ಸಂತ್ರಸ್ತೆಗೆ ಅರ್ಧ ಎಕರೆ ಕೊಟ್ಟ ಅತ್ಯಾಚಾರಿ, ಪುತ್ರನಿಗೆ 6.5 ಲಕ್ಷ ರು. ಪರಿಹಾರ, ಶಿಕ್ಷೆ ಇಳಿಸಿದ ಹೈಕೋರ್ಟ್

By Kannadaprabha News  |  First Published Jul 24, 2024, 8:10 PM IST

ಮದುವೆಯಾಗುವುದಾಗಿ ಭರವಸೆ ನೀಡಿ ಗರ್ಭಿಣಿಯನ್ನಾಗಿಸಿ ವಂಚಿಸಿದ ಪ್ರಕರಣದಲ್ಲಿ ಯುವತಿ ಹಾಗೂ ಆಕೆಯ ಪುತ್ರನಿಗೆ  ಆರೂವರೆಗೆ ಲಕ್ಷ ರು. ಪರಿಹಾರ/ಜೀವನಾಂಶ ಮತ್ತು ವಿತರಿಸಿದ ಅರ್ಧ ಎಕರೆ ಜಮೀನು ಪರಿಗಣಿಸಿ ಶಿಕ್ಷೆ ಕಡಿತಗೊಳಿಸಿದ ಹೈಕೋರ್ಟ್‌


ವೆಂಕಟೇಶ್‌ ಕಲಿಪಿ

ಬೆಂಗಳೂರು (ಜು.24): ಮದುವೆಯಾಗುವುದಾಗಿ ಭರವಸೆ ನೀಡಿ ಗರ್ಭಿಣಿಯನ್ನಾಗಿಸಿ ವಂಚಿಸಿದ ಪ್ರಕರಣದಲ್ಲಿ ಯುವತಿ ಹಾಗೂ ಆಕೆಯ ಪುತ್ರನಿಗೆ ಪಾವತಿಸಿದ ಆರೂವರೆಗೆ ಲಕ್ಷ ರು. ಪರಿಹಾರ/ಜೀವನಾಂಶ ಮತ್ತು ವಿತರಿಸಿದ ಅರ್ಧ ಎಕರೆ ಜಮೀನು ಪರಿಗಣಿಸಿದ ಹೈಕೋರ್ಟ್‌, ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗರಿಷ್ಠ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ನಾಲ್ಕೂವರೆ ತಿಂಗಳಿಗೆ ಕಡಿತಗೊಳಿಸಿ ಅದೇಶಿಸಿದೆ.

Tap to resize

Latest Videos

ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲೂಕು ನಿವಾಸಿ ಸಣ್ಣೇಗೌಡ (40) ಅವರನ್ನು ದೋಷಿಯಾಗಿ ತೀರ್ಮಾನಿಸಿದ್ದ ವಿಚಾರಣಾ ನ್ಯಾಯಾಲಯ, ಅತ್ಯಾಚಾರ ಅಪರಾಧಕ್ಕೆ ಐದು ವರ್ಷ, ವಂಚನೆಗೆ ಒಂದು ವರ್ಷ ಮತ್ತು ಜೀವ ಬೆದರಿಕೆಗೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಅಲ್ಲದೆ, ಮೂರು ಅಪರಾಧಗಳಿಗೆ ತಲಾ ಐದು ಸಾವಿರದಂತೆ ಒಟ್ಟು 15 ಸಾವಿರ ರು. ದಂಡ ವಿಧಿಸಿ 2011ರ ಅ.31ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಸಣ್ಣೇಗೌಡ, ಸಂತ್ರಸ್ತೆಯೊಂದಿಗೆ ಒಪ್ಪಂದ ಮಾಡಿಕೊಂಡು 4 ಲಕ್ಷ ರು. ಪರಿಹಾರ, ಆಕೆಯ ಪುತ್ರನ ಜೀವನಾಂಶಕ್ಕೆ ಬ್ಯಾಂಕಿನಲ್ಲಿ 2,47,500 ರು. ಠೇವಣಿ ಇಡಲಾಗಿದೆ. ತನ್ನ ಪಾಲಿನ ಅರ್ಧ ಎಕರೆ ಭೂಮಿ ನೀಡಿದ್ದೇನೆ. ಅದನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯದ ಆದೇಶದ ನಂತರ ಜೈಲುವಾಸ ಅನುಭವಿಸಿದ ನಾಲ್ಕೂವರೆ ತಿಂಗಳಿಗೆ ಶಿಕ್ಷಾವಧಿಯನ್ನು ಕಡಿತಗೊಳಿಸಬೇಕು ಎಂದು ಮನವಿ ಮಾಡಿದ್ದ.

ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದುಗೊಳಿಸುವಂತೆ ಸಹಪಾಲುದಾರರಿಂದ ಕೋರ್ಟ್‌ಗೆ ಮೊರೆ

ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್‌ ಅವರ ಪೀಠ, ಪ್ರಕರಣದಲ್ಲಿ ಸಂತ್ರಸ್ತೆಯ ಸಾಕ್ಷ್ಯ, ಆಕೆ 2009ರ ನ.11ರಂದು ಗಂಡು ಮಗುವಿಗೆ ಜನ್ಮ ನೀಡಿರುವುದು ಹಾಗೂ ಆಕೆಗೆ ಚಿಕಿತ್ಸೆ ನೀಡಿದ್ದ ವೈದ್ಯರ ಸಾಕ್ಷ್ಯ ಪರಿಗಣಿಸಿ ಸಣ್ಣೇಗೌಡನನ್ನು ದೋಷಿಯಾಗಿ ತೀರ್ಮಾನಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು.

