ರಿಯೆಯಲ್ಲಿ ತೊಡಗಿರುವಾಗ ಯಾರೂ ನೋಡಬಾರದು ಎಂಬ ನಿರೀಕ್ಷೆಯ ಪರಿಸ್ಥಿತಿಯಲ್ಲಿ ಆಕೆಯನ್ನು ನೋಡುವುದು, ಫೋಟೋ ಅಥವಾ ವಿಡಿಯೋ ಸೆರೆ ಹಿಡಿಯುವುದು, ಅವುಗಳನ್ನು ಪ್ರಸಾರ ಮಾಡುವುದು ಬಿಎನ್‌ಎಸ್‌ ಸೆಕ್ಷ ನ್‌ 77ರ ಪ್ರಕಾರ ಅಪರಾಧ. (ಇದು ಮಹಿಳಾ ಸಂತ್ರಸ್ತರಿಗೆ ಮಾತ್ರ ಅನ್ವಯ)

-ವ್ಯಕ್ತಿಯ ಖಾಸಗಿ ಅಂಗಗಳ ಫೋಟೋ ಅಥವಾ ವಿಡಿಯೋವನ್ನು ಅವರ ಅನುಮತಿಯಿಲ್ಲದೆ ಸೆರೆ ಹಿಡಿಯುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು, ಗೌಪ್ಯತೆಯನ್ನು ಉಲ್ಲಂಘಿಸುವ ಸಂದರ್ಭಗಳಲ್ಲಿ ನಡೆದರೆ ಅದು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66ಇ ಪ್ರಕಾರ ಅಪರಾಧ.

- ಎಲೆಕ್ಟ್ರಾನಿಕ್‌ ರೂಪದಲ್ಲಿ ಅಶ್ಲೀಲ, ಕಾಮ ಉದ್ದೀಪನ ಅಥವಾ ಕಾಮ ಪ್ರಚೋದಕ ವಿಷಯ ಪ್ರಕಟಿಸುವುದು, ಪ್ರಸಾರ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷ ನ್‌ 67ರ ಅನ್ವಯ ಅಪರಾಧ.

- ಲೈಂಗಿಕ ಕ್ರಿಯೆ ಅಥವಾ ಲೈಂಗಿಕವಾಗಿ ಸ್ಪಷ್ಟ ವಿಷಯ ಹೊಂದಿರುವ ವಸ್ತುಗಳನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷ ನ್‌ 67(ಎ) ಪ್ರಕಾರ ಅಪರಾಧ.

-ಖಾಸಗಿ ವಿಡಿಯೋಗಳ ಪ್ರಸಾರ ಬ್ಲ್ಯಾಕ್‌ಮೇಲ್‌ ವಿಡಿಯೋಗಳು, ರಿವೆಂಜ್‌ ಫೋರ್ನೋಗ್ರಫಿ ಇತರೆ ಪ್ರಕರಣಗಳ ಕುರಿತು ದೂರು ಬಂದ ತಕ್ಷಣ ಎಫ್‌ಐಆರ್‌ ದಾಖಲಿಸುವುದು ಕಡ್ಡಾಯ.

-ಪೂರ್ವಾನುಮತಿ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಲು ನಿರಾಕರಿಸಬಾರದು.

-ಖಾಸಗಿ ಫೋಟೋ ಅಥವಾ ವಿಡಿಯೊಗಳನ್ನು ಬಳಸಿ ಹಣ ಸುಲಿಗೆ, ಲೈಂಗಿಕ ದೌರ್ಜನ್ಯ ನಡೆಸಿದರೆ ಸುಲಿಗೆ ಮತ್ತು ಕ್ರಿಮಿನಲ್‌ ಬೆದರಿಕೆಗೆ ಸಂಬಂಧಿಸಿದ ಕಾಯ್ದೆ ಜತೆಗೆ ಐಟಿ ಕಾಯ್ದೆಯ ಸೆಕ್ಷನ್‌ಗಳನ್ನು ಹಾಕಬೇಕು.

-ಅಪರಾಧ ಕೃತ್ಯ ಸ್ಥಳೀಯ ಠಾಣೆ ವ್ಯಾಪ್ತಿ ಹೊರಗೆ ನಡೆದಿದ್ದರೆ ಬಿಎನ್‌ಎಸ್‌ ಪ್ರಕಾರ ಝೀರೋ ಎಫ್‌ಐಆರ್‌ ದಾಖಲಿಸಿ, ನಂತರ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಬೇಕು.

-ಕಂಟೆಂಟ್‌ ತೆಗೆದು ಹಾಕುವುದು ಮತ್ತು ಸಾಕ್ಷ್ಯ ಸಂರಕ್ಷಣೆ ಮಾಡಬೇಕು.

-ಸಂತ್ರಸ್ತರ ರಕ್ಷಣೆ ಮಾಡಬೇಕು, ಪ್ರಕರಣದಲ್ಲಿ ಸೈಬರ್‌ ಘಟಕಗಳೊಂದಿಗೆ ಸಮನ್ವಯತೆ ಸಾಧಿಸಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru crime: ತಾಯಿ-ಅಕ್ಕನ ಬಗ್ಗೆ ಆಡಿದ ಆ ಮಾತಿಗೆ ಗೆಳೆಯನ್ನೇ ಇರಿದು ಕೊಂದ ಯುವಕ!
ವೆನ್ನೆಲ್ಲಾ ಹ*ತ್ಯೆ ಕೇಸ್‌: FSL ವರದಿಯಲ್ಲಿ ಕೊಲೆಯ ಮತ್ತಷ್ಟು ಭೀಕರತೆ ಬೆಳಕಿಗೆ! ಕೊಲೆ ನಡೆದದ್ದು ಹೇಗೆ?