ಹೊಸ ಕಾರ್ ಖರೀದಿಸಿ ಅದನ್ನು ರೋಡ್‌ಗೆ ಇಳಿಸಿದ ಮಹಿಳೆ, ಕಾರ್‌ನ ಬ್ರೇಕ್ ಒತ್ತುವ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮವಾಗಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ಹೈದರಾಬಾದ್ (ಮೇ.5): ಆಕೆ ಸಾಫ್ಟ್‌ವೇರ್ ಇಂಜಿನಿಯರ್. ಇತ್ತೀಚೆಗೆ ಹೊಸ ಕಾರ್ ಕೂಡ ಖರೀದಿಸಿದ ಸಂಭ್ರಮದಲ್ಲಿದ್ದಳು. ಕಾರ್‌ನ ನಂಬರ್ ಕೂಡ ನೋಂದಣಿಯಾಗಿರಲಿಲ್ಲ. ಆದರೆ, ರಸ್ತೆಯಲ್ಲಿ ಕಾರ್ ತೆಗೆದುಕೊಂಡು ಹೋಗುವಾಗ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮವಾಗಿ ಹೊಸ ಕಾರ್ ಫುಡ್ ಡೆಲಿವರಿ ಏಜೆಂಟ್‌ನ ಮೇಲೆ ಹರಿದಿದ್ದು, ವ್ಯಕ್ತಿ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಕಳೆದ ಬುಧವಾರ ರಾತ್ರಿ ಹೈದರಾಬಾದ್‌ನ ಅಲ್ವಾಲ್‌ನ ಡೈರಿ ಫಾರ್ಮ್ ರಸ್ತೆಯಲ್ಲಿ ನಡೆದಿದೆ. ಕಾರು ನೋಂದಣಿಯಾಗಿರದೇ ಇದ್ದರೂ, ಈ ಕೃತ್ಯ ಮಾಡಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶೀವಾಲಿ ಅಲ್ಲಾಡಿ ಎಂದು ಪೊಲೀಸರು ಗುರುತಿಸಿದ್ದಾರೆ. ನಗರದ ಕಣಜಿಗುಡಾ ನಿವಾಸಿ ಮತ್ತು ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿರುವ ಶಿವಾನಿ, ಫುಡ್ ಡೆಲಿವರಿ ಏಜೆಂಟ್, ತಳ್ಳುವ ಗಾಡಿ ಸೇರಿದಂತೆ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಕಾರ್‌ಅನ್ನು ಡಿಕ್ಕಿ ಹೊಡೆದಿದ್ದಾರೆ. ಘಟನೆ ನಡೆದ ಬೆನ್ನಲ್ಲಿಯೇ ಆಕೆ ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರ್‌ನ ಮೇಲಿದ್ದ ತಾತ್ಕಾಲಿಕ ನೋಂದಣಿ ನಂಬರ್‌ನಿಂದ ಪೊಲೀಸರು ಶಿವಾನಿಯನ್ನು ಪತ್ತೆ ಮಾಡಿದ್ದಾರೆ. ಶಿವಾಲಿ ಅಲ್ಲಾಡಿಯ ಬಳಿ ಡ್ರೈವಿಂಗ್ ಲೈಸೆನ್ಸ್ ಇತ್ತು ಎಂದೂ ಪೊಲೀಸರು ತಿಳಿಸಿದ್ದು, ಆಕೆಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಇನ್ನು ಸಾವು ಕಂಡ ವ್ಯಕ್ತಿಯನ್ನು 30 ವರ್ಷದ ರಸ್ತಾಪುರಂ ರಾಜು ಎಂದು ಪೊಲೀಸರು ಗುರುತಿಸಿದ್ದಾರೆ. 30 ವರ್ಷದ ರಾಜು ಅವರು ಪತ್ನಿ ಮತ್ತು ಇಬ್ಬರು ಮಕ್ಕಳು, ಐದು ವರ್ಷದ ಮಗಳು ಮತ್ತು ಎರಡು ವರ್ಷದ ಮಗನನ್ನು ಅಗಲಿದ್ದಾರೆ ಮತ್ತು ಕುಟುಂಬದ ಏಕೈಕ ಆಧಾರವಾಗಿದ್ದರು. ಪತ್ನಿ ಸೋನಿಯನ್ನು ಶಿಕ್ಷಕಿ ಮಾಡಬೇಕು ಎಂದು ಬಯಸಿದ್ದ ರಾಜು, ತನಗೆ ಬರುತ್ತಿದ್ದ ಅಲ್ಪ ಸಂಬಳದಲ್ಲಿಯೇ ಆಕೆಯ ಬಿಇಡಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