ವಿಚಾರಣಾ ನ್ಯಾಯಾಲಯವು 2011ರ ಅ.31ರಂದು ಅಪರಾಧಿಗೆ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು 2012ರ ಮಾ.14ರಂದು ಅಮಾನತ್ತಿನಲ್ಲಿರಿಸಿದ್ದ ಹೈಕೋರ್ಟ್‌ ಸಣ್ಣೇಗೌಡನನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಲು ಆದೇಶಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶದ ಬಳಿಕ ನಾಲ್ಕೂವರೆ ತಿಂಗಳು ಸಣ್ಣೇಗೌಡ ಜೈಲು ಶಿಕ್ಷೆ ಅನುಭವಿಸಿದ್ದಾನೆ. ನಂತರ ಸಂತ್ರಸ್ತೆ ಮತ್ತು ಅಪರಾಧಿ ನಡುವೆ ಒಪ್ಪಂದವಾಗಿ ಯುವತಿಗೆ ನಗದು ಪರಿಹಾರ ಹಾಗೂ ಆಕೆಯ ಪುತ್ರನಿಗೆ ಜಮೀನು, ಜೀವನಾಂಶ ಠೇವಣಿ ಇರಿಸಿರುವುದನ್ನು ಪರಿಗಣಿಸಿದರೆ ಶಿಕ್ಷಾವಧಿಯನ್ನು ನಾಲ್ಕೂವರೆ ತಿಂಗಳಿಗೆ ಕಡಿತಗೊಳಿಸುವುದು ಸೂಕ್ತ ಎಂದು ನ್ಯಾಯಪೀಠ ತೀರ್ಮಾನಿಸಿತು.

ಅಪರಾಧಿಗೆ ವಿಧಿಸಿರುವ 15 ಸಾವಿರ ರು. ದಂಡದಲ್ಲಿ 10 ಸಾವಿರ ರು.ಗಳನ್ನು ಆಕೆಯನ್ನು ಕರೆಸಿಕೊಂಡು ಪರಿಹಾರ ಮೊತ್ತ ವಿತರಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಅವನು ರೀಲ್​ ಹೀರೋ ರಿಯಲ್​ ವಿಲನ್ ಪೊಲೀಸರಿಗೆ ಹೆದರಿ ರಾತ್ರೋ ರಾತ್ರಿ ಮದುವೆ 2 ತಿಂಗಳಿಗೆ ಮತ್ತೊಬ್ಬಳ ನಂಟು!

ಕೂಲಿಗೆ ಬಂದಾಗ ಮದುವೆ ಆಮಿಷ: 2009ರಲ್ಲಿ ತಮ್ಮ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಬಂದ 19 ವರ್ಷದ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಸಣ್ಣೇಗೌಡ ಮದುವೆಯಾಗುವುದಾಗಿ ತಿಳಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಈ ಘಟನೆ ಬಳಿಕ ಕೆಲ ಸಮಯ ಸಂತ್ರಸ್ತೆ ಕಣ್ಮರೆಯಾಗಿದ್ದರು. 2009ರ ಮಾ.6ರಂದು ಮತ್ತೆ ಕೂಲಿ ಕೆಲಸಕ್ಕೆ ಬಂದಾಗಲೂ ಸಣ್ಣೇಗೌಡ ಮದುವೆಯಾಗುವುದಾಗಿ ದೇವರ ಮೇಲೆ ಆಣೆ ಮಾಡಿ ಸಂತ್ರಸ್ತೆಯ ಇಚ್ಛೆಗೆ ವಿರುದ್ಧ ಬಲವಂತವಾಗಿ ಸಂಭೋಗ ನಡೆಸಿದ್ದ. ಇದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದರು. ಈ ವಿಷಯ ತಿಳಿಸಿದಾಗ ತನಗೂ ಗರ್ಭಕ್ಕೂ ಸಂಬಂಧವಿಲ್ಲ ಎಂದಿದ್ದ ಸಣ್ಣೇಗೌಡ ಸಂತ್ರಸ್ತೆಯನ್ನು ಮದುವೆಯಾಗುವುದಿಲ್ಲ ಎಂದು ನುಡಿದಿದ್ದ.

ಗ್ರಾಮದ ಹಿರಿಯರು ನಡೆಸಿದ ಪಂಚಾಯಿತಿ ವಿಫಲವಾಗಿದ್ದರಿಂದ ಸಂತ್ರಸ್ತೆ ಪೊಲೀಸರಿಗೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮೈಸೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಸಣ್ಣೇಗೌಡನನ್ನು ದೋಷಿಯಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿತ್ತು.

ಇದರಿಂದ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದ ಸಣ್ಣೇಗೌಡ, ಸಂತ್ರಸ್ತೆ ಹಾಗೂ ಆಕೆಯ ಪುತ್ರನ ಜೊತೆಗೆ ಮಾಡಿಕೊಂಡ ಒಪ್ಪಂದ ಪರಿಗಣಿಸಿ ಶಿಕ್ಷಾವಧಿಯನ್ನು ಕಡಿತಗೊಳಿಸಬೇಕು ಎಂದು ಕೋರಿದ್ದ. ಈ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ.

click me!