ಅನ್ಯಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ಉಪ್ಪಾರ ಸಮುದಾಯದವರು ಯುವಕನ ಮನೆಗೆ ನುಗ್ಗಿ ಹಲ್ಲೆ ನಡೆಸಿರೋ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು (ಜ.27): ಅನ್ಯಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ಉಪ್ಪಾರ ಸಮುದಾಯದವರು ಯುವಕನ ಮನೆಗೆ ನುಗ್ಗಿ ಹಲ್ಲೆ ನಡೆಸಿರೋ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಗ್ರಾಮದಲ್ಲಿ ನಡೆದಿದೆ.
ಹುಡುಗ ಉಪ್ಪಾರ ಸಮುದಾಯಕ್ಕೆ ಸೇರಿದವನು, ಹುಡುಗಿ ಎಸ್ಟಿ ಸಮುದಾಯಕ್ಕೆ ಸೇರಿದವಳು. ಇಬ್ಬರೂ ಜಾತಿ ಮೀರಿ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ಕಡೆಯ ಮನೆಯವರನ್ನು ಒಪ್ಪಿಸಿ 2021ರ ಮಾರ್ಚ್ 24ರಂದು ಪ್ರೇಮ ವಿವಾಹವಾಗಿದ್ದ ಜೋಡಿಗಳು.
ಅಂತರ್ಜಾತಿ ಮದುವೆಗೆ ಪೋಷಕರ ವಿರೋಧ; ಸಿನಿಮೀಯ ರೀತಿ ಕಾರಿನಲ್ಲಿ ವಿವಾಹವಾದ ಜೋಡಿಹಕ್ಕಿ!
ಆದರೆ ಹುಡುಗನ ಚಿಕ್ಕಪ್ಪ, ಉಪ್ಪಾರು ಸಮುದಾಯದ ಮುಖಂಡರು, ಗೌಡರು ಇದರಿಂದ ಯುವಕನ ಮೇಲೆ ರೊಚ್ಚಿಗೆದ್ದಿದ್ದರು. ಕೆಳವರ್ಗ ಯುವತಿಯನ್ನು ಮದುವೆಯಾಗಿ ನಮ್ಮ ಜಾತಿಯ ಮರ್ಯಾದೆ ಮೂರಾಬಟ್ಟೆ ಮಾಡಿದೆ ಎಂದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
2024ರ ಜನವರಿ 24ರಂದು ರಾತ್ರಿ ಯುವಕನ ಮನೆಗೆ ನುಗ್ಗಿದ ಉಪ್ಪಾರು ಸಮುದಾಯದವರು, ಗೌಡರು 'ಜಾತಿ ಮರ್ಯಾದೆ ಕಳೆದೆ' ಎಂದು ಮನೆಯೊಳಗಿದ್ದ ಯುವಕನನ್ನು ಹೊರಗೆಳೆದು ಬಟ್ಟೆ ಬಿಚ್ಚಿಸಿ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಸಾಲದ್ದಕ್ಕೆ ಪತ್ನಿ ಸೌಂದರ್ಯ ಮೇಲೂ ಹಲ್ಲೆ ನಡೆಸಿರುವ ದುರುಳರು.
2021ರಿಂದಲೂ ದಂಪತಿಗೆ ಮಾನಸಿಕ ಕಿರುಕುಳ ನೀಡ್ತಿರೋ ಉಪ್ಪಾರ ಸಮಾಜದವರು. ಪ್ರೇಮ ವಿವಾಹವಾದ ಜೋಡಿಗೆ ದೊಡ್ಡಪ್ಪ-ಚಿಕ್ಕಪ್ಪನೇ ವಿಲನ್ ಆಗಿ ಪರಿಣಮಿಸಿದ್ದಾನೆ. ಈ ಜೋಡಿಯನ್ನು ಮನೆಯಿಂದ ಹೊರಹಾಕುವ ಸಂಚು ಮಾಡಿರುವ ಚಿಕ್ಕಪ್ಪ. ಈ ಹಿಂದೆಯೂ ಯುವಕನ ಮೇಲೆ ಹಲ್ಲೆ ನಡೆಸಿ ಉಪ್ಪಾರು ಸಮುದಾಯ ಬಹಿಷ್ಕಾರ ಹಾಕಿತ್ತು. ಇದೀಗ ಮತ್ತೆ ಮನೆಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಪ್ರೇಮಿಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ; ಯುವಕನ ಪೋಷಕರ ಮೇಲೆ ಹುಡುಗಿಯ ಮಾವಂದಿರು ಹಲ್ಲೆ!
ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ದಂಪತಿಗಳಿಗೆ ರಕ್ಷಣೆ ನೀಡಬೇಕು. ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.