ಶಿವಾನಿ ತನ್ನ ಕಾರ್‌ನ ನಿಯಂತ್ರಣ ಕಳೆದುಕೊಂಡು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಆ ನಂತರ ಕಾರ್‌ಅನ್ನು ಎಡಕ್ಕೆ ತಿರುಗಿಸಿಕೊಂಡು ರಾಜುವಿನ ಬೈಕ್ ಹಾಗೂ ತಳ್ಳುವ ಗಾಡಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ರಸ್ತೆಯಿಂದ ಹೊರಗಡೆ ಹೋದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಲ್ವಾಲ್ ಪೊಲೀಸರು ತಿಳಿಸಿದ್ದಾರೆ. ಘಟನೆಯ ವೇಳೆ ಆಕೆ ಮದ್ಯ ಸೇವಿಸಿದ್ದಳು ಎಂದು ಕುಟುಂಬಸ್ಥರು ಶಂಕಿಸಿದ್ದು, ಪೊಲೀಸರು ಕಠಿಣ ಕ್ರಮಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಿಕಂದರಾಬಾದ್‌ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಮೊದಲು ಕೆಲಸ ಮಾಡುತ್ತಿದ್ದ ರಾಜು, ಎರಡು ವರ್ಷಗಳ ಹಿಂದೆಯಷ್ಟೇ ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಆರಂಭಿಸಿದ್ದ. ಬೆಳಗ್ಗೆಯೇ ಮನೆ ತೊರೆದು ಕೆಲಸಕ್ಕೆ ಹೋಗುತ್ತಿದ್ದ ರಾಜು ಮಧ್ಯಾಹ್ನದ ಊಟಕ್ಕ ಮನೆಗೆ ಬರುತ್ತಿತ್ತು. ಬಳಿಕ ಸಂಜೆಯ ವೇಳೆಗೆ ಕೆಲಸಕ್ಕೆ ತೆರಳುತ್ತಿದ್ದ ರಾಜು, ಮಧ್ಯರಾತ್ರಿಯ ವೇಳೆಗೆ ಮನೆಗೆ ವಾಪಸಾಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನಟ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣ, ಸಿಸಿಬಿಯಿಂದ ಆಪ್ತನ ಬಂಧನ!
ಬುಧವಾರ ಮಧ್ಯರಾತ್ರಿ ಬಹಳ ಸಮಯವಾದರೂ ರಾಜು ಮನೆಗೆ ಹಿಂತಿರುಗದ ಕಾರಣ, ಪತ್ನಿ ಸೋನಿ ಪದೇ ಪದೇ ರಾಜುವಿಗೆ ಕರೆ ಮಾಡಿದ್ದಾರೆ. ಆದರೆ, ಯಾವುದಕ್ಕೂ ಉತ್ತರ ಬಂದಿರಲಿಲ್ಲ. ಗುರುವಾರ ಬೆಳಗ್ಗೆಯಾದರೂ ರಾಜು ಮನೆಗೆ ಬರದ ಕಾರಣ, ರಾಜುವಿನ ಅಣ್ಣ ಅಶೋಕ್ ಹಾಗೂ ಬಾಲ್ಯದ ಗೆಳೆಯ ಬಾಬುವಿಗೆ ಸೋನಿ ಮಾಹಿತಿ ನೀಡಿದ್ದರು.
ಉತ್ತರಪ್ರದೇಶ: ಸಿಎಂ ಯೋಗಿ ಆಡಳಿತದಲ್ಲಿ ಒಟ್ಟು 10900 ಎನ್‌ಕೌಂಟರ್!
"ನಾನು ಆತನಿಗೆ ಕರೆ ಮಾಡಲು ಪ್ರಯತ್ನಿಸಿದೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಾವು ಬೇಗಂಪೇಟೆಯಲ್ಲಿರುವ ಡೆಲಿವರಿ ಕಚೇರಿಗೆ ತೆರಳಿದಾಗ, ಅಪಘಾತದ ಬಗ್ಗೆ ಪೊಲೀಸರಿಂದ ನಮಗೆ ಮಾಹಿತಿ ಸಿಕ್ಕಿತು" ಎಂದು ಅಶೋಕ್ ಹೇಳಿದರು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂದು ರಾಜು ಕನಸು ಕಾಣುತ್ತಿದ್ದ ಎಂದು ಬಾಬು ಹೇಳಿದ್ದಾರೆ. 'ಸರಿಯಾದ ವಿಶ್ರಾಂತಿ ತೆಗೆದುಕೊಳ್ಳದೆ ಆತ ಕೆಲಸ ಮಾಡುತ್ತಿದ್ದ. ಅದಲ್ಲದೆ, ಪ್ರದೇಶದಲ್ಲಿ ಯಾವುದೇ ಕೆಲಸವಾದರೂ ಮುಂದೆ ನಿಲ್ಲುತ್ತಿದ್ದ' ಎಂದು ಬಾಬು ಹೇಳಿದ್ದಾರೆ.