ಡ್ರಗ್ಸ್‌ ಸುಳಿಯಲ್ಲಿ ಬಿಗ್‌ಬಾಸ್‌ ಸ್ಪರ್ಧಿ..!

By Kannadaprabha NewsFirst Published Mar 6, 2021, 7:52 AM IST
Highlights

ವಿದೇಶಿ ಪೆಡ್ಲರ್‌ಗಳ ಬಂಧನದಿಂದ ಮಸ್ತಾನ್‌ ಚಂದ್ರ ಆಟ ಬೆಳಕಿಗೆ| ಪೇಜ್‌ ತ್ರಿ ಪಾರ್ಟಿಗಳ ಆಯೋಜನೆ| ಅಲ್ಲಿ ನಟ-ನಟಿಯರಿಗೆ ಡ್ರಗ್ಸ್‌ ಪೂರೈಕೆ ಶಂಕೆ| ಮಸ್ತಾನ್‌, ಆತನ ಸ್ನೇಹಿತನನ್ನು ವಶಕ್ಕೆ ಪಡೆದ ಪೊಲೀಸರು| ನೈಜಿರಿಯನ್‌ ಪೆಡ್ಲರ್‌ಗಳಿಂದ 3.5 ಕೋಟಿ ಮೌಲ್ಯದ ಡ್ರಗ್ಸ್‌ ವಶ| 2.5 ಲಕ್ಷ ನಗದು ಜಪ್ತಿ| 

ಬೆಂಗಳೂರು(ಮಾ.06):  ಚಲನಚಿತ್ರ ನಟಿಯರ ಬಳಿಕ ಬಿಗ್‌ಬಾಸ್‌ ಸ್ಪರ್ಧಿಯೊಬ್ಬ ಡ್ರಗ್ಸ್‌ ಜಾಲದ ಸುಳಿಗೆ ಸಿಲುಕಿದ್ದು, ಆತನ ಸಂಪರ್ಕದಲ್ಲಿದ್ದ ಮೂವರು ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಿರುವ ಪೊಲೀಸರು 3.5 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ನೈಜಿರಿಯಾ ಪ್ರಜೆಗಳಾದ ಉಗುಚುಕ್ವ ಹ್ಯಾರಿಸನ್‌ ಅಗಬಂಟಿ ಅಲಿಯಾಸ್‌ ಜಾನ್‌ ಪೆಡ್ಲರ್‌, ಜಾನ್‌ ನ್ಯಾನ್ಸೊ ಹಾಗೂ ಲೊಕೊಂಡೊ ಲೊಂಡ್ಜಾ ಇಮ್ಯುಯಲ್‌ ಬಂಧಿತರು. ಆರೋಪಿಗಳ ಬಳಿ 204 ಗ್ರಾಂ ಕೊಕೇನ್‌, ಎಲ್‌ಎಸ್‌ಡಿ ಸ್ಟ್ರಿಫ್ಸ್‌ 526, 2 ಸಾವಿರ ಎಕ್ಸ್‌ಸ್ಟೆನ್ಸಿ ಮಾತ್ರೆಗಳು ಸೇರಿ 3.5 ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆಯಾಗಿದೆ.

ಈ ವಿದೇಶಿ ಪ್ರಜೆಗಳ ಜತೆ ಸಂಪರ್ಕದಲ್ಲಿದ್ದ ಕನ್ನಡ ಬಿಗ್‌ಬಾಸ್‌ ನಾಲ್ಕನೇ ಆವೃತ್ತಿಯ ಸ್ಪರ್ಧಿ ಮಸ್ತಾನ್‌ ಚಂದ್ರ, ಆತನ ಗೆಳೆಯ ಕೇಶವನನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಪೆಡ್ಲರ್‌ ನೈಜೀರಿಯಾ ಮೂಲದ ಉಸ್ಮಾನ್‌ ಮಹಮ್ಮದ್‌ ಅಲಿಯಾಸ್‌ ಮೂಸಾ ಪತ್ತೆಗೆ ಬಲೆ ಬೀಸಲಾಗಿದೆ. ನಾಗರವಾರ ಸರ್ವಿಸ್‌ ರಸ್ತೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಪೆಡ್ಲರ್‌ಗಳನ್ನು ಸೆರೆ ಹಿಡಿಯಲಾಯಿತು ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾಹಿತಿ ನೀಡಿದ್ದಾರೆ.

