Crime News: ಪ್ರೀತಿ ನಿರಾಕರಿಸಿದ ಅಪ್ರಾಪ್ತ ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಹಿಂದೆ ಇದೇ ಹುಡುಗಿಯನ್ನು ಅಪಹರಿಸಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಆದರೂ ಬುದ್ಧಿ ಕಲಿಯದೇ ಮತ್ತೆ ಹುಡುಗಿಗೆ ಕಿರುಕುಳ ಕೊಟ್ಟು, ಚಾಕುವಿನಿಂದ ಮಾರಣಾಂತಕ ಹಲ್ಲೆ ಮಾಡಿದ್ದಾನೆ.
16 ವರ್ಷದ ಅಪ್ರಾಪ್ತ ಬಾಲಕಿ ಪ್ರೀತಿ ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ 14 ಬಾರಿ ಚಾಕುವಿನಿಂದ ಚುಚ್ಚಿದ್ದಾನೆ ವಿಕೃತ ವ್ಯಕ್ತಿ. ಈ ಘಟನೆ ತಮಿಳುನಾಡಿನ ತಿರುಚಿಯಲ್ಲಿ ನಡೆದಿದ್ದು, ಆರೋಪಿ ಕೇಶವನ್ (22) ಎಂದು ಗುರುತಿಸಲಾಗಿದೆ. ಇದೇ ಯುವತಿಯನ್ನು ಈ ಹಿಂದೆ ಅಪಹರಣ ಮಾಡಿ ಕೇಶವನ್ ಪೀಡಿಸಿದ್ದ. ನಂತರ ಆತನ ಮೇಲೆ ಪೋಕ್ಸೊ (Prevention of Children from Sexual Offences Act) ಪ್ರಕರಣ ಕೂಡ ದಾಖಲಾಗಿತ್ತು. ಇತ್ತೀಚೆಗಷ್ಟೆ ಕೇಶವನ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆಚೆ ಬಂದವನು ಮತ್ತೆ ಹುಡುಗಿಯನ್ನು ಪ್ರೀತಿಸುವಂತೆ ಪೀಡಿಸಿದ್ದಾನೆ. ಹುಡುಗಿ ಸಾಧ್ಯವಿಲ್ಲ ಎಂದ ತಕ್ಷಣ ಕೋಪದಿಂದ ಹದಿನಾಲ್ಕು ಬಾರಿ ಆಕೆಗೆ ಚುಚ್ಚಿ ಸ್ಥಳದಿಂದ ಓಡಿಹೋಗಿದ್ದಾನೆ. ನಂತರ ಆತ ಕೂಡ ರೈಲಿಗೆ ಅಡ್ಡ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆ ತಮಿಳುನಾಡಿನ ತಿರುಚಿಯ ಅತಿಕುಲಮ್ ನಿವಾಸಿ. 11ನೇ ತರಗತಿಯಲ್ಲಿ ಆಕೆ ಓದುತ್ತಿದ್ದಾಳೆ. ಪರೀಕ್ಷೆ ಮುಗಿಸಿಕೊಂಡು ಸಂಬಂಧಿಯೊಬ್ಬರ ಮನೆಗೆ ಹೋಗುತ್ತಿದ್ದ ವೇಳೆ ಕೇಶವನ್ ದಾರಿ ಮದ್ಯದಲ್ಲಿ ಅಡ್ಡಗಟ್ಟಿದ್ದಾನೆ. ನಂತರ ಮತ್ತೆ ಪ್ರೇಮ ನಿವೇದನೆ ಮಾಡಿದ್ದಾನೆ. ಹುಡುಗಿ ಸುತಾರಾಂ ಒಪ್ಪದಿದ್ದಾಗ ಚಾಕುವಿನಿಂದ ಇರಿದಿದ್ದಾನೆ. ನೆರೆಹೊರೆಯವರ ಹೇಳಿಕೆಯ ಪ್ರಕಾರ ಕೇಶವನ್ ಕೆಲ ದಿನಗಳಿಂದ ಹುಡುಗಿಯನ್ನು ಫಾಲೋ ಮಾಡುತ್ತಿದ್ದ. ಈ ಹಿಂದೆ ಇದೇ ಹುಡುಗಿಯನ್ನು 2021ರಲ್ಲಿ ಅಪಹರಣ ಮಾಡಿದ್ದ. ಆಗಲೂ ಪ್ರೀತಿಸುವಂತೆ ಕಿರುಕುಳ ಕೊಡುವ ಸಲುವಾಗಿಯೇ ಅಪಹರಿಸಿದ್ದ. ಆದರೆ ಅದೃಷ್ಟವಶಾತ್ ಪೊಲೀಸರು ಕೇಶವನ್‌ನನ್ನು ಬಂಧಿಸಿ ಹುಡುಗಿಯನ್ನು ಸುರಕ್ಷಿತವಾಗಿ ಕರೆತಂದಿದ್ದರು. ಆದರೆ ವಿಧಿಯ ವಿಪರ್ಯಾಸ, ಜೈಲಿನಿಂದ ಆಚೆ ಬಂದವ ಕೊಂಚವೂ ಬುದ್ಧಿ ಕಲಿತಿರಲಿಲ್ಲ. ಹುಡುಗಿಯನ್ನು ಮತ್ತೆ ಪೀಡಿಸಿ ಈ ಬಾರಿ ಕೊಲೆ ಮಾಡಲೇ ಮುಂದಾಗಿಬಿಟ್ಟ.
