ಚಾಮರಾಜನಗರದಲ್ಲಿ ರೀಲ್ಸ್ ಹುಚ್ಚಿನಿಂದ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಮಮತಾ ರೀಲ್ಸ್ ಗಾಗಿ ಶೋಕಿ ಜೀವನ ನಡೆಸುತ್ತಿದ್ದಳು ಮತ್ತು ಗಂಡನಿಗೆ ಕಿರುಕುಳ ನೀಡುತ್ತಿದ್ದಳು.
ಚಾಮರಾಜನಗರ (ಮಾ.16): ಗಂಡನಿಂದ ವರದಕ್ಷಿಣೆ ಕಿರುಕುಳ, ಅತ್ತೆಯಿಂದ ಮಾನಸಿಕ ಹಿಂಸೆಗೆ ಗೃಹಿಣಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆ ದಿನನಿತ್ಯ ಪತ್ರಿಕೆಯ ಎರಡನೇ ಪುಟದಲ್ಲಿ ಕಾಯಂ ಪ್ರಕಟವಾಗುತ್ತಿರುವುದು ಓದಿಯೇ ಇರುತ್ತೀರಿ. ಆದರೆ ಇಲ್ಲೊಂದು ಪ್ರಕರಣ ಇದಕ್ಕೆ ತದ್ವಿರುದ್ಧ ಮತ್ತು ವಿಚಿತ್ರವಾಗಿದೆ. ಇಲ್ಲಿ ಕಿರುಕುಳಕ್ಕೆ ಒಳಗಾಗಿದ್ದು ಪತ್ನಿಯಲ್ಲ, ಪತಿ!
ಹೌದು, ಪತ್ನಿಯ ಕಿರುಕುಳಕ್ಕೆ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಪರಶಿವ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಮತಾ, ಪತಿಗೆ ಕಿರುಕುಳ ನೀಡುತ್ತಿದ್ದ ಪತ್ನಿ.
ಇದನ್ನೂ ಓದಿ: ಹೆಂಡತಿಗೆ ಹೌದಪ್ಪ ಅನ್ನೋ ಬದಲು 'ದಪ್ಪ' ಎಂದ ಗಂಡ, ಪೊಲೀಸ್ ಕೇಸ್!
ರೀಲ್ಸ್ ರಾಣಿ ಪತ್ನಿ ಮಮತಾ:
ರೀಲ್ಸ್ ಗೀಳಿಗೆ ಬಿದ್ದಿದ್ದ ಪತ್ನಿ ಮಮತಾ ಮೂರು ಹೊತ್ತು ಸಂಸಾರ ಬಿಟ್ಟು ರೀಲ್ಸ್ ಗಾಗಿ ಶೋಕಿ ಜೀವನ ನಡೆಸುತ್ತಿದ್ದ ಐನಾತಿ. ಗಂಡನ ಜೊತೆಗೆ ವಿಡಿಯೋ ಮಾಡೋದಕ್ಕೆ ಗಂಡ ಚೆನ್ನಾಗಿಲ್ಲ. ಇದೇ ಕಾರಣಕ್ಕೆ ಗಂಡನಿಗೆ ಕಿರುಕುಳ. ನೀನು ಚೆನ್ನಾಗಿಲ್ಲ, ನನಗೆ ಸರಿಯಾದ ಜೋಡಿಯಲ್ಲ ಅಂತಾ ಎಲ್ಲರೆದುರು ಅವಮಾನ ಮಾಡುತ್ತಿದ್ದ ರೀಲ್ಸ್ ರಾಣಿ ಮಮತಾ. ಇದು ಸಾಲದ್ದಕ್ಕೆ ರೀಲ್ಸ್ ಹುಚ್ಚು ಹತ್ತಿಸಿಕೊಂಡು ಹೈಫೈ ಜೀವನ ಮಾಡಲು ಶೋಕಿವಾಲೆಯಾಗಿದ್ದ ಐನಾತಿ. ದಿನನಿತ್ಯ ಬ್ರಾಂಡೆಡ್ ಬಟ್ಟೆ, ಅಭರಣ ಕೊಡಿಸುವಂತೆ, ಬೇರೆ ಮನೆ ಮಾಡುವಂತೆ ಬಡ ಗಂಡನಿಗೆ ಬೇಡಿಕೆ ಇಡಲು ಶುರುಮಾಡಿದ್ದಾಳೆ. ಇದೆಲ್ಲ ಕೊಡಿಸಲಾಗಲ್ಲ, ಹಣವಿಲ್ಲ ಎಂದಿದ್ದ ಪತಿಗೆ ಸುಳ್ಳು ವರದಕ್ಷಿಣೆ ಕೇಸ್ ಹಾಕಿ ಜೈಲಿಗೆ ಕಳಿಸುತ್ತೇನೆ ಎಂದೂ ಬೆದರಿಕೆ ಹಾಕಿದ್ದಳಂತೆ. ಇದರಿಂದ ಬೇಸತ್ತ ಪತಿ ಪರಶಿವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಪ್ರಕರಣ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.