ಸ್ಯಾಂಟ್ರೋ ಕೇಸ್‌: ವಿಚಾರಣೆಗಾಗಿ 5 ತಾಸು ಕಾದ ಇನ್‌ಸ್ಪೆಕ್ಟರ್‌ ವಾಪಸ್‌

By Kannadaprabha NewsFirst Published Jan 28, 2023, 8:41 AM IST
Highlights

ಮೂರು ತಿಂಗಳ ಹಿಂದೆ ಕಾಟನ್‌ಪೇಟೆ ಠಾಣೆಯಲ್ಲಿ ರವಿ ಜತೆ ಶಾಮೀಲಾಗಿ ಆತನ ಪತ್ನಿ ಹಾಗೂ ನಾದಿನಿ ವಿರುದ್ಧ ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ ಆರೋಪಕ್ಕೆ ಇನ್‌ಸ್ಪೆಕ್ಟರ್‌ ಪ್ರವೀಣ್‌ ತುತ್ತಾಗಿದ್ದು, ಇದೇ ಆಪಾದನೆಗೆ ಮೇರೆಗೆ ಅವರು ಅಮಾನತುಗೊಂಡಿದ್ದಾರೆ. 

ಬೆಂಗಳೂರು(ಜ.28):  ವಂಚಕ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ದರೋಡೆ ಪ್ರಕರಣ ಸಂಬಂಧ ಇನ್‌ಸ್ಪೆಕ್ಟರ್‌ ಪ್ರವೀಣ್‌ಗೆ ಐದು ತಾಸು ಕಾಯಿಸಿ ಶುಕ್ರವಾರ ವಿಚಾರಣೆ ನಡೆಸದೆ ಸಿಸಿಬಿ ಅಧಿಕಾರಿಗಳು ಕಳುಹಿಸಿದ ಪ್ರಸಂಗ ನಡೆದಿದ್ದು, ಮತ್ತೆ ಸೋಮವಾರ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದೆ.

ನೋಟಿಸ್‌ ಹಿನ್ನೆಲೆಯಲ್ಲಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಮಧ್ಯಾಹ್ನ 1ಕ್ಕೆ ವಿಚಾರಣೆ ಸಲುವಾಗಿ ಇನ್‌ಸ್ಪೆಕ್ಟರ್‌ ಪ್ರವೀಣ್‌ ಆಗಮಿಸಿದ್ದರು. ಆದರೆ ಆ ವೇಳೆ ಕೆಲಸದ ನಿಮಿತ್ತ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಹೊರ ಹೋಗಿದ್ದರು. ಹೀಗಾಗಿ ಐದು ತಾಸು ಕಾದು ವಿಚಾರಣೆ ಇಲ್ಲದೆ ಪ್ರವೀಣ್‌ ಮರಳಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕಾರಿ ಜತೆ ಸಂಬಂಧಕ್ಕೆ ಪತ್ನಿಗೆ ಸ್ಯಾಂಟ್ರೋ ಒತ್ತಡ..!

ಮೂರು ತಿಂಗಳ ಹಿಂದೆ ಕಾಟನ್‌ಪೇಟೆ ಠಾಣೆಯಲ್ಲಿ ರವಿ ಜತೆ ಶಾಮೀಲಾಗಿ ಆತನ ಪತ್ನಿ ಹಾಗೂ ನಾದಿನಿ ವಿರುದ್ಧ ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ ಆರೋಪಕ್ಕೆ ಇನ್‌ಸ್ಪೆಕ್ಟರ್‌ ಪ್ರವೀಣ್‌ ತುತ್ತಾಗಿದ್ದು, ಇದೇ ಆಪಾದನೆಗೆ ಮೇರೆಗೆ ಅವರು ಅಮಾನತುಗೊಂಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಎಸಿಪಿ ಧರ್ಮೇಂದ್ರ ಅವರು, ವಿಚಾರಣೆಗೆ ಹಾಜರಾಗುವಂತೆ ಪ್ರವೀಣ್‌ಗೆ ನೋಟಿಸ್‌ ನೀಡಿದ್ದರು. ಆದರೆ ಹಳೇ ಪ್ರಕರಣ ಸಂಬಂಧ ಹೈಕೋರ್ಟ್‌ಗೆ ಧರ್ಮೇಂದ್ರ ತೆರಳಿದ್ದರು. ಹೀಗಾಗಿ ತನಿಖಾಧಿಕಾರಿ ಲಭ್ಯವಿಲ್ಲದೆ ಸಂಜೆವರೆಗೆ ಸಿಸಿಬಿ ಕಚೇರಿಯಲ್ಲೇ ಪ್ರವೀಣ್‌ ಕಾಯುತ್ತಾ ಕುಳಿತಿದ್ದರು. ನಂತರ ಸಂಜೆ 5.30ಕ್ಕೆ ಕೋರ್ಟ್‌ ಕೆಲಸ ಮುಗಿಸಿ ಸಿಸಿಬಿ ಕಚೇರಿಗೆ ಮರಳಿದ ಎಸಿಪಿ ಅವರು, ಸೋಮವಾರ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಇನ್‌ಸ್ಪೆಕ್ಟರ್‌ ಪ್ರವೀಣ್‌ ಅವರನ್ನು ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

click me!