ಡ್ರಗ್ ಸೀಝ್: ಬಿಜೆಪಿ ಮುಖಂಡನಿಗೆ ಸಮನ್ಸ್

ವಿದೇಶಿ ಪ್ರಜೆಗಳು ಬಲೆಗೆ:

ಆವಲಹಳ್ಳಿಯಲ್ಲಿ ಜಾನ್‌ ಪೆಡ್ಲರ್‌ ನೆಲೆಸಿದ್ದರೆ, ವಿಶ್ವಾಸ ಅಗ್ರಹಾರ ಲೇಔಟ್‌ನಲ್ಲಿ ಜಾನ್‌ ವಾಸವಾಗಿದ್ದ. ನಾಗವಾರದ ಸರ್ವಿಸ್‌ ರಸ್ತೆ ಸಮೀಪದ ಅಂಬೇಡ್ಕರ್‌ ಮೈದಾನದಲ್ಲಿ ಫೆ.26ರಂದು ಈ ಇಬ್ಬರು ವಿದೇಶಿ ಪೆಡ್ಲರ್‌ಗಳು ಡ್ರಗ್ಸ್‌ ಮಾರಾಟಕ್ಕೆ ಸಜ್ಜಾಗಿದ್ದರು. ಆಗ ಖಚಿತ ಮಾಹಿತಿ ಪಡೆದ ಗೋವಿಂದಪುರ ಠಾಣೆ ಇನ್ಸ್‌ಪೆಕ್ಟರ್‌ ಆರ್‌.ಪ್ರಕಾಶ್‌ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿ ಎಂಡಿಎಂಎ ಕ್ರಿಸ್ಟಲ್‌ 350 ಗ್ರಾಂ, 4 ಗ್ರಾಂ ಕೊಕೇನ್‌ ಹಾಗೂ 82 ಎಕ್ಸೆಟ್ಸಿ ಟ್ಯಾಬ್ಲೆಟ್ಸ್‌, 3 ಸಾವಿರ ನಗದು, 7 ಮೊಬೈಲ್‌ಗಳು ಸೇರಿದಂತೆ 20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು.

ಬಳಿಕ ವಿಚಾರಣೆ ವೇಳೆ ಮತ್ತಿಬ್ಬರು ಪೆಡ್ಲರ್‌ಗಳಾದ ನೈಜೀರಿಯಾ ಮೂಲದ ಉಸ್ಮಾನ್‌ ಮಹಮ್ಮದ್‌ ಅಲಿಯಾಸ್‌ ಮೂಸಾ ಹಾಗೂ ಲೊಕೊಂಡೊ ಲೊಂಡ್ಜಾ ಇಮ್ಯುಯಲ್‌ ಪಾತ್ರದ ಕುರಿತು ಸುಳಿವು ಸಿಕ್ಕಿತು. ಅದರ ಅನುಸಾರ ತನಿಖೆ ಶುರು ಮಾಡಿದ ಪೊಲೀಸರು, ಮಾ.4ರಂದು ಗುರುವಾರ ರಾತ್ರಿ ನಾಗರವಾರ ಸಿಗ್ನಲ್‌ ಹತ್ತಿರ ಆ ಇಬ್ಬರು ಇರುವಿಕೆ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದರು. ಆ ವೇಳೆ ಉಸ್ಮಾನ್‌ ತಪ್ಪಿಸಿಕೊಂಡಿದ್ದು, ಇಮ್ಯುಯಲ್‌ ಸಿಕ್ಕಿಬಿದ್ದ. ಬಳಿಕ ಆತನ ಬಳಿ ಎಲ್‌ಎಸ್‌ಡಿ ಸ್ಟ್ರಿಫ್ಸ್‌ 526, ಕೊಕೇನ್‌ 200ಗ್ರಾಂ, ಎಂಡಿಎಂಎ 2710 ಗ್ರಾಂ, 1939 ಎಕ್ಸೈಟ್ಸಿ ಮಾತ್ರೆಗಳು, ಸ್ಕೂಟ್‌, .2.5 ಲಕ್ಷ ನಗದು ಜಪ್ತಿಯಾಯಿತು.