ಇದನ್ನೂ ಓದಿ: YADGIR CRIME: 20 ವರ್ಷದಿಂದ ಹೆಂಡತಿ, ಮಕ್ಕಳನ್ನು ದೂರವಿಟ್ಟ ತಂದೆಯನ್ನೇ ಕೊಂದ ಮಗ..!
ಹುಡುಗಿ ಸಹಾಯಕ್ಕಾಗಿ ಕಿರುಚುವ ಮೊದಲೇ 14 ಬಾರಿ ಚುಚ್ಚಿ ಪರಾರಿಯಾಗಿದ್ದ. ಅಲ್ಲೇ ಹೋಗುತ್ತಿದ್ದ ವಾಹನ ಸವಾರರೊಬ್ಬರು ನೋಡಿ ಸ್ಥಳಕ್ಕೆ ಧಾವಿಸಿದಾಗ ಹುಡುಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹುಡುಗಿಯ ಪರಿಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ನಂತರ ಪೊಲೀಸರಿಗೆ ಆಸ್ಪತ್ರೆಯಿಂದ ಮಾಹಿತಿ ಹೋದ ತಕ್ಷಣ ಆರೋಪಿಯ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಆದರೆ ಕೇಶವನ್ ಪತ್ತೆಯೇ ಆಗಿರಲಿಲ್ಲ.
ನಂತರ ರೈಲ್ವೇ ಟ್ರಾಕ್‌ನಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂತು. ಅಲ್ಲಿಗೆ ಹೋದಾಗ ಸ್ಥಳದಲ್ಲಿ ಫೋನ್ ಒಂದು ಸಿಕ್ಕಿತ್ತು. ಮೃತದೇಹ ಪತ್ತೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಕಾರಣ, ಮೊಬೈಲ್ ಯಾರ ಹೆಸರಿನಲ್ಲಿದೆ ಎಂದು ಪೊಲೀಸರು ಪರಿಶೀಲನೆ ನಡೆಸಿದರು. ಮೊಬೈಲ್ ಕೇಶವನ್‌ನ ತಂದೆಯ ಹೆಸರಲ್ಲಿತ್ತು. ಕೇಶವನ್ ತಂದೆಯನ್ನು ಮೃತದೇಹ ಪತ್ತೆಹಚ್ಚಲು ಕರೆಸಲಾಯಿತು. ತಂದೆ ಮೃತದೇಹ ಕೇಶವನ್‌ದು ಎಂದು ಗುರುತು ಹಿಡಿದರು, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪತ್ನಿಯ ಅಶ್ಲೀಲ ವಿಡಿಯೋ ಮಾವನಿಗೆ ಕಳಿಸಿದ ಟೆಕ್ಕಿ
ಈ ಬಗ್ಗೆ ಕಾಂಗ್ರೆಸ್ ಸಂಸದೆ ಜೋತಿಮಣಿ ಪ್ರತಿಕ್ರಿಯಿಸಿದ್ದು ಘಟನೆಯನ್ನು ಖಂಡಿಸಿದ್ದಾರೆ. "ಈ ರೀತಿಯ ದರಂತ ಘಟನೆ ನಡೆದಾಗ ಎಲ್ಲರೂ ದುಖಃ ಪಡುತ್ತೀವಿ. ಅದಾದ ನಂತರ ಮತ್ತೆ ಇಂತದ್ದೇ ಘಟನೆ ಮರುಕಳಿಸುತ್ತದೆ. ದೇಶದಲ್ಲಿ ಈ ರೀತಿಯ ಘಟನೆಗಳು ಹೆಚ್ಚುತ್ತಲೇ ಇವೆ. ಗಂಡಿನ ಮನಸ್ಥಿತಿಯ ಪ್ರಕಾರ ಹೆಣ್ಣು ಆತ ಹೇಳಿದಂತೆ ಕೇಳಬೇಕು. ಆಕೆಯ ದೇಹ, ಮನಸ್ಸು ಎಲ್ಲವೂ ಗಂಡಸಿನ ಇಚ್ಚೆಗೆ ತಕ್ಕಂತೆ ಇರಬೇಕು. ಇಲ್ಲದಿದ್ದರೆ ಆಕೆಯ ಮೇಲೆ ಈ ರೀತಿಯ ಕೃತ್ಯ ನಡೆಸಲಾಗುತ್ತದೆ," ಎಂದು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.