ಪ್ರತ್ಯೇಕವಾಗಿ ಸಿಕ್ಕಿಬಿದ್ದ ವಿದೇಶಿ ಪೆಡ್ಲರ್‌ಗಳಿಂದ ಒಟ್ಟು .3.5 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿಯಾಯಿತು. ಈ ಗ್ಯಾಂಗ್‌ನ ಮುಖ್ಯ ಪೆಡ್ಲರ್‌ ಜಾನ್‌ ಪೆಡ್ಲರ್‌ನನ್ನು ವಿಚಾರಣೆ ನಡೆಸಿದಾಗ ಆತನೊಂದಿಗೆ ಮಸ್ತಾನ್‌ ಹಾಗೂ ಕೇಶವ ನಿಕಟ ಸಂಪರ್ಕದಲ್ಲಿರುವುದು ಗೊತ್ತಾಯಿತು. ಅಂತೆಯೇ ಸಂಜಯನಗರದಲ್ಲಿರುವ ಮಸ್ತಾನ್‌ ಹಾಗೂ ಕೇಶವ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೇಜ್‌ತ್ರಿ ಪಾರ್ಟಿ ಆಯೋಜಕ

ನಗರದ ಪಬ್‌, ಹೋಟೆಲ್‌, ರೆಸಾರ್ಟ್‌ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಪೇಜ್‌ ತ್ರಿ ಪಾರ್ಟಿಗಳನ್ನು ಆಯೋಜಿಸಿ ಮಸ್ತಾನ್‌ ಮಸ್ತಿ ನಡೆಸುತ್ತಿದ್ದ. ಈ ಪಾರ್ಟಿಗಳಿಗೆ ವಿದೇಶಿ ಪೆಡ್ಲರ್‌ಗಳಿಂದ ಡ್ರಗ್ಸ್‌ ಖರೀದಿಸಿ ಪೂರೈಸುತ್ತಿರುವ ಬಗ್ಗೆ ಶಂಕೆ ಇದೆ. ಆತನ ಮೊಬೈಲ್‌ ಜಪ್ತಿ ಮಾಡಲಾಗಿದ್ದು, ಮಸ್ತಾನ್‌ ಸಂಪರ್ಕದಲ್ಲಿ ಚಲನಚಿತ್ರ ನಟಿಯರು, ನಟರು ಹಾಗೂ ಉದ್ಯಮಿಗಳಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದೇಶಿ ಪೆಡ್ಲರ್‌ಗಳ ವಿರುದ್ಧ ಪ್ರಕರಣ

ಪೆಡ್ಲರ್‌ಗಳಾದ ಜಾನ್‌ ಪೆಡ್ಲರ್‌ ಹಾಗೂ ಜಾನ್‌ ನ್ಯಾನ್ಸೋ ಅವರು ಬಿಸಿನೆಸ್‌ ವೀಸಾ ಹಾಗೂ ಇಮ್ಯೂನುಯಲ್‌ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದರು. ಬಳಿಕ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿ ಮಾದಕ ವಸ್ತುಗಳ ಸಾಗಾಣಿಕೆಯಲ್ಲಿ ತೊಡಗಿದ್ದರು. ಈ ಸಂಬಂಧ ಪೆಡ್ಲರ್‌ಗಳ ವಿರುದ್ಧ ಕ್ರಮ ಪ್ರತ್ಯೇಕವಾಗಿ ಫಾರಿನ​ರ್‍ಸ್ ಆಕ್ಟ್ನಡಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಈ ಮೂವರು ವಿದೇಶಿಯರ ಪಾಸ್‌ ಪೋರ್ಟ್‌, ವೀಸಾ ದಾಖಲಾತಿಗಳನ್ನು ಪರಿಶೀಲಿಸದೆ ವಾಸಿಸಲು ಮನೆಯನ್ನು ಬಾಡಿಗೆ ನೀಡಿದ್ದ ಮನೆ ಮಾಲೀಕರ ವಿರುದ್ಧ ಸಹ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!